ಶ್ರೀನಗರ: ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಉಗ್ರಗಾಮಿ ಸಂಘಟನೆ ಜೈಷ್- ಇ-ಮೊಹಮ್ಮದ್(ಜೆಇಎಂ) ಕಮಾಂಡರ್ ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡು ನಿರ್ಮಿಸಿದ್ದ ಮನೆಯನ್ನು ಉರುಳಿಸಲಾಗಿದೆ.

ಕಾಶ್ಮೀರದಲ್ಲಿ ಉಗ್ರಗಾಮಿಯೊಬ್ಬನ ನಿವಾಸವನ್ನು ಸರ್ಕಾರಿ ಅಧಿಕಾರಿಗಳು ಉರುಳಿಸಿದ ಮೊದಲ ಪ್ರಕರಣ ಇದಾಗಿದೆ. ಪುಲ್ವಾಮಾದ ರಾಜಪೋರಾದ ಉಗ್ರಗಾಮಿ ಆಶಿಕ್ ಅಹಮ್ಮದ್ ನೆಂಗ್ರೂ ಅಲಿಯಾಸ್ ಅಮ್ಜಿದ್ ಬಾಯ್ ಆಫ್ ಅಜಾನ್ ಬಾಲ ಎಂಬಾತನ ಮನೆಯನ್ನು ಕೆಡವಲಾಗಿದೆ. 40 ಸಿಆರ್‌ಪಿಎಫ್ ಯೋಧರು ಹುತಾತ್ಮರಾದ 2019ರ ಲೆಥ್ ಪೋರ ಫಿದಾಯೀನ್‌ನ ಆತ್ಮಹತ್ಯಾ ಬಾಂಬ್ ದಾಳಿ ಪ್ರಕರಣದಲ್ಲಿ ಈತನ ಕೈವಾಡವಿತ್ತು.
ಈ ವರ್ಷದ ಏಪ್ರಿಲ್‌ನಲ್ಲಿ, ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯ ಅಡಿಯಲ್ಲಿ ಕೇಂದ್ರ ಸರ್ಕಾರ ನೆಂಗ್ರೂನನ್ನು ಭಯೋತ್ಪಾದಕ ಎಂದು ಘೋಷಿಸಿತ್ತು. ನೆಂಗ್ರೂಗೆ ಸೇರಿದ ಎರಡು ಅಂತಸ್ತಿನ ಮನೆಯನ್ನು ಜಿಲ್ಲಾಡಳಿತ ಪುಲ್ವಾಮಾ ಪೊಲೀಸರ ಸಮ್ಮುಖದಲ್ಲಿ ನೆಲಸಮಗೊಳಿಸಿದೆ ಎಂದು ವರದಿಗಳು ತಿಳಿಸಿವೆ.
ಕಾಶ್ಮೀರದ ಪುಲ್ವಾಮದ ಅವಂತಿಪುರದಲ್ಲಿ ಉಗ್ರರು ನಡೆಸಿದ್ದ ಬಾಂಬ್ ಸ್ಫೋಟದಲ್ಲಿ ಭಾರತೀಯ ಸೇನೆಯ 40 ಯೋಧರು ಹುತಾತ್ಮರಾಗಿದ್ದರು. ಜೈಷ್-ಇ- ಮೊಹಮ್ಮದ್ ಭಯೋತ್ಪಾದಕ ಸಂಘಟನೆ ಪುಲ್ವಾಮಾ ದಾಳಿಯ ಹೊಣೆ ಹೊತ್ತಿತ್ತು.

ಸಿಆರ್‌ಪಿಎಫ್ ಯೋಧರು ಪ್ರಯಾಣಿಸುತ್ತಿದ್ದ ಬಸ್‌ಗೆ ಸ್ಫೋಟಕ ತುಂಬಿದ್ದ ಕಾರನ್ನು ಗುದ್ದಿಸಲಾಗಿತ್ತು. ಈ ಘಟನೆಯಲ್ಲಿ ನಲವತ್ತು ಯೋಧರು ಮರಣ ಹೊಂದಿದ್ದರು. ಇದು ಜಗತ್ತಿನಾದ್ಯಂತ ಸುದ್ದಿ ಮಾಡಿತ್ತು. ಉಗ್ರ ಸಂಘಟನೆಯ ಕೃತ್ಯವನ್ನು ಪ್ರಮುಖ ಜಾಗತಿಕ ನಾಯಕರು ಖಂಡಿಸಿದ್ದರು. ಭಾರತವು ಪಾಕಿಸ್ತಾನದಲ್ಲಿ ಸರ್ಜಿಕಲ್ ಸ್ಟ್ರೈಕ್ ಕೈಗೊಂಡಿತ್ತು. ಉಗ್ರರ ಶಿಬಿರದ ಮೇಲೆ ವೈಮಾನಿಕ ದಾಳಿ ನಡೆಸಿತ್ತು. 2004ರಲ್ಲಿ ಪಾಕ್ ಮೂಲದ ಉಗ್ರರು ನಡೆಸಿದ್ದ ದಾಳಿಯೊಂದರ ಸಂದರ್ಭ ಗಡಿ ಭದ್ರತಾ ಪಡೆಯ 28 ಯೋಧರು ಹುತಾತ್ಮರಾಗಿದ್ದರು. ಅದಾದ ನಂತರ, ಕಾಶ್ಮೀರದಲ್ಲಿ ನಡೆದ ದೊಡ್ಡ ಮಟ್ಟದ ದಾಳಿ ಇದಾಗಿತ್ತು.

Discover more from Coastal Times Kannada
Subscribe to get the latest posts sent to your email.







Discussion about this post