ಕಾಪು, ಮೇ 11: ಚಲಿಸುತ್ತಿದ್ದ ರಿಕ್ಷಾದ ಮೇಲೆ ಭಾರೀ ಗಾತ್ರದ ಮರ ಬಿದ್ದು ಇಬ್ಬರು ಪ್ರಯಾಣಿಕರು ದಾರುಣವಾಗಿ ಮೃತಪಟ್ಟ ಘಟನೆ ಮಜೂರು ಮಸೀದಿ ಬಳಿ ಇಂದು ರಾತ್ರಿ ವೇಳೆ ನಡೆದಿದೆ. ಮೃತರನ್ನು ಶಿರ್ವ ಶಾಂತಿಗುಡ್ಡೆಯ ಪುಷ್ಪಾ(45) ಹಾಗೂ ಕೃಷ್ಣ ಎಂದು ಗುರುತಿಸಲಾಗಿದೆ.
ರಾತ್ರಿ ಸುರಿದ ಭಾರೀ ಗಾಳಿ ಸಹಿತ ಮಳೆಯಿಂದಾಗಿ ರಸ್ತೆ ಬದಿಯ ಬೃಹತ್ ಮರವೊಂದು ಕಾಪು ಕಡೆಯಿಂದ ಶಿರ್ವ ಕಡೆಗೆ ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಿದ್ದ ಶರೀಫ್ ಅವರ ರಿಕ್ಷಾ ಮತ್ತು ಶಿರ್ವ ಕಡೆಯಿಂದ ಕಾಪು ಕಡೆಗೆ ಬರುತ್ತಿದ್ದ ದಿನೇಶ್ ಎಂಬವರ ರಿಕ್ಷಾದ ಮೇಲೆ ಬಿತ್ತೆನ್ನಲಾಗಿದೆ.
ಇದರಿಂದ ಎರಡೂ ರಿಕ್ಷಾಗಳು ಸಂಪೂರ್ಣ ಜಖಂಗೊಂಡಿದ್ದು, ಈ ಎರಡು ರಿಕ್ಷಾಗಳ ಚಾಲಕರು ಅಪಾಯದಿಂದ ಪಾರಾದರು. ಆದರೆ ಶರೀಫ್ ಅವರ ರಿಕ್ಷಾದ ಹಿಂಬದಿಯಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಮರ ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟರು ಎಂದು ತಿಳಿದುಬಂದಿದೆ. ರಿಕ್ಷಾದ ಮೇಲಿನಿಂದ ಮರ ತೆರವು ಗೊಳಿಸಲು ಒಂದು ಗಂಟೆಯಿಂದ ನಿರಂತರ ಪ್ರಯತ್ನ ನಡೆಸಿದ್ದು, ಸಾವಿರಾರು ಮಂದಿ ಸ್ಥಳದಲ್ಲಿ ಜಮಾಯಿಸಿದ್ದಾರೆ ಇದರಿಂದ ಕೆಲಕಾಲ ಶಿರ್ವ- ಕಾಪು ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Discover more from Coastal Times Kannada
Subscribe to get the latest posts sent to your email.







Discussion about this post