ಮಂಗಳೂರು, ಮೇ 11: ಮಂಗಳೂರಿನಿಂದ 35 ಮಂದಿ ಉಮ್ರಾ ಯಾತ್ರೆ ಕೈಗೊಂಡಿದ್ದು ತಮ್ಮ ಖರ್ಚಿಗಾಗಿ ಬ್ಯಾಗಿನಲ್ಲಿ ಇಟ್ಟುಕೊಂಡಿದ್ದ 26432 ಸೌದಿ ರಿಯಾಲ್ ಕರೆನ್ಸಿ (ಅಂದಾಜು 5.88 ಲಕ್ಷ ರೂ.) ಮಂಗಳೂರಿನಿಂದ ಸೌದಿಯ ಜೆದ್ದಾ ತಲುಪುವಷ್ಟರಲ್ಲಿ ಅವರ ಬ್ಯಾಗಿನಿಂದ ಯಾರೋ ಕಳವುಗೈದ ಘಟನೆ ನಡೆದಿದ್ದು, ಈ ಬಗ್ಗೆ ಬಜ್ಪೆ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಂಗಳೂರಿನಲ್ಲಿ ಟ್ರಾವೆಲ್ ಏಜನ್ಸಿ ಹೊಂದಿರುವ ಅಹ್ಮದ್ ಇಕ್ಬಾಲ್ ಎಂಬವರು, ಇತರ 35 ಮಂದಿಯ ಜೊತೆಗೆ ಉಮ್ರಾ ಯಾತ್ರೆ ಕೈಗೊಂಡಿದ್ದರು. ಎಪ್ರಿಲ್ 30ರಂದು ಮಂಗಳೂರು ಏರ್ಪೋರ್ಟ್ ಮೂಲಕ ಇವರ ತಂಡ ಹೊರಟಿದ್ದರು. ಈ ವೇಳೆ, ಜೊತೆಗಿದ್ದವರು ಕೈಯಲ್ಲಿ ಹಣ ಇಟ್ಟುಕೊಳ್ಳುವುದು ಬೇಡ ಎಂದು ಗ್ರೂಪಿನಲ್ಲಿದ್ದ ಮಹಮ್ಮದ್ ಬದ್ರುದ್ದೀನ್ ಅವರಲ್ಲಿದ್ದ ಬ್ಯಾಗಿನಲ್ಲಿಯೇ ಎಲ್ಲ ಹಣ ಇಟ್ಟುಕೊಳ್ಳುವಂತೆ ತಮ್ಮಲ್ಲಿದ್ದ ಸೌದಿ ರಿಯಾಲ್ ನಗದನ್ನು ಕೊಟ್ಟಿದ್ದರು. ಮಂಗಳೂರು ಏರ್ಪೋರ್ಟ್ ನಲ್ಲಿ ಒಂದೇ ಬ್ಯಾಗಿನಲ್ಲಿ ತಂಡದಲ್ಲಿದ್ದವರು ಸೇರಿ ಕರೆನ್ಸಿಯನ್ನು ಹಾಕುತ್ತಿದ್ದುದನ್ನು ಅಲ್ಲಿನ ಸಿಬಂದಿಯೂ ನೋಡಿದ್ದರು. ಅದು ಯಾಕೆ ಅಷ್ಟೊಂದು ಹಣ ಎಂದು ಪ್ರಶ್ನೆ ಮಾಡಿದ್ದಾಗ ಇವರು ಸ್ಪಷ್ಟನೆ ನೀಡಿದ್ದರು.
ಆನಂತರ, ಹಣ ಇಟ್ಟು ಬ್ಯಾಗನ್ನು ಲಾಕ್ ಮಾಡಿ ಸಿಬಂದಿ ವಶಕ್ಕೆ ಒಪ್ಪಿಸಲಾಗಿತ್ತು. ಆನಂತರ, ಇವರ ತಂಡ ಮಂಗಳೂರಿನಿಂದ ಮುಂಬೈ ಮೂಲಕ ತೆರಳಿದ್ದು, ಮರುದಿನ ಮೇ 1ರಂದು ಜೆದ್ದಾ ತಲುಪಿತ್ತು. ಆದರೆ ಅಲ್ಲಿ ತಲುಪಿ ಬ್ಯಾಗ್ ಪರಿಶೀಲನೆ ನಡೆಸಿದಾಗ ಹಣ ಇದ್ದ ಬ್ಯಾಗಿನ ಜಿಪ್ ಅನ್ನು ಕಟ್ ಮಾಡಿ ಕರೆನ್ಸಿ ಕಳವು ಮಾಡಲಾಗಿತ್ತು. ಲಾಕ್ ಒಡೆದು ಹಾಕಿದ್ದು ಒಳಗಿದ್ದ 26,432 ಸೌದಿ ರಿಯಾಲ್ ಕರೆನ್ಸಿಯನ್ನು ಕಳವು ಮಾಡಿರುವುದು ಕಂಡುಬಂದಿತ್ತು.
ಇಕ್ಬಾಲ್ ಮತ್ತು ತಂಡವು ಮೇ 13ರಂದು ಹಿಂತಿರುಗುವುದಕ್ಕೆ ಟಿಕೆಟ್ ಆಗಿದೆ. ಆದರೆ ಮಂಗಳೂರು ಏರ್ಪೋರ್ಟ್ ನಲ್ಲಿ ಹಣ ಕಳವಾಗಿರುವ ಬಗ್ಗೆ ಅದಕ್ಕೂ ಮೊದಲೇ ಎಫ್ಐಆರ್ ದಾಖಲಿಸಿ ತನಿಖೆ ನಡೆಸಬೇಕೆಂದು ಇಕ್ಬಾಲ್ ಅವರ ಪತ್ನಿ ಬಜ್ಪೆ ಠಾಣೆಗೆ ದೂರು ನೀಡಿದ್ದಾರೆ. ಈ ಬಗ್ಗೆ ಮಂಗಳೂರು ನಗರ ಅಪರಾಧ ವಿಭಾಗದ ಡಿಸಿಪಿ ದಿನೇಶ್ ಮಾಧ್ಯಮ ಗ್ರೂಪಿನಲ್ಲಿ ಪ್ರತಿಕ್ರಿಯಿಸಿದ್ದು, ಪೊಲೀಸರು ಮಂಗಳೂರು ಏರ್ಪೋರ್ಟ್ ನಲ್ಲಿ ಸಿಸಿಟಿವಿ ಪರಿಶೀಲನೆ ನಡೆಸಿದ್ದು ಯಾವುದೇ ಸುಳಿವು ಸಿಕ್ಕಿಲ್ಲ. ಪ್ರವಾಸಿ ತಂಡವು ಮಂಗಳೂರಿನಿಂದ ಮುಂಬೈ, ಜೆದ್ದಾ ತಲುಪಿದ ಬಳಿಕ ಕಳವಾಗಿರುವುದನ್ನು ನೋಡಿದೆ. ಹೀಗಾಗಿ ಈ ನಡುವಲ್ಲಿ ಯಾವುದೇ ಕಡೆ ಕಳವು ಆಗಿರುವ ಸಾಧ್ಯತೆಯಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post