ಮಂಗಳೂರು: ಮಂಗಳೂರು ಕಮಿಷನರೇಟ್ ವ್ಯಾಪ್ತಿ ಹಾಗೂ ಉಡುಪಿ ಜಿಲ್ಲೆಯ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕ್‌ನಲ್ಲಿ ಬಂದು ಮಹಿಳೆಯರ ಕುತ್ತಿಗೆಯಿಂದ ಚಿನ್ನದ ಸರವನ್ನು ಸುಲಿಗೆ ಮಾಡಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಕೃತ್ಯ ನಡೆದ 24 ಗಂಟೆಯೊಳಗಡೆ ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಚಿನ್ನದ ಸರ ಹಾಗೂ ಕಳವುಗೈದ ಬೈಕ್‌ನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಆರೋಪಿಗಳನ್ನು ಕೃಷ್ಣಾಪುರ ಮೂಲದ ಹಬೀಬ್ ಹಸನ್ ಯಾನೆ ಚೊಂಬುಗುಡ್ಡೆ ಹಬೀಬ್ ಯಾನೆ ಅಬ್ಬಿ (43) ಮತ್ತು ಬಂಟ್ವಾಳ ತಾಲೂಕಿನ ಪರ್ಲಿಯಾ ನಿವಾಸಿ ಉಮ್ಮರ್ ಶಿಯಾಫ್ (29 ) ಎಂದು ಗುರುತಿಸಲಾಗಿದೆ.
ಡಿ.06ರಂದು ನರಿಂಗಾನ ಗ್ರಾಮದ ತೌಡುಗೋಳಿ ಅಂಗನವಾಡಿ ಕೇಂದ್ರದಲ್ಲಿ ಅಡುಗೆ ಸಹಾಯಕರಾಗಿ ಕೆಲಸ ಮಾಡಿಕೊಂಡಿದ್ದ ಸುಜಿನಾ ಡಿಸೊಜಾ ಅವರು ಅಂಗನವಾಡಿಯಲ್ಲಿ ಕೆಲಸದಲ್ಲಿರುವ ಸಮಯ ಮಧ್ಯಾಹ್ನ 1.15 ಗಂಟೆ ಸುಮಾರಿಗೆ ಇಬ್ಬರು ಬೈಕಿನಲ್ಲಿ ಅಂಗನವಾಡಿಗೆ ಬಂದು, ಬೈಕಿನಿಂದ ಇಳಿದು ಮಂಜನಾಡಿಗೆ ಹೋಗುವ ದಾರಿಯ ಬಗ್ಗೆ ವಿಚಾರಿಸಿದ್ದರು. ಸುಜಿನಾ ಅವರು ಮಂಜನಾಡಿಗೆ ಹೋಗುವ ದಾರಿಯನ್ನು ಹೇಳಿ, ಅಂಗನವಾಡಿಯ ಬಾಗಿಲನ್ನು ಹಾಕುವಷ್ಟರಲ್ಲಿ ಬಾಗಿಲನ್ನು ದೂಡಿ ಅಂಗನವಾಡಿಯ ಒಳಗೆ ಪ್ರವೇಶಿಸಿ, ಸುಜಿನಾರವರ ಕುತ್ತಿಗೆಯ ಚಿನ್ನದ ಸರವನ್ನು ಸುಲಿಗೆ ಮಾಡಿ ಆರೋಪಿಗಳು ಬೈಕ್ ಸಮೇತ ಪರಾರಿಯಾಗಿದ್ದರು. ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಡಿ.09ರಂದು ಉಡುಪಿ ಜಿಲ್ಲೆಯ ಕಾರ್ಕಳ ಗ್ರಾಮಾಂತರ ಠಾಣೆಯ ಬೋಳ ಗ್ರಾಮದ ಸುಂಕಮಾರು- ಮಂಜರಪಲ್ಕೆ ಎಂಬಲ್ಲಿ ಸಾರ್ವಜನಿಕ ರಸ್ತೆಯಲ್ಲಿ ಮನೆಗೆ ನಡೆದು ಹೋಗುತ್ತಿದ್ದ ವಸಂತಿ ಎಂಬವರಲ್ಲಿ ಬೈಕ್ ನಲ್ಲಿ ಬಂದಿದ್ದ ಯುವಕ ಮತ್ತು ಯುವತಿ ಭಾಸ್ಕರ್ ಎಂಬವರ ಮನೆಗೆ ಹೋಗುವ ದಾರಿ ಯಾವುದೆಂದು ಕೇಳಿ ವಸಂತಿಯವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಸುಲಿಗೆ ಮಾಡಿ ಪರಾರಿಯಾಗಿದ್ದರು. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಜೈಲಿನಿಂದ ಬಿಡುಗಡೆಗೊಂಡಿದ್ದ : ತನಿಖೆ ನಡೆಸುತ್ತಿದ್ದಾಗ ಈ ಹಿಂದೆ ಹಲವು ಸರಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿ ಸುಮಾರು 4 ದಿನಗಳ ಹಿಂದೆ ಜೈಲ್‌ನಿಂದ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದ ಹಬೀಬ್ ಹಸನ್ ಹಾಗೂ ಆತನ ಸಹಚರ ಭಾಗಿಯಾಗಿರುವ ಕುರಿತು ಮಾಹಿತಿ ಲಭಿಸಿತ್ತು. ಆಗ ಮಂಗಳೂರು ನಗರದ ಕಾರ್‌ಸ್ಟ್ರೀಟ್ ಬಳಿಯಲ್ಲಿದ್ದಾನೆ ಎನ್ನುವ ಮಾಹಿತಿ ಬಂದಂತೆ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಚೆಂಬುಗುಡ್ಡೆ, ಪೆರ್ಮನೂರು ನಿವಾಸಿ ಹಬೀಬ್ ಹಸನ್@ ಚೊಂಬುಗುಡ್ಡೆ ಹಬೀಬ್ @ ಅಬ್ಬಿ (43) ಮತ್ತು ಬಂಟ್ವಾಳ ಬಿ.ಮೂಡ ಗ್ರಾಮದ ಉಮ್ಮರ್ ಶಿಯಾಫ್, (29) ಬಂಧಿತರು. ಹಬೀಬ್ ಹಸನ್ ಅಬ್ಬಿ ಎಂಬಾತನ ವಶದಿಂದ ಕಾರ್ಕಳದಿಂದ ಸುಲಿಗೆ ಮಾಡಿದ 17.43 ಗ್ರಾಂ ಚಿನ್ನದ ಸರ, ಸರ ಕಳ್ಳತನ ಮಾಡಲು ಉಪಯೋಗಿಸಿದ ಕೆಎ-19-ವಿ-9160 ನೇ ಹೀರೋ ಹೊಂಡಾ ಬೈಕ್, ಚೂರಿ-1 ನ್ನು ವಶಪಡಿಸಲಾಗಿದೆ.
