ಬೆಂಗಳೂರು: ತಲೆ ಮೇಲೆ ಕೊಂಬೆ ಬಿದ್ದು ಪ್ರಜ್ಞೆ ಕಳೆದುಕೊಂಡು 701 ದಿನ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಬಾಲಕಿ ರೈಚಲ್ ಪ್ರಿಷಾ (8), ಚಿಕಿತ್ಸೆಗೆ ಸ್ಪಂದಿಸದೇ ಮಣಿಪಾಲ್ ಆಸ್ಪತ್ರೆಯಲ್ಲಿ ಗುರುವಾರ ಕೊನೆಯುಸಿರೆಳೆದಿದ್ದಾಳೆ
‘ಎರಡನೇ ತರಗತಿಯಲ್ಲಿ ಓದುತ್ತಿದ್ದ ಪ್ರಿಷಾ, ಪರೀಕ್ಷಾ ಪ್ರವೇಶ ಪತ್ರ ತರಲೆಂದು 2020ರ ಮಾರ್ಚ್ 11ರಂದು ತಂದೆ ರಾಜು ಜೊತೆ ಬೈಕ್‌ನಲ್ಲಿ ಶಾಲೆಯತ್ತ ಹೊರಟಿದ್ದಳು. ಕೌದೇನಹಳ್ಳಿ ಮುಖ್ಯರಸ್ತೆಯಲ್ಲಿ ಅರಳಿ ಮರದ ದೊಡ್ಡ ಕೊಂಬೆಯೊಂದು ಆಕೆಯ ತಲೆ ಮೇಲೆ ಬಿದ್ದಿತ್ತು’ ಎಂದು ಕೆ.ಆರ್.ಪುರ ಪೊಲೀಸರು ಹೇಳಿದರು.
‘ತೀವ್ರವಾಗಿ ಗಾಯಗೊಂಡಿದ್ದ ಪ್ರಿಷಾ, ಕೋಮಾ ಸ್ಥಿತಿಗೆ ತಲುಪಿದ್ದಳು. ಆರಂಭದಲ್ಲಿ ಕೋಶಿಷ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಲೆಯ ಚಿಪ್ಪಿಗೆ ಪೆಟ್ಟು ಬಿದ್ದು, ಊದಿಕೊಂಡಿತ್ತು’
‘ಪ್ರಿಷಾ ಸ್ಥಿತಿ ಕೆಲದಿನಗಳಿಂದ ಹದಗೆಟ್ಟಿತ್ತು. ಗುರುವಾರ ಬೆಳಿಗ್ಗೆ ಆಕೆ ತೀರಿಕೊಂಡಿದ್ದಾಳೆ.’ ಎಂದೂ ತಿಳಿಸಿದರು.