ಮಂಗಳೂರು: ನಗರದ ಅತ್ತಾವರ ಕಟ್ಟೆ ಬಳಿ ಇರುವ ವಾಣಿಜ್ಯ ಸಮುಚ್ಚಯವೊಂದರಲ್ಲಿರುವ ಲಾಡ್ಜ್‌ನ ಕೊಠಡಿಯಲ್ಲಿ ಸೋಮವಾರ ರಾತ್ರಿ 7 ಗಂಟೆ ಸುಮಾರಿಗೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಯಾದ ಘಟನೆ ನಡೆದಿದೆ.
ನೆಲಮಹಡಿ ಸೇರಿದಂತೆ ಒಟ್ಟು ನಾಲ್ಕು ಮಹಡಿಗಳಿರುವ (Ground+4) ಈ ಕಮರ್ಷಿಯಲ್ ಕಟ್ಟಡದ ಮೊದಲ ಮಹಡಿಯಿಂದ ಮೇಲ್ಭಾಗದಲ್ಲಿ ಲಾಡ್ಜ್ ಕಾರ್ಯಾಚರಿಸುತ್ತಿದೆ. ನಾಲ್ಕನೇ ಮಹಡಿಯಲ್ಲಿದ್ದ ಕೊಠಡಿಯೊಂದರಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಕಟ್ಟಡದ ಕಿಟಕಿಯ ಮೂಲಕ ಬೆಂಕಿಯ ಜ್ವಾಲೆ ಹಾಗೂ ಹೊಗೆ ಹೊರಬರುತ್ತಿರುವುದನ್ನು ಕಂಡು ಸ್ಥಳೀಯರು ಮತ್ತು ಪಕ್ಕದ ಕೊಠಡಿಗಳಲ್ಲಿದ್ದವರು ಗಾಬರಿಗೊಂಡರು. ತಕ್ಷಣವೇ ಕಟ್ಟಡದಲ್ಲಿದ್ದ ಇತರರು ಕೆಳಗೆ ಧಾವಿಸಿ ಹೊರಬಂದಿದ್ದಾರೆ.
ಬೆಂಕಿ ಹೊತ್ತಿಕೊಂಡಿದ್ದ ನಿರ್ದಿಷ್ಟ ಕೊಠಡಿಯು ಆ ಸಮಯದಲ್ಲಿ ಖಾಲಿಯಾಗಿದ್ದು, ಯಾರೂ ವಾಸವಿರಲಿಲ್ಲ. ಪ್ರಾಥಮಿಕ ಮಾಹಿತಿಯ ಪ್ರಕಾರ, ಕೊಠಡಿಯಲ್ಲಿದ್ದ ಎಸಿಯಿಂದ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಈ ಅಗ್ನಿ ಅವಘಡ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.
ಮಾಹಿತಿ ತಿಳಿಯುತ್ತಿದ್ದಂತೆ, ಪಾಂಡೇಶ್ವರ ಅಗ್ನಿಶಾಮಕ ಠಾಣೆಯ ವಾಹನ ಹಾಗೂ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದರು. ಜಿಲ್ಲಾ ಅಗ್ನಿಶಾಮಕ ಅಧಿಕಾರಿ ನವಾಜ್ ಹಾಗೂ ಅಗ್ನಿಶಾಮಕ ಠಾಣಾಧಿಕಾರಿ ಪ್ರವೀಣ್ ಅವರ ನೇತೃತ್ವದಲ್ಲಿ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಬೆಂಕಿ ಪಕ್ಕದ ಕೊಠಡಿಗಳಿಗೆ ವ್ಯಾಪಿಸದಂತೆ ಕೆಲವೇ ಕ್ಷಣಗಳಲ್ಲಿ ಸಂಪೂರ್ಣವಾಗಿ ನಂದಿಸಿದರು.
ಅವಘಡದ ಪರಿಣಾಮವಾಗಿ ಕೊಠಡಿಯಲ್ಲಿದ್ದ ಎಸಿ, ಮಂಚ, ಹಾಸಿಗೆ, ಫ್ಯಾನ್ ಸೇರಿದಂತೆ ಒಳಗಿದ್ದ ಸಾಮಗ್ರಿಗಳು ಬೆಂಕಿಗೆ ಸುಟ್ಟು ಹಾನಿಗೊಂಡಿವೆ. ಸಮಯಪ್ರಜ್ಞೆಯಿಂದ ಬೆಂಕಿಯನ್ನು ಶೀಘ್ರ ನಿಯಂತ್ರಿಸಿದ್ದರಿಂದ ದೊಡ್ಡ ಪ್ರಮಾಣದ ನಷ್ಟ ಹಾಗೂ ಅನಾಹುತ ತಪ್ಪಿದಂತಾಗಿದೆ.
ಕಾರ್ಯಾಚರಣೆಯಲ್ಲಿ ಜಿಲ್ಲಾ ಅಗ್ನಿ ಶಾಮಕಾಧಿಕಾರಿ ನವಾಜ್, ಠಾಣಾಧಿಕಾರಿ ಪ್ರವೀಣ್, ಸಹಾಯಕ ಅಗ್ನಿ ಶಾಮಕ ಅಧಿಕಾರಿ ಜಯ ಮತ್ತಿತರರು ಪಾಲ್ಗೊಂಡಿದ್ದರು.
Discover more from Coastal Times Kannada
Subscribe to get the latest posts sent to your email.




Discussion about this post