ಕಾರವಾರ (ಜು.11): ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ನಗರವನ್ನು 24 ಗಂಟೆಯೊಳಗೆ ಸ್ಫೋಟಿಸಿ ನಾಶಮಾಡುತ್ತೇವೆ ಎಂದು ಇ-ಮೇಲ್ ಮೂಲಕ ಬರುವಂತೆ ಕಳಿಸಿರುವ ಬೆದರಿಕೆದಿಂದ ಭಟ್ಕಳ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿದ್ದು, ನಗರದೆಲ್ಲೆಡೆ ಬಿಗಿ ಭದ್ರತೆ ಏರ್ಪಡಿಸಲಾಗಿದೆ.
ಜುಲೈ 10ರ ಬೆಳಗ್ಗೆ 10.30ರ ಸಮಯದಲ್ಲಿ, kannnannandik@gmail.com ಎಂಬ ವಿಳಾಸದಿಂದ ‘ಕಣ್ಣನ್ ಗುರುಸ್ವಾಮಿ’ ಎಂಬ ಹೆಸರಿನಲ್ಲಿ ಈ ಬೆದರಿಕೆಭರಿತ ಇ-ಮೇಲ್, ಭಟ್ಕಳ ಶಹರ ಪೊಲೀಸ್ ಠಾಣೆಯ ಅಧಿಕೃತ ಇ-ಮೇಲ್ ವಿಳಾಸ bhatkaltownkwr@ksp.gov.in ಗೆ ರವಾನೆಯಾಗಿತ್ತು. ಇ-ಮೇಲ್‌ನಲ್ಲಿ ‘ಭಟ್ಕಳ ನಗರದಾದ್ಯಂತ ಸ್ಫೋಟ ಸಂಭವಿಸುತ್ತಿದೆ. 24 ಗಂಟೆಯೊಳಗೆ ನಗರ ನಾಶವಾಗಲಿದೆ’ ಎಂಬ ಹೆಸರಿಲ್ಲದ ಬೆದರಿಕೆಯೊಂದಿಗೆ ಭಯದ ವಾತಾವರಣವನ್ನು ಸೃಷ್ಟಿಸಲು ಯತ್ನಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಇ-ಮೇಲ್ ಬಂದ ತಕ್ಷಣವೇ ಭಟ್ಕಳ ಪೊಲೀಸರು ಎಚ್ಚರಗೊಂಡು, ಜಿಲ್ಲಾ ಬಾಂಬ್ ನಿಷ್ಕ್ರಿಯ ದಳ (Bomb Disposal Squad) ಹಾಗೂ ಡಾಗ್ ಸ್ಕ್ವಾಡ್‌ನ ಸಹಾಯದಿಂದ ನಗರದ ಪ್ರಮುಖ ಸ್ಥಳಗಳಲ್ಲಿ ವಿಸ್ತೃತ ತಪಾಸಣಾ ಕಾರ್ಯಾಚರಣೆ ಆರಂಭಿಸಿದರು. ಭಟ್ಕಳ ಬಸ್ ನಿಲ್ದಾಣ, ರೈಲ್ವೇ ನಿಲ್ದಾಣ, ಸಾರ್ವಜನಿಕ ಉದ್ಯಾನಗಳು, ಸಾರ್ವಜನಿಕ ಆವರಣಗಳು ಹಾಗೂ ಶಾಲಾ ಕಾಲೇಜು ಹತ್ತಿರದ ಭಾಗಗಳಲ್ಲಿ ಬಿಗಿ ಭದ್ರತೆ ಮತ್ತು ಪರಿಶೀಲನೆ ನಡೆಯಿತು.
ಸುಮೋಟೊ ದೂರು ದಾಖಲು: ಈ ಸಂಬಂಧ ಭಟ್ಕಳ ಶಹರ ಠಾಣೆಯ ಪಿಎಸ್‌ಐ ನವೀನ್ ನಾಯ್ಕ ಅವರು ಸ್ವಯಂಪ್ರೇರಿತ (suomoto) ದೂರು ದಾಖಲಿಸಿಕೊಂಡಿದ್ದಾರೆ. ‘ಕಣ್ಣನ್ ಗುರುಸ್ವಾಮಿ’ ಎಂಬ ಹೆಸರಿನ ವ್ಯಕ್ತಿ ವಿರುದ್ಧ ಐಟಿ ಕಾಯ್ದೆಗಳಡಿ ಹಾಗೂ ಸಾರ್ವಜನಿಕ ಆತಂಕ ಉಂಟುಮಾಡುವ ಹೆಸರಿಲ್ಲದ ಬೆದರಿಕೆ ನೀಡಿರುವ ಹಿನ್ನೆಲೆಯಲ್ಲಿ ಕಾನೂನು ಕ್ರಮ ಆರಂಭಿಸಲಾಗಿದೆ.
Discover more from Coastal Times Kannada
Subscribe to get the latest posts sent to your email.
Discussion about this post