ಮಂಗಳೂರು: ಭಾರತೀಯ ಸೇನೆಯು ಗಡಿಯಲ್ಲಿ ನೆರೆ ರಾಷ್ಟ್ರ ಪಾಕಿಸ್ತಾನದೊಂದಿಗೆ ಯುದ್ಧ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.ಶತ್ರು ರಾಷ್ಟ್ರದ ವಿವಿಧ ರೀತಿಯ ದಾಳಿಗಳನ್ನು ಸಮರ್ಥವಾಗಿ ಎದುರಿಸುತ್ತಾ ರಾಷ್ಟ್ರ ರಕ್ಷಣೆಯ ಕಾರ್ಯದಲ್ಲಿ ಹಗಲಿರುಳೆನ್ನದೆ ಶ್ರಮಿಸುತ್ತಿದೆ.
ನಮ್ಮ ಸೇನೆಗಳ ಸಾಧನೆಗಾಗಿ ಮತ್ತು ಶ್ರೀ ದೇವರ ಅನುಗ್ರಹ ಪ್ರಾಪ್ತಿಗಾಗಿ ಶ್ರೀ ಬ್ರಹ್ಮಸ್ಥಾನಂ ಕ್ಷೇತ್ರದಲ್ಲಿ ಮಠದ ಮುಖ್ಯಸ್ಥರಾದ ಸಂಪೂಜ್ಯ ಸ್ವಾಮಿನಿ ಮಂಗಳಾಮೃತ ಪ್ರಾಣ ರವರ ಉಪಸ್ಥಿತಿಯಲ್ಲಿ ಲೋಕ ಕಲ್ಯಾಣಾರ್ಥ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.ಸುಮಂಗಲೆಯರು ಅಮೃತ ಜ್ಯೋತಿ, ಪುಷ್ಪ ಹಾಗೂ ಕುಂಕುಮಗಳೊಂದಿಗೆ ಲೋಕ ಕಲ್ಯಾಣಕ್ಕಾಗಿ ಪ್ರದಕ್ಷಿಣೆಯೊಂದಿಗೆ ಸಾಮೂಹಿಕ ಪ್ರಾರ್ಥನೆ ಮಾಡಲಾಯಿತು.
ಈ ಸಂದರ್ಭದಲ್ಲಿ ದೇಶದ ಸೇನೆಯಲ್ಲಿ ಸೇವೆಗೈದ ನಿವೃತ್ತ ಸೇನಾನಿಗಳು ಭಾಗವಹಿಸಿದ್ದರು.ವಾಯು ಸೇನೆಯ ನಿವೃತ್ತ ಯಶವಂತ ಗೋಪಾಲ ಶೆಟ್ಟಿ,, ನೌಕಾಪಡೆಯ ನಿವೃತ್ತ ಕಮಾಂಡರ್ ಜಯರಾಂ ನೋಂಡ, ಮತ್ತು ಭೂಸೇನೆಯ ಲ್ಯಾನ್ಸ್ ದಫೇದಾರ್ ಸೋಮಶೇಖರ್ ಇವರುಗಳನ್ನು ಈ ಸಂದರ್ಭದಲ್ಲಿ ಮೂರೂ ಸೇನೆಗಳಿಗೆ ಗೌರವಾರ್ಪಣೆಯ ಸಂಕೇತವಾಗಿ ಶ್ರೀ ಬ್ರಹ್ಮಸ್ಥಾನಂ ಕ್ಷೇತ್ರದಲ್ಲಿ ಸನ್ಮಾನಿಸಲಾಯಿತು. ಯಶವಂತ ಶೆಟ್ಟಿಯವರು ನೆರೆದಿದ್ದ ಭಕ್ತವೃಂದವನ್ನು ಉದ್ದೇಶಿಸಿ ಮಾತನಾಡಿ ” ನಮ್ಮ ಸೇನೆಯಲ್ಲಿ ಮಂಗಳೂರಿನ ಐವರು ಸೇವಾನಿರತರಾಗಿದ್ದಾರೆ ,ಅದರಲ್ಲೂ ನಾಲ್ಕು ಮಹಿಳೆಯರು ಎಂಬುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ.
ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿಯವರ ಈ ದಿವ್ಯ ಕ್ಷೇತ್ರದಲ್ಲಿ ಭಾರತೀಯ ಸೇನೆಯವರಿಗಾಗಿ ವಿಶೇಷ ಪ್ರಾರ್ಥನೆ ಹಮ್ಮಿಕೊಂಡಿರುವುದು ನಿಜವಾಗಿಯೂ ಅತ್ಯಂತ ಅರ್ಥ ಪೂರ್ಣ ಹಾಗೂ ಅಗತ್ಯವಾದ ಕಾರ್ಯಕ್ರಮವಾಗಿದೆ.
ದೇಶದ ರಕ್ಷಣೆಗಾಗಿ ನಿಂತಿರುವ ಅಮೃತ ವಿದ್ಯಾಲಯಂನ ಹಳೇ ವಿದ್ಯಾರ್ಥಿಯು ಹೊಂದಿರುವ ದೇಶಪ್ರೇಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಭಾರತ ದೇಶದ ವಿಜಯ ಪತಾಕೆ ಹಾರಿಸುವ ಬಗ್ಗೆ ಯಾವುದೇ ಸಂಶಯ ಬೇಡ.ಕೆಲವೇ ದಿನಗಳಲ್ಲಿ ಕೊನೆಗೊಳ್ಳುವ ಸಾಧ್ಯತೆ ಇದೆ.ಮಹಿಳೆಯರು ಅಂದರೆ ಸ್ತ್ರೀ ಶಕ್ತಿ ಈಗ ಮುಂದೆ ಬರುತ್ತಿರುವುದು ಹೆಮ್ಮೆಯ ವಿಷಯ.ಈ ಬಾರಿ ಎಲ್ಲಾ ಧರ್ಮದವರು ಒಕ್ಕೊರಲಿನಲ್ಲಿ ಹೇಳಿದ ಮಾತು ತಕ್ಕ ಪ್ರತ್ಯುತ್ತರ ಕೊಟ್ಟೇ ಕೊಡುತ್ತೇವೆ ಎಂದು. ಇಂದು ಇಲ್ಲಿ ಮಾಡಿದ ಪ್ರಾರ್ಥನೆಯ ಫಲ ನ್ಯಾಯಕ್ಕೆ ಸಿಗುತ್ತದೆ,ಸತ್ಯಕ್ಕೆ ಸಿಗುತ್ತದೆ,ಎಲ್ಲರಲ್ಲೂ ದೇಶ ಭಕ್ತಿ ಜಾಗೃತ ಗೊಂಡು ದೇಶ ಸೇವೆ ಮಾಡೋಣ ಎಂದು ಸಂತೃಪ್ತಿಯಿಂದ ನುಡಿದರು.
ಸಾಮೂಹಿಕ ಶನಿದೋಷ ನಿವಾರಣಾ ಪೂಜೆಯ ನಂತರ ನಡೆದ ಈ ಸರಳ ಕಾರ್ಯಕ್ರಮದಲ್ಲಿ ಸೇವಾ ಸಮಿತಿಯ ಅಧ್ಯಕ್ಷ ಸುರೇಶ್ ಅಮೀನ್, ಗೌರವಾಧ್ಯಕ್ಷರುಗಳಾದ ಡಾ.ಜೀವರಾಜ್ ಸೊರಕೆ, ಡಾ.ವೈ.ಸನತ್ ಹೆಗ್ಡೆ,ಶ್ರುತಿ ಸನತ್ ಹೆಗ್ಡೆ , ಸೇವಾ ಸಮಿತಿಯ ಪದಾಧಿಕಾರಿಗಳು, ಶ್ರೀ ಭೋಜರಾಜ್ ಕರ್ಕೇರ, ಶ್ರೀ ಬ್ರಹ್ಮಸ್ಥಾನಂ ಕ್ಷೇತ್ರದ ಪದಾಧಿಕಾರಿಗಳು, ಅಮ್ಮನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post