ಮಂಗಳೂರು, ಸೆ.9: ಮಾನಸಿಕ ಅಸ್ವಸ್ಥಳಂತೆ ವರ್ತಿಸುತ್ತಿದ್ದ ಯವತಿಯೊಬ್ಬಳನ್ನು ಕದ್ರಿ ಪೊಲೀಸರು ಠಾಣೆಯಲ್ಲಿ ಹಿಡಿದಿಡಲು ಹರಸಾಹಸ ಪಟ್ಟ ವಿಡಿಯೋ ವೈರಲ್ ಆಗಿದ್ದು ಪೊಲೀಸ್ ಕಮಿಷನರ್ ಈ ಬಗ್ಗೆ ಅರೆಬರೆ ಸ್ಪಷ್ಟನೆ ನೀಡಿದ್ದಾರೆ.
ಸೆ.1 ರಂದು ಬೆಳಗ್ಗೆ 6.45ಕ್ಕೆ ಪಂಪ್ವೆಲ್ ನಲ್ಲಿ ಮೆಡಿಕಲ್ ಒಂದಕ್ಕೆ ಯುವತಿ ಬಂದಿದ್ದು ಆಕ್ರಮಣಕಾರಿಯಾಗಿ ವರ್ತಿಸುತ್ತಿದ್ದಳು. ರೌಂಡ್ಸ್ ನಲ್ಲಿದ್ದ ಅಬಕಾರಿ ಇಲಾಖೆಯವರು ಆಕೆಯನ್ನು ಹಿಡಿದು ಆಸ್ಪತ್ರೆಗೆ ಒಯ್ಯಲು ಯತ್ನಿಸಿದಾಗ, ಅಲ್ಲಿಯೂ ಆಕೆ ದಾಳಿಗೆ ಮುಂದಾಗಿದ್ದಾಳೆ. ಇದರಿಂದ ಬೇಸತ್ತು ಯುವತಿಯನ್ನು ಕದ್ರಿ ಠಾಣೆಗೆ ತಂದಿದ್ದರು. ಆದರೆ ಯುವತಿಯನ್ನು ಅಲ್ಲಿಯೂ ಹಿಡಿದಿಡಲು ಮಹಿಳಾ ಸಿಬಂದಿ ಹರಸಾಹಸ ಪಟ್ಟಿದ್ದಾರೆ.
ಬಳಿಕ ಕಾಲಿಗೆ ಕೋಳ ತೊಡಿಸಿ ಕೈಕಾಲು ಕಟ್ಟಿ ಆಸ್ಪತ್ರೆಗೆ ಒಯ್ದಿದ್ದು ತಪಾಸಣೆ ಮಾಡಿದ್ದಾರೆ. ಡ್ರಗ್ಸ್ ವ್ಯಸನದಿಂದ ಆಕೆ ಈ ರೀತಿ ವರ್ತಿಸುತ್ತಿದ್ದಾಳೆಂಬ ಸಂಶಯದಿಂದ ಚೆಕ್ ಮಾಡಿದಾಗ, ನೆಗೆಟಿವ್ ಬಂದಿದೆ. ಪೋಷಕರ ಬಗ್ಗೆ ಕೇಳಿದಾಗಲೂ ಮಾಹಿತಿ ನೀಡುತ್ತಿರಲಿಲ್ಲ. ಒಮ್ಮೆ ಹಿಂದಿ, ಇನ್ನೊಮ್ಮೆ ಇಂಗ್ಲಿಷ್ ಮಾತಾಡುತ್ತಿದ್ದಳು. ಮಾನಸಿಕ ತಜ್ಞರಲ್ಲಿ ತೋರಿಸಬೇಕೆಂದು ದೇರಳಕಟ್ಟೆಯ ಖಾಸಗಿ ಆಸ್ಪತ್ರೆ ಕಡೆಗೆ ಪೊಲೀಸರು ಒಯ್ಯುತ್ತಿದ್ದಾಗ, ಆಕೆ ತನ್ನ ಮನೆ ಇಲ್ಲೇ ಇದೆಯೆಂದು ಹೇಳಿದ್ದಾಳೆ. ಬಳಿಕ ಪೋಷಕರಿಗೆ ಮಾಹಿತಿ ನೀಡಿ, ಮತ್ತೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಡ್ರಗ್ಸ್ ವ್ಯಸನಿಯಲ್ಲ : ಈ ಬಗ್ಗೆ ಸ್ಪಷ್ಟನೆ ನೀಡಿರುವ ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್ ಅವರು, ಸೆ.1ರಂದು ಪಂಪ್‌ವೆಲ್‌ನಲ್ಲಿರುವ ಮೆಡಿಕಲ್‌ನಲ್ಲಿ ಓರ್ವ ಯುವತಿ ಆಕ್ರಮಣಕಾರಿ ರೀತಿಯಲ್ಲಿ ವರ್ತನೆ ಮಾಡುತ್ತಿರುವ ಬಗ್ಗೆ ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ಲಭಿಸಿತ್ತು. ಆಕೆ ಮಾದಕ ದ್ರವ್ಯ ಸೇವನೆ ಮಾಡಿರಬೇಕೆಂಬ ಸಂದೇಹದಿಂದ ವೈದ್ಯಕೀಯ ತಪಾಸಣೆಗೆ ಕರೆದುಕೊಂಡು ಹೋಗಲು ಪ್ರಯತ್ನಿಸಿದಾಗ ಆಕೆ ಅಧಿಕಾರಿಗಳ ಮೇಲೆ ಆಕ್ರಮಣಕಾರಿಯಾಗಿ ವರ್ತಿಸಿದ್ದಳು. ಆ ಬಳಿಕ ಠಾಣೆಯ ಮಹಿಳಾ ಸಿಬಂದಿ ಜತೆ ಇಲಾಖಾ ವಾಹನದಲ್ಲಿ ಅಸ್ಪತ್ರೆಗೆ ಕರೆದುಕೊಂಡು ಹೋಗಿ ತಪಾಸಣೆ ನಡೆಸಿದಾಗ ಪೂರಕ ಫಲಿತಾಂಶ ಬಂದಿಲ್ಲ. ಅನಂತರ ಅಕೆಯನ್ನು ಆಕೆಯ ಪೋಷಕರ ವಶಕ್ಕೆ ವಹಿಸಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ತನಿಖೆ ಮುಂದುವರೆದಿದೆ ಎಂದು ಅಗರ್‌ವಾಲ್ ತಿಳಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post