ಉಳ್ಳಾಲ: ಡ್ಯೂಟಿ ಹಾಕಲು ಕಿರಿಯ ಪೊಲೀಸರಿಂದ ಲಂಚ ಸ್ವೀಕರಿಸುತ್ತಿದ್ದ ಕೆ.ಎಸ್.ಆರ್.ಪಿ. ಇನ್ಸ್ ಪೆಕ್ಟರ್ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಕೊಣಾಜೆ ಠಾಣಾ ವ್ಯಾಪ್ತಿಯ ಅಸೈಗೋಳಿ ಎಂಬಲ್ಲಿ ನಡೆದಿದೆ. ಲಂಚ ಸ್ವೀಕರಿಸುತ್ತಿದ್ದ ಕೆ.ಎಸ್.ಆರ್.ಪಿ. ಇನ್ಸ್ ಪೆಕ್ಟರ್ ಮೊಹಮ್ಮದ್ ಆರೀಸ್ ಲೋಕಾಯುಕ್ತ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಕರ್ನಾಟಕ ಪೊಲೀಸ್ ವಿಶೇಷ ಮೀಸಲು ಪಡೆ 7ನೇ ಬೆಟಾಲಿಯನ್‌ನಲ್ಲಿ ಮೀಸಲು ಪೊಲೀಸ್ ಕಾನ್ಸ್‌ಸ್ಟೇಬಲ್ ಆಗಿರುವ ಅನಿಲ್ ಕುಮಾರ್ ಕರ್ನಾಟಕ ಪೊಲೀಸ್ ವಿಶೇಷ ಮೀಸಲು ಪಡೆ 7ನೇ ಬೆಟಾಲಿಯನ್ ಪೊಲೀಸ್ ಅತಿಥಿಗೃಹದ ನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸುವ ಸಮಯದಲ್ಲಿ ಅವರಲ್ಲಿ ಪೊಲೀಸ್ ನಿರೀಕ್ಷಕ ಮಹಮ್ಮದ್ ಹಾರಿಸ್ ಅವರು ಈ ಕರ್ತವ್ಯದಲ್ಲಿ ನೀವು ಮುಂದುವರಿಯಬೇಕಾದರೆ ತನಗೆ 20,000 ರೂ.ನೀಡಬೇಕು ಹಾಗೂ ಪ್ರತಿ ತಿಂಗಳು ತನಗೆ 6,000 ರೂ. ಹಣ ನೀಡಬೇಕೆಂದು ಹೇಳಿದರೆನ್ನಲಾಗಿದೆ. ಅದರಂತೆ ದೂರುದಾರ ಅನಿಲ್ ಕುಮಾರ್ ಪೊಲೀಸ್ ನಿರೀಕ್ಷಕ ಹಾರಿಸ್‌ಗೆ ಪ್ರತಿ ತಿಂಗಳು 6000 ರೂ. ನೀಡುತ್ತಾ ಬಂದಿದ್ದು, ಈವರೆಗೆ ಒಟ್ಟು 50,000 ನೀಡಿದ್ದರೆನ್ನಲಾಗಿದೆ.
ಅನಿಲ್ ಕುಮಾರ್ ತನ್ನ ತಂದೆಯ ಅನಾರೋಗ್ಯದ ಕಾರಣದಿಂದಾಗಿ 2024ರ ಎಪ್ರಿಲ್ ತಿಂಗಳಿನಿಂದ ಜೂನ್ ತಿಂಗಳವರೆಗಿನ 3 ತಿಂಗಳ ಮೊತ್ತ 18,000 ರೂ.ಗಳನ್ನು ನೀಡಿರಲಿಲ್ಲ. ಈ ಕಾರಣದಿಂದಾಗಿ ದಿನಾಲೂ ಅನಿಲ್‌ಗೆ ಕರೆ ಮಾಡಿ ನೀಡಲು ಬಾಕಿ ಇರುವುದನ್ನು ನೀಡು, ಇಲ್ಲವಾದರೆ ಡ್ಯೂಟಿ ಬದಲಾಯಿಸುತ್ತೇನೆ ಎಂದು ಪೊಲೀಸ್ ನಿರೀಕ್ಷಕರು ಬೆದರಿಸುತ್ತಿದ್ದರು ಎಂದು ಲೋಕಾಯುಕ್ತಕ್ಕೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಪೊಲೀಸ್ ನಿರೀಕ್ಷಕ ಮಹಮ್ಮದ್ ಹಾರಿಸ್ ಬುಧವಾರ 18,000 ರೂ. ಲಂಚವನ್ನು ಕಾನ್‌ಸ್ಟೇಬಲ್ ಕೈಯಿಂದ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುವುದಾಗಿ ಪ್ರಕಟನೆ ತಿಳಿಸಿದೆ. ಈ ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಅಧೀಕ್ಷಕ ಎಂ.ಎ ನಟರಾಜ, ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಉಪಾಧೀಕ್ಷಕರಾದ ಡಾ.ಗಾನ ಪಿ ಕುಮಾರ್ ಹಾಗೂ ಚಲುವರಾಜು.ಬಿ, ಪೊಲೀಸ್ ನಿರೀಕ್ಷಕರಾದ ಅಮಾನುಲ್ಲಾ.ಎ, ಸುರೇಶ್ ಕುಮಾರ್ ಪಿ, ಚಂದ್ರಶೇಖರ್ ಸಿ.ಎಲ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post