ಉಳ್ಳಾಲ, ಆ.11: ಟಾರ್ಗೆಟ್ ಇಲ್ಯಾಸ್ ಕೊಲೆ ಆರೋಪಿ ಉಳ್ಳಾಲದ ನಟೋರಿಯಸ್ ರೌಡಿ ಕಡಪ್ಪರ ಸಮೀರ್ ನನ್ನ ತೊಕ್ಕೊಟ್ಟು ಸಮೀಪದ ಕಲ್ಲಾಪುವಿನ ವಿಕೆ ಫರ್ನಿಚರ್ ಬಳಿ ತಂಡವೊಂದು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದೆ.
ಸಮೀರ್ ಭಾನುವಾರ ರಾತ್ರಿ ತಾಯಿ ಜತೆ ಕಾರಿನಲ್ಲಿ ಕಲ್ಲಾಪಿನ ಫಾಸ್ಟ್ ಫುಡ್ ವೊಂದಕ್ಕೆ ಉಪಹಾರಕ್ಕೆ ತೆರಳಿದ್ದ ವೇಳೆ ದಾಳಿ ನಡೆದಿದೆ ಎನ್ನಲಾಗಿದೆ.ಸಮೀರ್ ಕಾರು ಇಳಿಯುತ್ತಿದ್ದ ವೇಳೆ ಮತ್ತೊಂದು ಕಾರು ಬೆನ್ನಟ್ಟಿ ಬಂದಿದ್ದು ಅದರಲ್ಲಿದ್ದ ಮೂವರ ತಂಡವು ಮಾರಕಾಸ್ತ್ರಗಳಿಂದ ಸಮೀರ್ ನನ್ನ ಬೆನ್ನಟ್ಟಿದ್ದು,ಈ ವೇಳೆ ಸಮೀರ್ ತಪ್ಪಿಸಿಕೊಂಡು ರೈಲ್ವೇ ಹಳಿ ಕಡೆಗೆ ಓಡಿರುವುದಾಗಿ ತಾಯಿ ಹೇಳಿಕೆ ನೀಡಿದ್ದರು. ಘಟನೆ ನಡೆಯುತ್ತಿದ್ದಂತೆ ಕಲ್ಲಾಪು ಜಂಕ್ಷನ್ ನಲ್ಲಿ ಜನಸ್ತೋಮವೇ ನೆರೆದಿದ್ದು ತಪ್ಪಿಸಿ ಕೊಂಡಿರುವ ರೌಡಿಶೀಟರ್ ಸಮೀರ್ ಗಾಗಿ ಹುಡುಕಾಟ ನಡೆಸಿದ್ದರು.
ಮೃತ ದೇಹವು ವಿಕೆ ಫರ್ನಿಚರ್ ಬಳಿಯ ಪೊದೆಯಲ್ಲಿ ಸಿಕ್ಕಿದೆ.ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಸಮೀರ್ ಮತ್ತು ತಂಡವು ಇತ್ತೀಚಿಗಷ್ಟೆ ದರೋಡೆ ಪ್ರಕರಣವೊಂದರಲ್ಲಿ ಜೈಲು ಪಾಲಾಗಿದ್ದು ಎರಡು ದಿನಗಳ ಹಿಂದಷ್ಟೆ ಸಮೀರ್ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದ. ಸಮೀರ್ ನನ್ನು ಜೈಲಿನಲ್ಲಿ ಕಳೆದ ತಿಂಗಳು ತಂಡವೊಂದು ಕೊಲೆಗೆ ಯತ್ನಿಸಿದ್ದು ಅಲ್ಲಿ ಸಮೀರ್ ಬಚಾವಾಗಿದ್ದ. ಜೈಲಿನಿಂದ ಹೊರ ಬರುತ್ತಲೇ ದುಷ್ಕರ್ಮಿಗಳು ಆತನನ್ನು ಕೊಂದೇ ಮುಗಿಸಿದ್ದಾರೆ.
2018 ರಲ್ಲಿ ರೌಡಿಶೀಟರ್ ಟಾರ್ಗೆಟ್ ಇಲ್ಯಾಸ್ ನನ್ನು ಜೆಪ್ಪುವಿನ ಫ್ಲಾಟ್‍ವೊಂದರಲ್ಲಿ ದಾವುದ್, ಶಮೀರ್, ರಿಯಾಝ್, ನಮೀರ್ , ಅಬ್ದುಲ್ ಖಾದರ್, ಉಮ್ಮರ್ ನವಾಫ್, ಮೊಹಮ್ಮದ್ ನಝೀರ್, ನೌಷಾದ್, ಅಝ್ಗರ್ ಆಲಿ ಎಂಬವರು ಸೇರಿಕೊಂಡು ಹತ್ಯೆ ನಡೆಸಿದ್ದರು. ಪ್ರಕರಣದಲ್ಲಿ ಶಮೀರ್ ಎರಡನೇ ಆರೋಪಿಯಾಗಿದ್ದು, ದಾವುದ್ ಮತ್ತು ಶಮೀರ್ ಇಬ್ಬರು ನೇರವಾಗಿ ಫ್ಲ್ಯಾಟ್ ಪ್ರವೇಶಿಸಿ ಇಲ್ಯಾಸ್ ನನ್ನು ಹತ್ಯೆ ನಡೆಸಿರುವುದು ತನಿಖೆಯಲ್ಲಿ ಬಯಲಾಗಿತ್ತು. ಪ್ರಕರಣ ಸಂಬಂಧ ಜೈಲುಪಾಲಾದ ಶಮೀರ್ ಕೆಲ ದಿನಗಳ ಹಿಂದಷ್ಟೇ ಬಿಡುಗಡೆಗೊಂಡಿದ್ದ. ಘಟನಾ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದು, ಉಳ್ಳಾಲ ಠಾಣಾ ಪೊಲೀಸರು ತನಿಖೆ ಆರಂಭಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post