ಮಂಗಳೂರು : ಶ್ರೀ ಕಟೀಲು ದುರ್ಗಾ ಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮೇಳದ ಭಾಗವತರಾ ಗಿದ್ದ, ಯಕ್ಷಗಾನ ಲೋಕದ ಪ್ರಸಿದ್ಧ ಭಾಗವತ ಮನೆತನದ ಬಲಿಪ ನಾರಾಯಣ ಭಾಗವತ ಅವರ ಪುತ್ರ, ಬಲಿಪ ಪ್ರಸಾದ್ ಭಾಗವತ (46) ಇಂದು ಇಹಲೋಕ ತ್ಯಜಿಸಿದ್ದಾರೆ.
ಗಂಟಲ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ತಂದೆ, ಯಕ್ಷಗಾನ ರಂಗದ ಭೀಷ್ಮ ಎಂದೇ ಪ್ರಸಿದ್ಧಿ ಪಡೆದಿರುವ ಬಲಿಪ ನಾರಾಯಣ ಭಾಗವತರು, ಪತ್ನಿ, ಮೂವರು ಮಕ್ಕಳು ಹಾಗೂ ಮೂವರು ಸಹೋದರರನ್ನು ಅಗಲಿದ್ದಾರೆ.
ಕಟೀಲು ಶ್ರೀದುರ್ಗಾ ಪರಮೇಶ್ವರಿ ಪ್ರಸಾದಿ ದಶಾವತಾರ ಯಕ್ಷಗಾನ ಮಂಡಳಿಯಲ್ಲಿ ಸುಮಾರು ಮೂರು ದಶಕಕ್ಕೂ ಹೆಚ್ಚು ಕಾಲದಿಂದ ಸೇವೆ ಸಲ್ಲಿಸುತ್ತಿದ್ದ ಅವರು, ಇತ್ತೀಚೆಗೆ ಅನಾರೋಗ್ಯದ ಕಾರಣದಿಂದ ಮೇಳಕ್ಕೆ ಹೋಗುತ್ತಿರಲಿಲ್ಲ. ಗಂಟಲ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದರಾದರೂ, ಸೋಮವಾರ ಸಂಜೆ ರೋಗವು ಉಲ್ಬಣಿಸಿದಾಗ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ತೆಂಕು ತಿಟ್ಟು ಯಕ್ಷಗಾನ ರಂಗದಲ್ಲಿ ಪರಂಪರೆಯ ಭಾಗವತರಾಗಿ, ನಯವಿನಯ, ಸಜ್ಜನಿಕೆಯಿಂದ ಪ್ರೀತಿಪಾತ್ರರಾಗಿದ್ದ ಅವರು ಪೌರಾಣಿಕ ಪ್ರಸಂಗಗಳನ್ನು ಅತ್ಯುತ್ತಮವಾಗಿ ರಂಗದಲ್ಲಿ ಆಡಿಸಬಲ್ಲವರಾಗಿದ್ದರು.
ಪ್ರಸಾದ ಬಲಿಪರು ದೇವಿ ಮಹಾತ್ಮೆ, ಕಟೀಲು ಕ್ಷೇತ್ರ ಮಹಾತ್ಮೆ ಸೇರಿದಂತೆ ಏರು ಪದ್ಯಗಳ ಮೂಲಕ ಬಲಿಪ ಪರಂಪರೆಯ ಶೈಲಿಯ ಪ್ರತಿನಿಧಿಯಾಗಿ ಭಾಗವತನ ಸ್ಥಾನ ತುಂಬಿದ್ದರು.