ಉಪ್ಪಿನಂಗಡಿ : ಜೂ 10 : ಮಗುವಿನ ಆರೋಗ್ಯ ಸಮಸ್ಯೆಯನ್ನು ಮಂತ್ರದ ಮೂಲಕ ಪರಿಹರಿಸುವುದಾಗಿ ಬಂದ ಮಂತ್ರವಾದಿ ಮತ್ತು ಆತನ ಸಹಚರನಿಗೆ ಯುವಕರ ತಂಡವೊಂದು ಗೂಸಾ ನೀಡಿರುವ ಘಟನೆ ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ವಳಾಲು ಎಂಬಲ್ಲಿ ಕೆಲ ದಿನಗಳ ಹಿಂದೆ ನಡೆದಿದೆ ಎನ್ನಲಾಗಿದೆ. ಈ ಕುರಿತ ವಿಡಿಯೋವೊಂದು ಸಾಮಾಜಿಕ ಜಾಲತಾಣ ವೈರಲ್ ಆಗಿದೆ.
ಉಫ್ಪಿನಂಗಡಿ ಸಮೀಪದ ವಳಾಲು ಎಂಬಲ್ಲಿನ ಮುಸ್ಲಿಂ ಕುಟುಂಬವೊಂದರ ಮಗುವಿಗೆ ಅನಾರೋಗ್ಯ ಸಮಸ್ಯೆಕಾಡುತಿತ್ತು . ಕಡಬ ತಾಲೂಕಿನ ಕೋಡಿಂಬಾಳದ ಮಂತ್ರವಾದಿಗಳೆಂದು ಹೇಳಿಕೊಂಡ ಇಬ್ಬರು ಈ ಆರೋಗ್ಯ ಸಮಸ್ಯೆಯನ್ನು ಮಂತ್ರದ ಮೂಲಕ ಪರಿಹರಿಸುವುದಾಗಿ ಆ ಕುಟುಂಬವನ್ನು ಸಂಪರ್ಕಿಸಿ ತಿಳಿಸಿದ್ದಾರೆ . ಈ ಹಿನ್ನಲೆಯಲ್ಲಿ ಮಗುವಿನ ಮನೆಯವರು ಮನೆಗೆ ಬಂದು ಪರಿಹರಿಸುವಂತೆ ಅವರಲ್ಲಿ ಕೇಳಿಕೊಂಡಿದ್ದಾರೆ. ಅದರಂತೆ ವಾರದ ಹಿಂದೆ ಕೋಡಿಂಬಾಳದ ಮಂತ್ರವಾದಿ ಹಾಗೂ ಆತನ ಸಹಚರರು ವಳಾಲಿನ ಮಗುವಿದ್ದ ಮನೆಗೆ ಬಂದಿದ್ದಾರೆ. ಮಗುವಿನ ದೋಷ ಪರಿಹಾರಕ್ಕಾಗಿ ಮಂತ್ರಿಸಿದ ನೂಲು ಕಟ್ಟುವುದಾಗಿ ತಿಳಿಸಿದ ಅವರು ಮನೆಯವರ ಮುಂದೆ ನೂಲು ಮಂತ್ರಿಸಲು ಮುಂದಾಗಿದ್ದಾರೆ.
ಈ ವೇಳೆ ಅಲ್ಲಿಗೆ ಒಬ್ಬರಿಗೆ ಮಂತ್ರವಾದಿ ಹಾಗೂ ಸಹಚರರನ್ನು ತಾನೂ ಈ ಹಿಂದೆ ಎಲ್ಲೋ ನೋಡಿರುವ ಬಗ್ಗೆ ಸಂಶಯ ಉಂಟಾಗಿದ್ದು, ಅವರಿಬ್ಬರು ಕಡಬ ಭಾಗದಲ್ಲಿ ಗುಜರಿ ಇತ್ಯಾದಿ ವಸ್ತುಗಳನ್ನು ಹೆಕ್ಕುವ ಹಾಗೂ ಅದೇ ರೀತಿಯ ಇನ್ನಿತರ ಚಟುವಟಿಕೆಗಳನ್ನು ಮಾಡುತ್ತಿದ್ದ ವ್ಯಕ್ತಿಗಳು ಎನ್ನುವ ಶಂಕೆ ಮೂಡಿದೆ. ಈ ಹಿನ್ನಲೆಯಲ್ಲಿ ಆತ ಮನೆಯ ಇತರ ಸದಸ್ಯರ ಜತೆ ಸೇರಿ ಮಂತ್ರವಾದಿಯ ಪೂರ್ವಾಪರ ವಿಚಾರಿಸಲು ತೊಡಗಿದ್ದಾರೆ ಎನ್ನಲಾಗಿದೆ. ಈ ವೇಳೆ ಮಂತ್ಸರವಾದಿ ಹಾಗೂ ಆತನ ಸಹಚರ ಸಮರ್ಪಕ ಉತ್ತರ ನೀಡಲಾಗದೆ ತಬ್ಬಿಬ್ಬಾಗಿದ್ದಾರೆ.
ಮೂಲಗಳ ಪ್ರಕಾರ ಬಳಿಕ ಅವರಿಬ್ಬರನ್ನು ಯುವಕರ ತಂಡ ಪೊಲೀಸರಿಗೆ ಒಪ್ಪಿದೆ. ನಕಲಿ ಮಂತ್ರವಾದಿ ಹಾಗೂ ಅವರನ್ನು ಮನೆಗೆ ಕರೆಸಿಕೊಂಡ ಕುಟುಂಬವೂ ಒಂದೇ ಸಮುದಾಯಕ್ಕೆ ಸೇರಿದವರಾಗಿದ್ದು ಸುದೀರ್ಘ ಮಾತುಕತೆ ಮೂಲಕ ಪ್ರಕರಣವನ್ನು ಠಾಣೆಯಲ್ಲಿ ಇತ್ಯಾರ್ಥ ಪಡಿಸಿರುವುದಾಗಿ ತಿಳಿದು ಬಂದಿದೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಮಂತ್ರವಾದಿ ಹಾಗೂ ಯುವಕರ ತಂಡದ ನಡುವೆ ಮಾತಿಗೆ ಮಾತು ಬೆಳೆಯುವ ಹಾಗೂ ಮಂತ್ರವಾದದ ಹೆಸರಿನಲ್ಲಿ ನಡೆಸುತ್ತಿರುವ ಮೋಸದ ಕುರಿತು ಆಕ್ರೋಶ ವ್ಯಕ್ತಪಡಿಸುವುದನ್ನು ಕಾಣಬಹುದಾಗಿದೆ. ಇತ್ತಂಡಗಳು ಪರಸ್ಪರ ಬ್ಯಾರಿ ಭಾಷೆಯಲ್ಲಿ ಮಾತನಾಡುತ್ತಿದ್ದಾರೆ. ಒಂದು ಹಂತದಲ್ಲಿ ಯುವಕರು ಇಬ್ಬರಿಗೂ ಹಿಗ್ಗಾಮುಗ್ಗಾ ಥಳಿಸಿರುವುದು ಕಾಣುತ್ತದೆ .
Discover more from Coastal Times Kannada
Subscribe to get the latest posts sent to your email.
Discussion about this post