ಬೆಳ್ಳಾರೆ ಸೆ 11 : ಹಿಂದೂ ಕಾರ್ಯಕರ್ತರಿಗೆ ಜೀವ ಬೆದರಿಕೆ ಒಡ್ಡಿದ ಆರೋಪದ ಮೇರೆಗೆ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣದ ಆರೋಪಿಯ ಸಹೋದರನನ್ನು ಬೆಳ್ಳಾರೆ ಠಾಣೆ ಪೊಲೀಸರು ಸೆ. 11 ರಂದು ಬೆಳ್ಳಂಬೆಳಗ್ಗೆ ಬಂಧಿಸಿರುವುದಾಗಿ ವರದಿಯಾಗಿದೆ. ಆದರೇ, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ಇವರೆಗೆ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ. ಆದರೇ ಪೊಲೀಸ್ ಮೂಲಗಳು ಬಂಧನವನ್ನು ಖಚಿತಪಡಿಸಿವೆ. ಬೆಳ್ಳಾರೆ ನಿವಾಸಿ, ಇಬ್ರಾಹಿಂ ಎಂಬವರ ಪುತ್ರ ಸಫ್ರಿದ್ ಬಂಧಿತ ಆರೋಪಿ .ಈತ ಪ್ರವೀಣ್ ಹತ್ಯೆಯ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಶಫೀಕ್ ಸಹೋದರ. ಈತನ ತಂದೆ ದಿ. ಪ್ರವೀಣ್ ಅಂಗಡಿಯಲ್ಲಿ ಕೋಳಿ ಕ್ಲಿನಿಂಗ್ ಕೆಲಸ ಮಾಡುತ್ತಿದ್ದು, ಹತ್ಯೆಗಿಂತ 3 ತಿಂಗಳು ಮೊದಲಷ್ಟೇ ಕೆಲಸ ಬಿಟ್ಟಿದ್ದರು. ಆರೋಪಿ ಸಫ್ರಿದ್ ಎಸ್ಡಿಪಿಐ ಪಕ್ಷದ ಸಕ್ರಿಯ ಕಾರ್ಯಕರ್ತ ಎಂದು ಸ್ಥಳೀಯರು ಮಾಧ್ಯಮಕ್ಕೆ ತಿಳಿಸಿದ್ದಾರೆ. ಸ್ಥಳೀಯ ಹಿಂದೂ ಸಂಘಟನೆಯ ಕಾರ್ಯಕರ್ತ, ಬೆಳ್ಳಾರೆಯ “ದೇವಿ ಲೈಟ್ಸ್ ಲಾಡ್ಜಿಂಗ್ ” ನ ಮ್ಯಾನೇಜರ್ ಪ್ರಶಾಂತ್ ರೈ ನಿನ್ನೆ ಸಂಜೆ ಸಫ್ರಿದ್ ಅವಾಚ್ಯ ಶಬ್ಧಗಳಿಂದ ನಿಂದಿಸಿ ಕೊಲೆ ಬೆದರಿಕೆ ಒಡ್ಡಿರುವ ಬಗ್ಗೆ ಬೆಳ್ಳಾರೆ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯ ಬಂಧನಕ್ಕೆ ಬಲೆ ಬೀಸಿದರು. ಪ್ರಕರಣದ ಮಾಹಿತಿ ಬಹಿರಂಗವಾಗುತ್ತಲೇ ಸ್ವತ: ಗೃಹ ಸಚಿವರೇ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಕರೆ ಮಾಡಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವಂತೆ ತಿಳಿಸಿ ಆರೋಪಿಯನ್ನು ಶೀಘ್ರ ಬಂದಿಸುವಂತೆ ಸೂಚಿಸಿದ್ದರು ಎಂದು ಮೂಲಗಳು ತಿಳಿಸಿವೆ. ನಿನ್ನೆ ರಾತ್ರಿ ಆರೋಪಿ ಬಂಟ್ವಾಳ ತಾಲೂಕಿನ ಬಿಸಿ ರೋಡ್ ಎಂಬಲ್ಲಿ ಬಚ್ಚಿಟ್ಟು ಕೊಂಡಿದ್ದಾನೆ ಎಂಬ ಮಾಹಿತಿ ಹರಡಿತ್ತು. ಇಂದು ಮುಂಜಾನೆ ಮಿಂಚಿನ ಕಾರ್ಯಚರಣೆ ನಡೆಸಿದ ಜಿಲ್ಲಾ ಪೊಲೀಸರು ಆರೋಪಿಯನ್ನು ಆತ ಬಚ್ಚಿಟ್ಟುಕೊಂಡಲ್ಲಿಂದ ದಸ್ತಗಿರಿ ಮಾಡಿದ್ದಾರೆ.
