ಮಂಗಳೂರು : ರಾಜ್ಯದ ಹಲವೆಡೆ ಮುಸ್ಲಿಂ ವ್ಯಾಪಾರಿಗಳ ವ್ಯಾಪಾರಕ್ಕೆ ಅಡ್ಡಿ ಮಾಡುವಂತಹ ಘಟನೆಗಳು ನಡೆಯುತ್ತಲೆ ಇವೆ. ಆದರೆ, ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗದಲ್ಲಿರುವ ಕೇರಳ ರಾಜ್ಯದ ಮಂಜೇಶ್ವರ ತಾಲೂಕಿನಲ್ಲೊಂದು ಸಾಮರಸ್ಯದ ಘಟನೆ ಜರುಗಿದೆ. ದೈವಗಳೇ ತಮ್ಮ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳ ವ್ಯಾಪಾರಕ್ಕೆ ಚಾಲನೆ ನೀಡುವ ಮೂಲಕ ಕೋಮು ಸಾಮರಸ್ಯದ ಪಾಠವನ್ನು ಮಾಡಿವೆ.
ಕೇರಳ-ಕರ್ನಾಟಕ ಗಡಿ ಪ್ರದೇಶವಾದ ಮಂಜೇಶ್ವರ ತಾಲೂಕಿನ ಉದ್ಯಾವರದ ಶ್ರೀ ಅರಸು ಮಂಜಿಷ್ಣಾರ್ ಕ್ಷೇತ್ರದಲ್ಲಿ ಈ ಘಟನೆ ಜರುಗಿದೆ. ಈ ಕ್ಷೇತ್ರದಲ್ಲಿ ಅದ್ಧೂರಿ ಜಾತ್ರೆ ನಡೆಯಲಿದೆ. ಇದಕ್ಕೂ ಮುನ್ನ ಜಾತ್ರೆಗೆ ದಿನನಿಶ್ಚಯ ಮಾಡುವ ಕುದಿಕಳ ಎಂಬ ಕಾರ್ಯಕ್ರಮವಿರುತ್ತದೆ. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಮುಸ್ಲಿಂ ಸಮುದಾಯಕ್ಕೊಳಪಟ್ಟ ವ್ಯಕ್ತಿಯಿಂದಲೇ ಆವರಣದೊಳಗೆ ಸಂತೆಯನ್ನು ಸ್ಥಾಪಿಸಿ ಅಲ್ಲಿಂದಲೇ ಕ್ಷೇತ್ರದ ದೈವಗಳು ತೆಂಗಿನಕಾಯಿ ಮತ್ತು ವೀಳ್ಯದೆಲೆ ಖರೀದಿಸಿ ಕ್ಷೇತ್ರದ ಉತ್ಸವಕ್ಕೆ ದಿನನಿಶ್ಚಯ ಮಾಡುತ್ತವೆ.
ದೈವಸ್ಥಾನದ ಸಿಂಹಾಸನ ಕಟ್ಟೆಯ ಒಂದು ಭಾಗದಲ್ಲಿ ಮುಸಲ್ಮಾನರು ಹಾಗೂ ಮತ್ತೊಂದು ಭಾಗದಲ್ಲಿ ಬ್ರಹ್ಮಸಭೆ (ಕ್ಷೇತ್ರಕ್ಕೆ ಸಂಬಂಧಪಟ್ಟವರು) ಕುಳಿತುಕೊಂಡು ದೈವ ಪಾತ್ರಿಗಳ ಆಗಮನದೊಂದಿಗೆ ದಿನ ನಿಶ್ಚಯವನ್ನು ಓದಿ ಹೇಳುವ ವಿಶೇಷ ಸಂಪ್ರದಾಯವಿದೆ.
Discover more from Coastal Times Kannada
Subscribe to get the latest posts sent to your email.
Discussion about this post