ಉಡುಪಿ: ಅಜ್ಜರಕಾಡಿನಲ್ಲಿ ನೂತನವಾಗಿ ನಿರ್ಮಾಣವಾಗಿರುವ ಡಾ.ಬನ್ನಂಜೆ ಗೋವಿಂದಾಚಾರ್ಯ ಸ್ಮಾರಕ ಡಿಜಿಟಲ್ ಗ್ರಂಥಾಲಯ ಉದ್ಘಾಟಿಸಿ, ಬನ್ನಂಜೆ ಗೋವಿಂದಾಚಾರ್ಯರ ಪುತ್ಥಳಿಯನ್ನು ಅನಾವರಣಗೊಳಿಸಿ ಮಾತನಾಡಿದ ಸಿಎಂ, ‘ತತ್ವಜ್ಞಾನ ಮನುಷ್ಯನ ಗುಣಧರ್ಮಗಳನ್ನು ರೂಪಿಸುವಂಥದ್ದು. ನ್ಯಾಯ, ನೀತಿ, ಧರ್ಮಗಳ ಪಾಲನೆ, ಸರಿ–ತಪ್ಪುಗಳ ಮಂಥನ, ಪಾಪ–ಪುಣ್ಯಗಳ ಗಳಿಕೆಯೇ ತತ್ವಜ್ಞಾನ , ಮನುಷ್ಯ ಸಾಮಾಜಿಕ ಜೀವಿಯಾಗಿ ಬದಲಾದ ನಂತರ ಜ್ಞಾನ ಸಂಪಾದಿಸಿದ. ಜ್ಞಾನದಿಂದ ವಿಜ್ಞಾನ, ವಿಜ್ಞಾನದಿಂದ ತಂತ್ರಜ್ಞಾನ, ತಂತ್ರಜ್ಞಾನದಿಂದ ತಂತ್ರಾಂಶ ಜ್ಞಾನ ಸಂಪಾದಿಸಿದ. ಹೀಗೆ, ಪ್ರತಿ ಬದಲಾವಣೆಯೂ ಬದುಕಿನ ಆಯಾಮಗಳನ್ನು ಬದಲಿಸುತ್ತಾ ಹೋಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬಜೆಟ್‍ನಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಪಠ್ಯಕ್ರಮ ಪ್ರಶ್ನೆಪತ್ರಿಕೆ ವ್ಯವಸ್ಥೆಯಿರುವ ‘ಮುಖ್ಯಮಂತ್ರಿ ಮಾರ್ಗದರ್ಶಿ’ಯನ್ನು ಗ್ರಂಥಾಲಯದಲ್ಲಿ ಬಳಸಿಕೊಳ್ಳಬೇಕು. ಎಲ್ಲ ಮಕ್ಕಳಿಗೂ ಇದರ ಲಾಭ ಸಿಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
‘ಯುವಕರು ದೇಶ, ನಾಡು, ಬದುಕಿನ ಬಗ್ಗೆ ಆದರ್ಶಗಳನ್ನು ತುಂಬಿಕೊಂಡಿದ್ದು, ಆದರ್ಶಗಳು ದಾರಿದೀಪವಾಗಲಿವೆ. ಸಾಧನೆಗಳು ಹಾಗೂ ಅಸ್ತಿತ್ವದ ಮೇಲೆ ನಂಬಿಕೆಯಿಟ್ಟಾಗ ಜಗತ್ತನ್ನು ಗೆಲ್ಲಬಹುದು’ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಯುವಕರಿಗೆ ಕಿವಿ ಮಾತು ಹೇಳಿದರು.
ಉಡುಪಿ ಶಾಸಕ ರಘುಪತಿ ಭಟ್ ಮಾತನಾಡಿ ತುಳುನಾಡಿನ ಶೈಲಿಯಲ್ಲಿ ಗ್ರಂಥಾಲಯ ನಿರ್ಮಾಣವಾಗಿದ್ದು, ಶಾಂತ ಹಾಗೂ ಸುಂದರ ಪರಿಸರದಲ್ಲಿ ಎಲ್ಲ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಗ್ರಂಥಾಲಯ ನಿರ್ಮಾಣವಾಗಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಕಾಪು ಶಾಸಕ ಲಾಲಾಜಿ ಆರ್.ಮೆಂಡನ್, ವಿಧಾನಪರಿಷತ್ ಶಾಸಕ ಮಂಜುನಾಥ ಭಂಡಾರಿ, ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್ ನಾಯಕ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮನೋಹರ್ ಎಸ್ ಕಲ್ಮಾಡಿ, ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಡಾ. ಸತೀಶ್ ಕುಮಾರ್ ಎಸ್. ಹೊಸಮನಿ, ಜಿಲ್ಲಾಧಿಕಾರಿ ಕೂರ್ಮಾರಾವ್, ಸಿಇಒ ಡಾ. ನವೀನ್ ಭಟ್ ವೈ, ಎಸ್‌ಪಿ ವಿಷ್ಣುವರ್ಧನ್, ಜಿಲ್ಲಾ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ಜಯಶ್ರೀ, ನಗರ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ಜಿ.ಐ.ನಳಿನಿ ಬನ್ನಂಜೆ ಗೋವಿಂದಾಚಾರ್ಯರ ಪುತ್ರ ವಿನಯ ಭೂಷಣ ಆಚಾರ್ಯ ಇದ್ದರು.
Discover more from Coastal Times Kannada
Subscribe to get the latest posts sent to your email.
Discussion about this post