ಉಳ್ಳಾಲ: ಕ್ಯಾನ್ಸರ್ ಈಗ ಹೆಚ್ಚಿನ ಪ್ರಮಾಣದಲ್ಲಿ ಜನರನ್ನು ಕಾಡುತ್ತಿರುವ ಕಾಯಿಲೆಯಾಗಿದ್ದು ಸೂಕ್ತ ಸಮಯದಲ್ಲಿ ಪತ್ತೆ ಮಾಡಿ ಚಿಕಿತ್ಸೆ ನೀಡಿದರೆ ರೋಗಿ ಗುಣಮುಖವಾಗಲು ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲ್ ಕುಮಾರ್ ಹೇಳಿದರು.
ದೇರಳಕಟ್ಟೆಯ ಯೆನೆಪೋಯ ವಿಶ್ವವಿದ್ಯಾಲಯವು ಟಾಟಾ ಟ್ರಸ್ಟ್ ಸಹಯೋಗದಲ್ಲಿ ನಿರ್ಮಿಸಿರುವ ಜುಲೇಖಾ ಯೆನೆಪೋಯ ಕ್ಯಾನ್ಸರ್ ಆಸ್ಪತ್ರೆಯನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು. ‘ಬೆಂಗಳೂರು ಮತ್ತು ಮುಂಬೈ ಹೊರತುಪಡಿಸಿದರೆ ಜಿಲ್ಲೆಯಲ್ಲಿ ಅತ್ಯಾಧುನಿಕ ಉಪಕರಣಗಳನ್ನು ಒಳಗೊಂಡಿರುವ ಆಸ್ಪತ್ರೆ ಆರಂಭವಾಗಿರುವುದು ಹೆಮ್ಮೆಯ ವಿಷಯ. ಟಾಟಾ ಟ್ರಸ್ಟ್‌ನ ಕ್ಯಾನ್ಸರ್ ಫ್ರೀ ಅಭಿಯಾನದಂಗವಾಗಿ ಸ್ಥಾಪಿಸಿರುವ ಈ ಆಸ್ಪತ್ರೆ ಜಿಲ್ಲೆಯ ಆರೋಗ್ಯ ಕ್ಷೇತ್ರಕ್ಕೆ ದೊಡ್ಡ ಕೊಡುಗೆ’ ಎಂದು ಸಚಿವರು ಅಭಿಪ್ರಾಯಪಟ್ಟರು. ‘ಜಿಲ್ಲೆಯಲ್ಲಿ ವೈದ್ಯಕೀಯ ಸೌಲಭ್ಯ ಚೆನ್ನಾಗಿದೆ. ಕೋವಿಡ್–19ರ ಸಂದರ್ಭದಲ್ಲಿ ಒಟ್ಟಾಗಿ ದುಡಿದ ಕಾರಣ ಹೆಚ್ಚಿನ ಸಮಸ್ಯೆ ಆಗಲಿಲ್ಲ. ಆರೋಗ್ಯ ಕ್ಷೇತ್ರದಲ್ಲಿ ಇತರ ಜಿಲ್ಲೆಗಳಿಗಿಂತ ಈ ಜಿಲ್ಲೆ ಉತ್ತಮ ಪ್ರಗತಿ ಸಾಧಿಸಿದೆ. ಉತ್ತಮ ಶಿಕ್ಷಣ ನೀಡುವ ಸಂಸ್ಥೆಗಳು ಮತ್ತು ಗುಣಮಟ್ಟದ ಆಸ್ಪತ್ರೆಗಳು ಇರುವುದರಿಂದ ಇಲ್ಲಿಗೆ ಹೊರರಾಜ್ಯ ಹಾಗೂ ಬೇರೆ ಜಿಲ್ಲೆಯವರು ಬರುತ್ತಾರೆ’ ಎಂದು ಅವರು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಟಾಟಾ ಟ್ರಸ್ಟ್‌ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಶ್ರೀನಾಥ್ ಎನ್ ‘1941ರಲ್ಲಿ ಆರಂಭಗೊಂಡ ಟಾಟಾ ಕೇರ್ ದೇಶದಲ್ಲಿ ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಜನರ ಕೈಗಳನ್ನು ಬಲಪಡಿಸಿದೆ. ರೋಗಿಗಳ ಆರೈಕೆಯ ಜವಾಬ್ದಾರಿಯನ್ನು ಸಿಬ್ಬಂದಿ ಸಮರ್ಥವಾಗಿ ನಿಭಾಯಿಸಬೇಕು’ ಎಂದರು.
ಶಾಸಕ ಯು.ಟಿ. ಖಾದರ್, ವಿಶ್ವದಲ್ಲೇ ಕ್ಯಾನ್ಸರ್ ರೋಗ ಹೆಚ್ಚುತ್ತಿರುವ ಸಂದರ್ಭದಲ್ಲಿ ಆಧುನಿಕ ತಂತ್ರಜ್ಞಾನದ ಬಳಕೆ ಅಗತ್ಯವಾಗಿದೆ ಎಂದರು. ಯೆನೆಪೋಯ ವಿವಿ ಕುಲಪತಿ ಯೆನೆಪೋಯ ಅಬ್ದುಲ್ಲ ಕುಂಞಿ ಅಧ್ಯಕ್ಷತೆ ವಹಿಸಿದ್ದರು. ಹಜ್ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಅಬ್ದುಲ್ಲ ಕುಟ್ಟಿ, ಇಸ್ಲಾಮಿಕ್ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಮೊಹಮ್ಮದ್ ಕುಂಞಿ ಇದ್ದರು. ರೇಡಿಯೋಥೆರಪಿ ವಿಭಾಗವನ್ನು ಶ್ರೀನಾಥ್ ಎನ್, ಡೇ ಕೇರ್ ಕಿಮೋಥೆರಪಿ ಕೇಂದ್ರವನ್ನು ಯು.ಟಿ ಖಾದರ್, ನ್ಯೂಕ್ಲಿಯರ್ ಮೆಡಿಸಿನ್ ವಿಭಾಗವನ್ನು ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ, ಹೊರರೋಗಿ ಚಿಕಿತ್ಸಾ ಕೇಂದ್ರವನ್ನು ಶಾಸಕ ಯು.ರಾಜೇಶ್ ನಾಯ್ಕ್ ಉದ್ಘಾಟಿಸಿದರು.
ಶಾಸಕರಾದ ವೈ.ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ವಿಧಾಪರಿಷತ್ ಸದಸ್ಯರಾದ ಕೆ.ಹರೀಶ್ ಕುಮಾರ್, ಮಂಜುನಾಥ್ ಭಂಡಾರಿ ಹಾಗೂ ಪ್ರತಾಪ್ ಸಿಂಹ ನಾಯಕ್ ಇದ್ದರು. ಗಂಗಾಧರ್ ಸೋಮಯಾಜಿ ಸ್ವಾಗತಿಸಿದರು. ವಿಜಯ್ ಕುಮಾರ್ ಪ್ರಸ್ತಾವಿಕವಾಗಿ ಮಾತನಾಡಿದರು. ಜಲಾಲುದ್ದೀನ್ ಅಕ್ಬರ್ ವಂದಿಸಿದರು.