ಮಂಗಳೂರು: ಹ್ಯಾಟ್ರಿಕ್ ಹೀರೊ ಶಿವರಾಜ್‌ಕುಮಾರ್ ಅಭಿನಯದ ʻವೇದʼ ಸಿನಿಮಾ ಇದೇ ಡಿಸೆಂಬರ್ 23ರಂದು ರಾಜ್ಯದ 250ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ಬಿಡುಗಡೆಗೊಳ್ಳಲಿದೆ. ಡಿಸೆಂಬರ್ 10ರ ಶನಿವಾರ ಸಂಜೆ ಮಂಗಳೂರಿನ ಪಣಂಬೂರು ಬೀಚ್ ನಲ್ಲಿ ನಡೆಯಲಿರುವ ವೇದ ಸಿನಿಮಾದ ಫ್ರೀ ರಿಲೀಸ್ ಇವೆಂಟ್ ಗೆ ಶಿವರಾಜ್ ಆಗಮಿಸಿದ್ದು ಕಾರ್ಯಕ್ರಮದಲ್ಲಿ ವೇದ ಚಿತ್ರತಂಡ ಭಾಗಿಯಾಗಲಿದೆ. ಈಗಾಗಲೇ ಮಂಗಳೂರಿನ ಕುತ್ತಾರು ಕೊರಗಜ್ಜ ಕ್ಷೇತ್ರಕ್ಕೆ ನಟ ಶಿವರಾಜ್‌ಕುಮಾರ್ ದಂಪತಿ ಸಮೇತ ಭೇಟಿ ನೀಡಿದ್ದಾರೆ.




ವೇದ ಚಿತ್ರದ ಪ್ರಚಾರದ ನಿಮಿತ್ತ ಚಿತ್ರತಂಡದವರು ಹಾಗೂ ಶಿವಣ್ಣ ಕುಟುಂಬದವರು ಕೊರಗಜ್ಜ ಸನ್ನಿಧಿಗೆ ಭೇಟಿ ಕೊಟ್ಟಿದ್ದಾರೆ. ಕೊರಗಜ್ಜನ ಆದಿ ಸ್ಥಳದಲ್ಲಿ ಶಿವರಾಜ್‌ಕುಮಾರ್ ಹಾಗೂ ಚಿತ್ರತಂಡ ಪ್ರಾರ್ಥನೆ ಸಲ್ಲಿಸಿದೆ. ಪ್ರಾರ್ಥನೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶಿವಣ್ಣ ʻʻಇದೊಂದು ಆಡಂಬರ ಇಲ್ಲದ ದೈವಿಕ ಶಕ್ತಿಯ ಸ್ಥಳ. ಸ್ನೇಹಿತರೊಬ್ಬರು ಈ ಕ್ಷೇತ್ರದ ಬಗ್ಗೆ ತಿಳಿಸಿದ್ದರು. ಇಂದು ವೇದ ಸಿನಿಮಾದ ಪ್ರಮೋಷನ್ ಕಾರ್ಯಕ್ರಮವು ಮಂಗಳೂರಿನಲ್ಲಿದೆ. ಹೀಗಾಗಿ ಚಿತ್ರ ತಂಡದ ಜತೆ ಕ್ಷೇತ್ರಕ್ಕೆ ಬಂದಿದ್ದೇವೆ. ನಾನು ಕರಾವಳಿಯ ಹಲವು ದೇವಸ್ಥಾನಗಳಿಗೆ ಭೇಟಿ ನೀಡಿದ್ದೇನೆ. ಇಲ್ಲಿಗೆ ಇದೇ ಮೊದಲ ಬಾರಿಗೆ ಬಂದಿರುವುದು. ದೇವರಲ್ಲಿ ಪ್ರಾರ್ಥನೆ ಸಲ್ಲಿಸುವುದರಲ್ಲಿ ಯಾವುದೇ ತಪ್ಪಿಲ್ಲ. ಪ್ರಾರ್ಥನೆ ಈಡೇರಬೇಕು ಎಂತಲೇ ಪ್ರಾರ್ಥನೆ ಸಲ್ಲಿಸಬಾರದು. ಪ್ರಾರ್ಥನೆ ಈಡೇರಿಸುವುದು ಬಿಡುವುದು ದೇವರಿಗೆ ಬಿಡಬೇಕು. ಇದೊಂದು ವಿಶೇಷ ಕ್ಷೇತ್ರವಾಗಿದ್ದು, ಭಕ್ತಿಯಿಂದ ಕೈ ಮುಗಿದಿದ್ದೇನೆ. ಅಜ್ಜನಿಗೆ ಚಕ್ಕುಲಿ ಹಾಗೂ ವೀಳ್ಯದ ಎಲೆ ಅರ್ಪಿಸಿದ್ದೇನೆʼʼ ಎಂದರು.

Discover more from Coastal Times Kannada
Subscribe to get the latest posts sent to your email.








Discussion about this post