ಮಂಗಳೂರು: ಮಂಗಳೂರು ನಗರ ವ್ಯಾಪ್ತಿಯ ಕಾಲೇಜು ಆವರಣಗಳಲ್ಲಿ ಮಾದಕ ಜಾಲದ ವಿರುದ್ಧ ಜಾಗೃತಿ ಹಾಗೂ ಡ್ರಗ್ಸ್ ತಪಾಸಣೆ ಅಭಿಯಾನವನ್ನು ಪೊಲೀಸರು ಕೈಗೊಂಡಿದ್ದು ಒಂದು ತಿಂಗಳ ಅವಧಿಯಲ್ಲಿ 20 ವಿದ್ಯಾರ್ಥಿಗಳಲ್ಲಿ ಡ್ರಗ್ಸ್ ಪಾಸಿಟಿವ್ ಇರುವುದು ಪತ್ತೆಯಾಗಿದೆ. ಕಮಿಷನರೇಟ್ ವ್ಯಾಪ್ತಿಯಲ್ಲಿ ಈವರೆಗೆ 77 ಶಾಲೆ, ಕಾಲೇಜುಗಳಲ್ಲಿ ತಪಾಸಣೆ ನಡೆಸಲಾಗಿದೆ.
ಮಂಗಳೂರು ನಗರ ಪೊಲೀಸ್ ಕಮಿಷನರ್ ಆಗಿ ಸುಧೀರ್ ಕುಮಾರ್ ರೆಡ್ಡಿ ಅವರು ಅಧಿಕಾರ ಸ್ವೀಕರಿಸಿದ ಬಳಿಕ ಮಾದಕ ಮಾರಾಟ ಮತ್ತು ಸೇವನೆ ವಿರುದ್ಧ ಸಮರ ಸಾರಿದ್ದಾರೆ. ಮುಖ್ಯವಾಗಿ ಕಾಲೇಜು ಕ್ಯಾಂಪಸ್‌ಗಳಲ್ಲಿ ಮಾದಕ ಸಾಗಾಟ ಮತ್ತು ಸೇವನೆ ಅಧಿಕವಾಗುತ್ತಿರುವ ದೂರಿನ ಹಿನ್ನೆಲೆಯಲ್ಲಿ ಕಮಿಷನರ್ ದಿಟ್ಟ ಕ್ರಮಕ್ಕೆ ಮುಂದಾಗಿದ್ದರು. ಇದರ ವಿರುದ್ಧ ಕೆಲವೊಂದು ಕಾಲೇಜುಗಳ ಆಡಳಿತ ಮಂಡಳಿ ಆಕ್ಷೇಪ ವ್ಯಕ್ತಪಡಿಸಿದ್ದರೂ ತನ್ನ ನಿಲುವಿನಿಂದ ಹಿಂಜರಿಯದೆ ರ‍್ಯಾಡಂಮ್ ಟೆಸ್ಟ್‌ಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಜೂ.1ರಿಂದ ನ.30ರವರೆಗೆ ಕಾಲೇಜು ಕ್ಯಾಂಪಸ್‌ಗಳಲ್ಲಿ ಮೊದಲ ಹಂತದ ಮಾದಕ ಸೇವನೆ ರ‍್ಯಾಡಂಮ್ ಟೆಸ್ಟ್ ಮುಗಿದಿದೆ. ಮಂಗಳೂರು ದಕ್ಷಿಣ ಉಪವಿಭಾಗದ (ಉಳ್ಳಾಲ, ಕೋಣಾಜೆ, ಮಂಗಳೂರು ಗ್ರಾಮಾಂತರ ಠಾಣೆ) ಒಟ್ಟು 29 ಕಾಲೇಜುಗಳಲ್ಲಿ 1601 ವಿದ್ಯಾರ್ಥಿಗಳ ತಪಾಸಣೆ ನಡೆಸಲಾಗಿದ್ದು, 8 ಮಂದಿ ಪಾಸಿಟಿವ್, 1593 ನೆಗೆಟಿವ್ ಬಂದಿದೆ.
ಮಂಗಳೂರು ಕೇಂದ್ರ ಉಪ ವಿಭಾಗದ (ಬಂದರು, ಬರ್ಕೆ, ಪಾಂಡೇಶ್ವರ, ಕದ್ರಿ ಉರ್ವ ಠಾಣೆ) 30 ಕಾಲೇಜುಗಳಲ್ಲಿ 1448 ವಿದ್ಯಾರ್ಥಿಗಳನ್ನು ತಪಾಸಣೆ ನಡೆಸಲಾಗಿದ್ದು, 6 ಮಂದಿ ಪಾಸಿಟಿವ್, 1442 ಮಂದಿ ನೆಗೆಟಿವ್ ಬಂದಿದ್ದಾರೆ. ಮಂಗಳೂರು ಉತ್ತರ ಉಪ ವಿಭಾಗದ (ಪಣಂಬೂರು, ಕಾವೂರು, ಬಜಪೆ, ಸುರತ್ಕಲ್, ಮೂಲ್ಕಿ, ಮೂಡುಬಿದಿರೆ) 11 ಕಾಲೇಜುಗಳಲ್ಲಿ 2020 ವಿದ್ಯಾರ್ಥಿಗಳ ತಪಾಸಣೆ ನಡೆಸಲಾಗಿದ್ದು, ಒಂದೂ ಕೂಡ ಪಾಸಿಟಿವ್ ಬಂದಿಲ್ಲ. ಒಟ್ಟು ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ 70 ಕಾಲೇಜುಗಳ 5069 ವಿದ್ಯಾರ್ಥಿಗಳ ತಪಾಸಣೆ ನಡೆಸಲಾಗಿದ್ದು, 14 ಮಂದಿಯಲ್ಲಿ ಪಾಸಿಟಿವ್ ಬಂದಿದ್ದಾರೆ.
