ಮಂಗಳೂರು, ಅ.11: ಓಲಾ ಮತ್ತು ರಾಪಿಡೋ ಏಪ್ ನಲ್ಲಿ ಟ್ಯಾಕ್ಸಿ ಬುಕ್ ಮಾಡಿಸಿ, ಕರೆ ಮಾಡಿದ ಚಾಲಕನಿಗೆ ಮುಸ್ಲಿಂ ಟೆರರಿಸ್ಟ್ ಎಂದು ಹೇಳಿ ನಿಂದನೆ ಮಾಡಿರುವ ಘಟನೆ ಬಗ್ಗೆ ಉರ್ವಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅ.9ರಂದು ರಾತ್ರಿ 10 ರಿಂದ 12 ಗಂಟೆಯ ನಡುವೆ ಘಟನೆ ನಡೆದಿದ್ದು, ಮಲಯಾಳಂ ಸೀರಿಯಲ್ ಮತ್ತು ಸಿನಿಮಾ ನಟ ಜಯಕೃಷ್ಣನ್, ಸಂತೋಷ್ ಅಬ್ರಹಾಂ ಮತ್ತು ವಿಮಲ್ ಈ ರೀತಿ ಮಾಡಿದ್ದಾರೆಂಬ ಆರೋಪ ಕೇಳಿಬಂದಿದೆ.
ಓಲಾ ಮತ್ತು ರಾಪಿಡೋದಲ್ಲಿ ಟ್ಯಾಕ್ಸಿ ಬುಕ್ ಮಾಡಿ, ಆಬಳಿಕ ಲೊಕೇಶನ್ ಹಾಕಿದ್ದರು. ಎಲ್ಲಿದ್ದೀರಿ ಎಂದು ಚಾಲಕ ಕರೆ ಮಾಡಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಲ್ಲದೆ, ಕರೆ ಮಾಡಿದ ವ್ಯಕ್ತಿಯನ್ನು ಮುಸ್ಲಿಂ ಎಂದು ತಿಳಿದು ನೀನು ಟೆರರಿಸ್ಟ್, ಮುಸ್ಲಿಂ ತೀವ್ರವಾದಿ ಎಂದು ಹೇಳಿ ನಿಂದನೆ ಮಾಡಿದ್ದಾರೆ. ಇದರ ಆಡಿಯೋವನ್ನು ಚಾಲಕ ರೆಕಾರ್ಡ್ ಮಾಡಿದ್ದು, ಈ ಬಗ್ಗೆ ಕ್ಯಾಬ್ ಚಾಲಕ ಅಹ್ಮದ್ ಶಫೀಕ್ ರವರು ನೀಡಿದ ದೂರಿನಂತೆ ದಿನಾಂಕ: 10.10.2025 ರಂದು ಉರ್ವ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ: 103/2025 ಕಲಂ: 352, 353(2) ಬಿ.ಎನ್.ಎಸ್ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೂರಿನಂತೆ ವಿಮಲ್, ಸಂತೋಷ್ ಮತ್ತು ಇನ್ನೊಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. ಚಾಲಕನ ಮಾಹಿತಿ ಪ್ರಕಾರ, ಮಲಯಾಳಂ ಸಿನಿಮಾ ನಟರಾದ ಜಯಕೃಷ್ಣನ್ ಮತ್ತು ವಿಮಲ್ ಈ ರೀತಿ ಮಾಡಿದ್ದಾರೆಂದು ಆರೋಪಗಳಿವೆ. ಎಫ್ಐಆರ್ ಪ್ರತಿಯಲ್ಲಿ ಜಯಕೃಷ್ಣನ್ ಹೆಸರಿಲ್ಲ. ಆಬಳಿಕ ಸ್ನೇಹಿತರ ಮೂಲಕ ಇವರಿದ್ದ ಜಾಗವನ್ನು ಟ್ಯಾಕ್ಸಿಯವರು ಪತ್ತೆ ಮಾಡಿದ್ದಾರೆ.
ಈ ವೇಳೆ, ಬಿಜೈ ನ್ಯೂರೋಡ್ ಬಳಿ ಕೇರಳ ನೋಂದಣಿಯ ಸ್ಕಾರ್ಪಿಯೋ ಕಾರಿನಲ್ಲಿ ಕುಳಿತು ಮದ್ಯದ ನಶೆಯಲ್ಲಿ ಇವರು ಓಲಾ ಬುಕ್ ಮಾಡಿದ್ದು ಪತ್ತೆಯಾಗಿದೆ. ಬೇರೆ ಬೇರೆ ಕಡೆ ಲೊಕೇಶನ್ ಹಾಕಿ ದಾರಿ ತಪ್ಪಿಸುವಂತೆ ವರ್ತಿಸಿದ್ದಾರೆ. ಅಲ್ಲದೆ, ಟೆರರಿಸ್ಟ್ ಎಂದು ಹೇಳಿ ನಿಂದಿಸಿದ್ದಾರೆಂದು ದೂರಿನಲ್ಲಿ ಅಹ್ಮದ್ ಶಫೀಕ್ ತಿಳಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post