ಪ್ರಕರಣದ ವಿವರ : ಶನಿವಾರ ಬೆಳಿಗ್ಗೆ ಪ್ರಶಾಂತ್ ರೈವರ ಮೊಬೈಲ್ʼಗೆ ಆರೋಪಿ ಕರೆ ಮಾಡಿದ್ದಾನೆ. ಕರೆ ಸ್ವೀಕರಿಸಿದ ಪ್ರಶಾಂತ್ ಅವರ ಬಳಿ ಅಪರಿಚಿತನಂತೆ ಮಾತನಾಡಿ, ಆ ನಂಬರ್ ಯಾರದ್ದು ಅನ್ನುವ ರೀತಿ ವಿಚಾರಿಸಿದ್ದಾನೆ. ಈ ವೇಳೆ ಪ್ರಶಾಂತ್ ಆರೋಪಿಯ ಗುರುತು ಹಿಡಿದು, ತಾನು ಆತನಿಗೆ ಬಾಡಿಗೆ ಮನೆ ಮಾಡಿ ಕೊಟ್ಟಿರುವ ವಿಚಾರ ತಿಳಿಸಿದ್ದಾರೆ. ಈ ವೇಳೆ ಆರೊಪಿಯು ಪ್ರಶಾಂತರ ಬಳಿ ನೀವು ನನ್ನ ಆತ್ಮೀಯರಲ್ಲಿ ನನ್ನ ಬಗ್ಗೆ ಇಲ್ಲ ಸಲ್ಲದ್ದು ಹೇಳಿದ್ದೀರಿ ಎಂದು ಆರೋಪಿಸಿದ್ದು, ಇದನ್ನು ನಿರಾಕರಿಸಿದ ಪ್ರಶಾಂತ್ ಹಾಗೇ ಹೇಳಿದ ವ್ಯಕ್ತಿಯನ್ನು ತೋರಿಸುವಂತೆ ಹೇಳಿದ್ದಾರೆ. ಈ ವೇಳೆ ಅವರಿಬ್ಬರ ಮಾತಿನ ಚಕಮಕಿಯಾಗಿದೆ ಎಂದು ಮೂಲಗಳು ಇವರಿಬ್ಬರು ಆಡಿದ್ದಾರೆ ಎನ್ನಲಾದ ಪೋನ್ ಸಂಭಾಷನೆಯ ಆಡಿಯೋವನ್ನು ಉಲ್ಲೇಖಿಸಿ ಮಾಧ್ಯಮಕ್ಕೆ ತಿಳಿಸಿದ್ದಾರೆ. ಪ್ರಶಾಂತ್ ರೈ ಗೆ ಕೊಲೆ ಬೆದರಿಕೆ ಹಾಕಿರುವ ಮಾಹಿತಿ ಬಹಿರಂಗವಾಗುತ್ತಲೇ ನಿನ್ನೆ ಇಳಿಸಂಜೆ ಬೆಳ್ಳಾರೆ ಪೋಲಿಸ್ ಠಾಣೆ ಮುಂಭಾಗ ದೊಡ್ಡ ಸಂಖ್ಯೆಯಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರು ಜಮಾಯಿಸಿದ್ದರು. ಈ ವೇಳೆ ಮಾಧ್ಯಮದ ಜೊತೆ ಮಾತನಾಡಿದ ಹಿಂದೂ ಸಂಘಟನೆಯ ಮುಖಂಡರು ಕೊಲೆ ಬೆದರಿಕೆ ಹಾಕಿರುವ ಸಫ್ರಿದ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಆತನನ್ನು 24 ಗಂಟೆಯೊಳಗೆ ಬಂಧಿಸಬೇಕು. ಇಲ್ಲದಿದ್ದರೆ ಬೆಳ್ಳಾರೆ ಬಂದ್ ಗೆ ಕರೆ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post