ಮಂಗಳೂರು, ಜೂನ್ 10: ಬೋಳಿಯಾರಿನಲ್ಲಿ ಬಿಜೆಪಿ ಕಾರ್ಯಕರ್ತರಿಬ್ಬರ ಮೇಲೆ ಚೂರಿಯಿಂದ ದಾಳಿ ನಡೆಸಿದ ಘಟನೆ ಸಂಬಂಧಿಸಿ ಕೋಣಾಜೆ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಶಕೀರ್(28), ಅಬ್ದುಲ್ ರಜಾಕ್ (40), ಅಬೂಬಕ್ಕರ್ ಸಿದ್ದಿಕ್(35), ಸವಾದ್ (18) ಮತ್ತು ಮೋನು ಅಲಿಯಾಸ್ ಹಫೀಜ್ (24) ಬಂಧಿತರು.
ಭಾನುವಾರ ರಾತ್ರಿ ಬೋಳಿಯಾರ್‌ನಲ್ಲಿ ವಿಜಯೋತ್ಸವದ ಮೆರವಣಿಗೆ ನಡೆದಿದ್ದು, ಮೆರವಣಿಗೆ ಬೋಳಿಯಾರ್ ಮಸೀದಿ ಮುಂದೆ ಸಾಗಿ ಬರುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಘೋಷಣೆಗಳನ್ನು ಕೂಗುತ್ತಾ ಸಾಗಿದ್ದರು. ಇದಾದ ಬಳಿಕ ವಿಜಯೋತ್ಸವ ಮುಗಿಸಿ ಮಸೀದಿ ಬಳಿ ಹೋಂಡಾ ಆ್ಯಕ್ಟೀವಾದಲ್ಲಿ ಬಂದ ಮೂವರು ಬಿಜೆಪಿ ಕಾರ್ಯಕರ್ತರಾದ ಹರೀಶ್, ನಂದಕುಮಾರ್, ಕೃಷ್ಣಕುಮಾರ್ ‘ಬೋಲೋ ಭಾರತ್ ಮಾತಾ ಕೀ ಜೈ’ ಎಂಬ ಘೋಷಣೆ ಕೂಗಿದ್ದರು. ಈ ವೇಳೆ ದ್ವಿಚಕ್ರ ವಾಹನದಲ್ಲಿದ್ದ ಮೂವರನ್ನು ಮಸೀದಿ ಮುಂಭಾಗ ನಿಂತ ವ್ಯಕ್ತಿಯೊಬ್ಬ ಅಟ್ಟಾಡಿಸಿಕೊಂಡು ಹೋಗುವುದನ್ನು ಕಾಣಬಹುದು ಇದರ ಸಿಸಿಟಿವಿ ವಿಡಿಯೋವನ್ನೂ ಮಸೀದಿಯವರು ಬಿಡುಗಡೆ ಮಾಡಿದ್ದಾರೆ.
ಆ ವ್ಯಕ್ತಿಯನ್ನು 20-25ರಷ್ಟಿದ್ದ ಮುಸ್ಲಿಂ ಯುವಕರು ಹಿಂಬಾಲಿಸುತ್ತಾರೆ. ಮಸೀದಿಯಿಂದ 800 ಮೀಟರ್ ದೂರದಲ್ಲಿ ಬೋಳಿಯಾರ್ ಕ್ರಾಸ್ ಸಮಾಧಾನ ಬಾರ್ ಬಳಿ ಬೈಕನ್ನು ಮುಸ್ಲಿಂ ಯುವಕರ ತಂಡ ತಡೆದು, ವಾಗ್ವಾದ ನಡೆಸಿದ್ದಾರೆ ಎನ್ನಲಾಗಿದೆ. ಈ ವೇಳೆ ಮೂವರು ಬಿಜೆಪಿ ಕಾರ್ಯಕರ್ತರಿಗೆ ಥಳಿಸಲಾಗಿದ್ದು, ಬಳಿಕ ಅವರ ಪೈಕಿ ಇಬ್ಬರಿಗೆ ಚೂರಿಯಿಂದ ಇರಿದಿರುವುದಾಗಿ ಆರೋಪಿಸಲಾಗಿದೆ.
ಹರೀಶ್ (41) ಹಾಗೂ ನಂದಕುಮಾರ್ (24) ಇರಿತಕ್ಕೆ ಒಳಗಾದವರು. ಕೃಷ್ಣ ಕುಮಾರ್ ಎಂಬಾತನಿಗೆ ಹಿಗ್ಗಾಮುಗ್ಗಾ ಹಲ್ಲೆ ನಡೆಸಲಾಗಿತ್ತು. ಹಲ್ಲೆಯಾಗುತ್ತಿದ್ದಂತೆ ಸ್ಥಳೀಯರು ಒಟ್ಟು ಸೇರಿದ್ದು ಗಂಭೀರ ಗಾಯಗೊಂಡ ಹರೀಶ್ ಹಾಗೂ ನಂದಕುಮಾರ್‌ನನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದಾರೆ. ಚೂರಿಯಿಂದ ಇರಿದ ರಭಸಕ್ಕೆ ಒಬ್ಬನ ಬೆನ್ನಿಗೆ ಗಾಯವಾದ್ರೆ ಇನ್ನೊಬ್ಬನ ಸೊಂಟಕ್ಕೆ ಗಂಭೀರ ಗಾಯವಾಗಿದ್ದು ಚಿಕಿತ್ಸೆ ಮುಂದುವರಿಸಲಾಗಿದೆ. ಘಟನೆ ಸಂಬಂಧ ಇನ್ನೂ ಹಲವರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ದೂರು ಆಧರಿಸಿ ಪೊಲೀಸರು ಸೆಕ್ಷನ್ 143, 147, 148, 153ಎ, 504, 506, 149 ಅಡಿ ಪ್ರಕರಣ ದಾಖಲಿಸಿದ್ದಾರೆ. ಸುರೇಶ್, ವಿನಯ್, ಸುಭಾಶ್, ರಂಜಿತ್, ಧನಂಜಯ ಆರೋಪಿಗಳೆಂದು ಹೆಸರಿಸಲಾಗಿದೆ. ನಿನ್ನೆ ರಾತ್ರಿ 9 ಗಂಟೆಗೆ ಚೂರಿ ಇರಿತದ ವಿಚಾರ ತಿಳಿಯುತ್ತಿದ್ದಂತೆ ಬೋಳಿಯಾರಿನಲ್ಲಿ ಎರಡೂ ಕೋಮಿನ ಜನರು ಸೇರಿದ್ದರು. ಬಳಿಕ ಪೊಲೀಸರು ಅವರನ್ನು ಚದುರಿಸುವ ಪ್ರಯತ್ನ ಮಾಡಿದ್ದರು. ಆನಂತರ, ಮಧ್ಯರಾತ್ರಿ ವೇಳೆಗೆ ಕೋಣಾಜೆ ಠಾಣೆಯ ಮುಂದೆ ಸೇರಿದ್ದ ಕಾರ್ಯಕರ್ತರು ಆರೋಪಿಗಳನ್ನು ಬಂಧಿಸುವಂತೆ ಆಗ್ರಹ ಮಾಡಿದ್ದರು. ಈ ನಿಟ್ಟಿನಲ್ಲಿ ಪೊಲೀಸರು ಘಟನೆ ನಡೆದ ಬಾರ್ ಮುಂಭಾಗದ ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post