ಮಂಗಳೂರು: ಸಂತೋಷ್ ಆತ್ಮಹತ್ಯೆಯ ಕುರಿತು ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸಲಿದ್ದಾರೆ. ತನಿಖೆಯ ಪ್ರಾಥಮಿಕ ಮಾಹಿತಿಯ ವರದಿ ಬಂದ ಬಳಿಕವೇ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಇದೇವೇಳೆ, ಮುಂದಿನ ಚುನಾವಣೆಯನ್ನು ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳ ಆಧಾರದಲ್ಲಿಯೇ ಎದುರಿಸಲಿದ್ದೇವೆ ಎಂದರು. ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುತ್ವ ಮತ್ತು ಅಭಿವೃದ್ಧಿ ಪೈಕಿ ಬಿಜೆಪಿ ಯಾವ ವಿಚಾರದಲ್ಲಿ ಚುನಾವಣೆ ಎದುರಿಸಲಿದೆ ಎಂಬ ಪ್ರಶ್ನೆಗೆ ಉತ್ತರಿಸಿದರು.
ಈ ಹಿಂದೆ ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಾಗ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅಥವಾ ಬೇರೆ ಸಚಿವರು ರಾಜೀನಾಮೆ ನೀಡಿದ್ದಾರೆಯೇ? ಎಂದು ಪ್ರಶ್ನಿಸಿದ ಅವರು, ಆದರೆ ಪ್ರತಿ ಜೀವಕ್ಕೂ ಮೌಲ್ಯ ಇದೆ. ವ್ಯಕ್ತಿಗೆ ಅವರದ್ದೇ ಜೀವನ ಇದೆ. ಅದನ್ನು ಗೌರವಿಸಬೇಕು. ನಾವು ತನಿಖೆಯಲ್ಲಿ ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡುತ್ತಿದ್ದೇವೆ ಎಂದರು.
ಈಶ್ವರಪ್ಪ ವಿರುದ್ಧದ ಆರೋಪವನ್ನು ಅವರೇ ಅಲ್ಲಗಳೆದಿದ್ದಾರೆ. ಎಲ್ಲದಕ್ಕೂ ತನಿಖಾ ವರದಿ ಬಂದ ಬಳಿಕ ಪ್ರತಿಕ್ರಿಯಿಸುತ್ತೇನೆ ಎಂದರು. ಕರಾವಳಿಯಲ್ಲಿ ಈ ಹಿಂದೆಯೂ ಗಲಭೆ, ಗದ್ದಲಗಳು ನಡೆದಿದ್ದವು. ಎರಡೂ ಕಡೆಯಿಂದ ಕ್ರಿಯೆ- ಪ್ರತಿಕ್ರಿಯೆ ನಡೆದಿತ್ತು. ಆದರೆ, ಯಾರೇ ಕಾನೂನು ಕೈಗೆತ್ತಿಕೊಂಡರೂ ಸರ್ಕಾರ ಬಿಡುವುದಿಲ್ಲ. ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.