ಆರೋಪಿಗಳಿಬ್ಬರು ಈ ಹಿಂದೆ 2 ತಿಂಗಳ ಹಿಂದೆ ಮೂಡಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2 ಕಡೆ ಮಹಿಳೆಯರ ಕುತ್ತಿಗೆಯಿಂದ ಸರಕಳ್ಳತನ ಮಾಡಿ ದಸ್ತಗಿರಿಯಾಗಿ ಮಂಗಳೂರು ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದರು. ಡಿ. 06ರಂದು ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದು, ಅದೇ ದಿನವೇ ಮಂಗಳೂರು ನಗರದ ಜೈಲ್ ರಸ್ತೆಯ ಪರಿಸರದಲ್ಲಿ ಬೈಕ್ ಕಳ್ಳತನ ಮಾಡಿ ಮರುದಿನ ಆರೋಪಿಗಳಿಬ್ಬರು ಕೊಣಾಜೆ ಠಾಣಾ ವ್ಯಾಪ್ತಿಯ ತೌಡುಗೋಳಿ ಬಳಿ ಮಹಿಳೆಯ ಕುತ್ತಿಗೆಯಿಂದ ಚಿನ್ನದ ಸರವನ್ನು ಸುಲಿಗೆ ಮಾಡಿದ್ದರು. ಅಲ್ಲದೇ 2 ದಿನ ಬಿಟ್ಟು ಮಂಗಳೂರು ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣ ಪರಿಸರದಲ್ಲಿ ನಿಲ್ಲಿಸಿದ್ದ ಇನ್ನೊಂದು ಬೈಕ್ ನ್ನು ಕಳವು ಮಾಡಿ ಅದೇ ಬೈಕ್ ನಲ್ಲಿ ಆರೋಪಿ ಹಬೀಬ್ ಆತನ ಸ್ನೇಹಿತೆ ಮಹಿಳೆಯ ಜೊತೆಗೂಡಿ ಕಾರ್ಕಳದಲ್ಲಿ ಮಹಿಳೆಯೋರ್ವರ ಕುತ್ತಿಗೆಯಿಂದ ಚಿನ್ನದ ಸರವನ್ನು ಸುಲಿಗೆ ಮಾಡಿರುವುದಾಗಿದೆ.
ಆರೋಪಿಗಳ ಪೈಕಿ ಹಬೀಬ್ ಹಸನ್ @ ಅಬ್ಬಿ ಎಂಬಾತನ ವಿರುದ್ಧ ಈ ಹಿಂದೆ ಮಂಗಳೂರು ನಗರದ ಬರ್ಕೆ, ಮೂಡಬಿದ್ರಿ, ಸುರತ್ಕಲ್, ಉಳ್ಳಾಲ,, ಕೊಣಾಜೆ, ಬಜ್ಪೆ, ವಿಟ್ಲ, ಬಂಟ್ವಾಳ ನಗರ, ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ಒಟ್ಟು 39 ಕಳವು, ಜಾನುವಾರು ಕಳವು, ಸರಕಳ್ಳತನ ಪ್ರಕರಣಗಳು ದಾಖಲಾಗಿರುತ್ತದೆ. ಆರೋಪಿ ಉಮ್ಮರ್ ಶಿಯಾಫ್ ಎಂಬಾತನು ಈ ಹಿಂದೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ, ಹಾಗೂ ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ 2 ಸರಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುತ್ತಾನೆ.
ಸಿಸಿಬಿ ಘಟಕದ ಎಸಿಪಿ ಮನೋಜ್ ಕುಮಾರ್ ನಾಯ್ಕ್ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕರಾದ ಶ್ಯಾಮ್ ಸುಂದರ್ ಹೆಚ್ ಎಂ, ಪಿಎಸ್ಐಯವರಾದ ಸುದೀಪ್ ಎಂ ವಿ, ಎಎಸ್ಐ ಯವರಾದ ಮೋಹನ್ ಕೆ ವಿ, ರಾಮ ಪೂಜಾರಿ, ಸುಜನ್ ಶೆಟ್ಟಿ ಮತ್ತು ಸಿಸಿಬಿ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post