ಕೆಲ ಕಾಲೇಜುಗಳು ಹಿಂದೇಟು : ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಕೆಲವೊಂದು ಕಾಲೇಜುಗಳ ಆಡಳಿತ ಮಂಡಳಿ ರ‍್ಯಾಡಂಮ್ ಮಾದಕ ಪರೀಕ್ಷೆಗೆ ಹಿಂದೇಟು ಹಾಕಿ, ಸಹಕಾರ ನೀಡಲಿಲ್ಲ. ಈ ಹಿನ್ನೆಲೆಯಲ್ಲಿ ಕ್ಯಾಂಪಸ್ ಸುತ್ತಮುತ್ತ ಸ್ವತಃ ಪೊಲೀಸರೇ ಗಸ್ತು ಮಾಡಿ ವಿದ್ಯಾರ್ಥಿಗಳ ತಪಾಸಣೆ ನಡೆಸಿದ್ದಾರೆ. ಈ ಸಂದರ್ಭ ಕೆಲವೊಂದು ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಪಾಸಿಟಿವ್ ಬಂದಿದ್ದು, ಆ ವಿದ್ಯಾರ್ಥಿಗಳ ವರದಿಯನ್ನು ಕಾಲೇಜು ಆಡಳಿತ ಮಂಡಳಿ ಗಮನಕ್ಕೆ ತರಲಾಯಿತು. ಇದರಿಂದ ಎಚ್ಚೆತ್ತುಕೊಂಡ ಕಾಲೇಜು ಆಡಳಿತ ಮಂಡಳಿ ಬಳಿಕ ಕಾಲೇಜು ಕ್ಯಾಂಪಸ್‌ನಲ್ಲಿ ರ‍್ಯಾಡಂಮ್ ಮಾದಕ ತಪಾಸಣೆಗೆ ಅನುಮತಿ ನೀಡಿತು.
ಕಾಲೇಜು ಕ್ಯಾಂಪಸ್ ಸುತ್ತಮುತ್ತ ಪೊಲೀಸರು ಗಸ್ತು ನಡೆಸಿ ತಪಾಸಣೆ ನಡೆಸಿದ ಸಂದರ್ಭ ಮಂಗಳೂರು ದಕ್ಷಿಣ ಉಪ ವಿಭಾಗದಲ್ಲಿ 3 ಕಾಲೇಜುಗಳ 30 ಮಂದಿ ವಿದ್ಯಾರ್ಥಿಗಳನ್ನು ತಪಾಸಣೆ ನಡೆಸಲಾಗಿದ್ದು ಯಾವುದೇ ಪಾಸಿಟಿವ್ ಇರಲಿಲ್ಲ. ಮಂಗಳೂರು ಕೇಂದ್ರ ಉಪ ವಿಭಾಗದಲ್ಲಿ 18ಕಾಲೇಜು 88 ಮಂದಿ ವಿದ್ಯಾರ್ಥಿಗಳನ್ನು ತಪಾಸಣೆ ನಡೆಸಲಾಗಿದ್ದು 4 ಮಂದಿಗೆ ಪಾಸಿಟಿವ್ ಬಂದಿದೆ. ಮಂಗಳೂರು ಉತ್ತರ ಉಪ ವಿಭಾಗದಲ್ಲಿ7 ಕಾಲೇಜುಗಳ 139 ಮಂದಿ ವಿದ್ಯಾರ್ಥಿಗಳ ತಪಾಸಣೆ ನಡೆಸಲಾಗಿದ್ದು, ಇಬ್ಬರಿಗೆ ಪಾಸಿಟಿವ್ ಬಂದಿದೆ.
ಮಂಗಳೂರು ನಗರ ವ್ಯಾಪ್ತಿಯಲ್ಲಿ ಕಾಲೇಜು ಕ್ಯಾಂಪಸ್‌ಗಳಲ್ಲಿ ಈಗಾಗಲೇ ಮಾದಕ ವಿರುದ್ಧ ಕಾರ್ಯಾಚರಣೆ ನಡೆಯುತ್ತಿದ್ದು, ಕಾಲೇಜು ಆಡಳಿತ ಮಂಡಳಿಗೆ ಕಾಲೇಜು ಪ್ರವೇಶಾತಿ ವೇಳೆಯೇ ಮಾದಕ ತಪಾಸಣೆ ನಡೆಸಿ ಕಾಲೇಜು ಸೀಟು ನೀಡಿದರೆ ಉತ್ತಮ ಮತ್ತು ಒಳ್ಳೆಯ ಸಂದೇಶ ರವಾನೆಯಾಗುತ್ತದೆ ಎನ್ನುತ್ತಾರೆ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ.
ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಕೆಲವೊಂದು ಕಾಲೇಜುಗಳಲ್ಲಿ ಡ್ರಗ್ಸ್ ತಪಾಸಣೆ ನಡೆಸಿಯೇ ಆ ವರದಿ ಬಳಿಕ ಕಾಲೇಜು ಪ್ರವೇಶಾತಿಗೆ ಅನುಮತಿ ನೀಡುತ್ತಿದೆ. ಇದೇ ಮಾದರಿಯನ್ನು ಎಲ್ಲ ಕಾಲೇಜುಗಳು ಅನುಷ್ಠಾನ ಮಾಡಿದರೆ ಕಾಲೇಜು ಕ್ಯಾಂಪಸನ್ನು ಡ್ರಗ್ಸ್ ಮುಕ್ತಗೊಳಿಸಲು ಅನುಕೂಲ ಎನ್ನುತ್ತಾರೆ ಕಮಿಷನರ್.
Discover more from Coastal Times Kannada
Subscribe to get the latest posts sent to your email.







Discussion about this post