ತಿರುವನಂತಪುರಂ: ರಾಜ್ಯ ಸರ್ಕಾರ ಸೆಪ್ಟೆಂಬರ್ 30 ರೊಳಗೆ ರಾಜ್ಯದಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಮೊದಲ ಡೋಸ್ ಲಸಿಕೆಯನ್ನು ಪೂರ್ಣಗೊಳಿಸುವ ಗುರಿ ಹೊಂದಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಶುಕ್ರವಾರ ಹೇಳಿದ್ದಾರೆ.
ಇಲ್ಲಿಯವರೆಗೆ, 18 ವರ್ಷಕ್ಕಿಂತ ಮೇಲ್ಪಟ್ಟ ಶೇ .78.03 ರಷ್ಟು ಜನರು ಮೊದಲ ಡೋಸ್ ಲಸಿಕೆ ಪಡೆದರೆ, ಶೇ.30.16 ರಷ್ಟು ಜನರು ಎರಡೂ ಡೋಸ್ ಲಸಿಕೆ ಪಡೆದಿದ್ದಾರೆ ಎಂದು ವಿಜಯನ್ ತಿಳಿಸಿದ್ದಾರೆ. ಕೋವಿಡ್ -19 ಮೌಲ್ಯಮಾಪನ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿಎಂ ವಿಜಯನ್, ರಾಜ್ಯದಲ್ಲಿ ಸೆಪ್ಟೆಂಬರ್ 3 ರಿಂದ 9 ರ ವರೆಗೆ ಕೇವಲ ಶೇ. 2 ರಷ್ಟು ಸಕ್ರಿಯ ಪ್ರಕರಣಗಳಿಗೆ ಆಕ್ಸಿಜನ್ ಬೆಡ್ ಗಳು ಬೇಕಾಗಿದ್ದು, ಕೇವಲ ಶೇ. 1 ರಷ್ಟು ಸೋಂಕಿತರು ಐಸಿಯುಗೆ ದಾಖಲಾಗಿದ್ದಾರೆ ಎಂದರು.
45 ವರ್ಷಕ್ಕಿಂತ ಮೇಲ್ಪಟ್ಟ ಶೇ. 93 ರಷ್ಟು ಜನರು ಕೋವಿಡ್ ಲಸಿಕೆಯ ಮೊದಲ ಡೋಸ್ ಪಡೆದರೆ, ಶೇ. 50 ರಷ್ಟು ಜನರು ಎರಡನೇ ಡೋಸ್ ಅನ್ನು ಪಡೆದಿದ್ದಾರೆ ಎಂದು ವಿಜಯನ್ ಹೇಳಿದರು.