ಚೆನ್ನೈ: ತಮ್ಮ ಪಕ್ಷದ ಪ್ರಮುಖರಾದ ದಿವಂಗತ ಎಂಜಿ ರಾಮಚಂದ್ರನ್ ಮತ್ತು ಜೆ ಜಯಲಲಿತಾ ಅವರ ಜೀವನಾಧಾರಿತ ಬಹು-ಭಾಷಾ ಚಿತ್ರ ‘ತಲೈವಿ’ಯಲ್ಲಿ ಕೆಲವು ತಪ್ಪು ಉಲ್ಲೇಖಗಳಿದ್ದು, ‘ವಾಸ್ತವಿಕವಲ್ಲ’ದ ದೃಶ್ಯಗಳನ್ನು ತೆಗೆದು ಹಾಕುವಂತೆ ತಮಿಳುನಾಡಿನ ಪ್ರತಿಪಕ್ಷ ಎಐಎಡಿಎಂಕೆ ಶುಕ್ರವಾರ ಒತ್ತಾಯಿಸಿದೆ.
ಬಾಲಿವುಡ್ ನಟಿ ಕಂಗನಾ ರನೌತ್ ಅಭಿನಯದ ಹಾಗೂ ಎಎಲ್ ವಿಜಯ್ ನಿರ್ದೇಶನದ ತಲೈವಿ ಚಿತ್ರವನ್ನು ಇಲ್ಲಿನ ಚಿತ್ರಮಂದಿರದಲ್ಲಿ ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಎಐಎಡಿಎಂಕೆ ಹಿರಿಯ ನಾಯಕ ಮತ್ತು ಮಾಜಿ ಸಚಿವ ಡಿ ಜಯಕುಮಾರ್ ಅವರು, ಕೆಲವು ಉಲ್ಲೇಖಗಳು ವಾಸ್ತವಿಕವಲ್ಲ. ಅವುಗಳನ್ನು ತೆಗೆದು ಹಾಕಿದರೆ ತಲೈವಿ ಉತ್ತಮ ಚಿತ್ರ ಎನಿಸಿಕೊಳ್ಳಲಿದೆ ಮತ್ತು ಪಕ್ಷದ ಬೆಂಬಲಿಗರು ಹಾಗೂ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತದೆ ಎಂದರು.
ಉದಾಹರಣೆಗೆ, ಚಿತ್ರದ ಒಂದು ಸನ್ನಿವೇಶದಲ್ಲಿ ಎಂಜಿಆರ್ ಅವರು ಡಿಎಂಕೆ ಸರ್ಕಾರದಲ್ಲಿ ಮಂತ್ರಿ ಸ್ಥಾನವನ್ನು ಬಯಸುತ್ತಾರೆ ಮತ್ತು ದಿವಂಗತ ಎಂ ಕರುಣಾನಿಧಿ ಅವರು ಮಂತ್ರಿ ಸ್ಥಾನ ನಿರಾಕರಿಸುತ್ತಾರೆ ಎಂದಿದೆ. ಆದರೆ ಎಂಜಿಆರ್ ಅವರು ಎಂದೂ ಮಂತ್ರಿ ಸ್ಥಾನಕ್ಕೆ ಆಸೆಪಟ್ಟವರಲ್ಲ ಎಂದು ಜಯಕುಮಾರ್ ಪ್ರತಿಪಾದಿಸಿದ್ದಾರೆ.
ಜಯಲಲಿತಾ ಅವರು ದಿವಂಗತ ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿಯವರೊಂದಿಗೆ ಎಂಜಿಆರ್ ಅವರ ಅರಿವಿಗೆ ಬಾರದಂತೆ ಸಂಪರ್ಕದಲ್ಲಿದ್ದರು ಎಂದು ಸಿನಿಮಾದಲ್ಲಿ ತೋರಿಸಲಾಗಿದೆ. ಈ ಮೂಲಕ ಎಂಜಿಆರ್ ಪಾತ್ರವನ್ನು ಮತ್ತೊಮ್ಮೆ ಕೆಳಮಟ್ಟಕ್ಕಿಳಿಸಲಾಗಿದೆ. ಇದು ನಿಜವಲ್ಲ ಎಂದು ಜಯಕುಮಾರ್ ಹೇಳಿದರು. ಅಲ್ಲದೆ, ಈ ದೃಶ್ಯಗಳನ್ನು ತೆಗೆದುಹಾಕಬೇಕು ಎಂದು ಒತ್ತಾಯಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post