ಹೊಸದಿಲ್ಲಿ: ದಿಲ್ಲಿ ಪೊಲೀಸರ ವಿಶೇಷ ಘಟಕವು ಪಾಕಿಸ್ತಾನ ಮೂಲದ ಭಯೋತ್ಪಾದಕನೊಬ್ಬನನ್ನು ಮಂಗಳವಾರ ನಗರದಲ್ಲಿ ಬಂಧಿಸಿದೆ. ನವರಾತ್ರಿ ಸಂದರ್ಭದಲ್ಲಿ ರಾಜಧಾನಿಯಲ್ಲಿ ನಡೆಯಬಹುದಾಗಿದ್ದ ಬೃಹತ್ ಭಯೋತ್ಪಾದನಾ ದಾಳಿಯನ್ನು ತಪ್ಪಿಸಲಾಗಿದೆ.
ದಿಲ್ಲಿಯ ಲಕ್ಷ್ಮಿ ನಗರದ ರಮೇಶ್ ಪಾರ್ಕ್ ಪ್ರದೇಶದಿಂದ ಪಾಕಿಸ್ತಾನದ ಉಗ್ರ ಮೊಹಮ್ಮದ್ ಅಸ್ರಫ್ ಒಂದು ದಶಕಕ್ಕೂ ಹಿಂದಿನಿಂದ ನಕಲಿ ಹೆಸರಿನಲ್ಲಿ ಭಾರತದಲ್ಲಿ ವಾಸಿಸುತ್ತಿದ್ದಾನೆ. ಗುರುತಿನ ದಾಖಲಾತಿಗಳನ್ನು ಪಡೆಯುವುದಕ್ಕೋಸ್ಕರ ಘಾಜಿಯಾಬಾದ್ನಲ್ಲಿ ಒಬ್ಬ ಭಾರತೀಯ ಮಹಿಳೆಯನ್ನು ಮದುವೆಯಾಗಿದ್ದ ಎಂದು ವಿಶೇಷ ಘಟಕದ ಡಿಸಿಪಿ ಪ್ರಮೋದ್ ಖುಷ್ವಾಹ ಹೇಳಿದ್ದಾರೆ. ಸುಮಾರು 10-15 ವರ್ಷಗಳಿಂದಲೂ ಆತ ಅಲಿ ಎಂಬ ಹೆಸರಿನಲ್ಲಿ ಗುರುತಿಸಿಕೊಂಡು ಭಾರತದಲ್ಲಿ ನೆಲೆಸಿದ್ದ.
ಬಂಧಿತನ ಅಡಗುದಾಣದಿಂದ ಒಂದು ಎಕೆ-47 ಅಸಾಲ್ಟ್ ರೈಫಲ್, ಒಂದು ಹೆಚ್ಚುವರಿ ಮ್ಯಾಗಜೀನ್ ಮತ್ತು 60 ರೌಂಡ್ಸ್, ಒಂದು ಹ್ಯಾಂಡ್ ಗ್ರೆನೇಡ್, ಎರಡು ಪಿಸ್ತೂಲುಗಳು ಹಾಗೂ 50 ರೌಂಡ್ಸ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಭಯೋತ್ಪಾದಕ ಮೊಹಮ್ಮದ್ ಅಶ್ರಫ್ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮೂಲದವನಾಗಿದ್ದಾನೆ. ಆತನ ವಿರುದ್ಧ ಕಾನೂನು ಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ, ಸ್ಫೋಟಕ ಕಾಯ್ದೆ, ಶಸ್ತ್ರಾಸ್ತ್ರ ಕಾಯ್ದೆ ಪ್ರಕರಣಗಳನ್ನು ದಾಖಲು ಮಾಡಲಾಗಿದೆ.
ಪಾಕಿಸ್ತಾನದ ಐಎಸ್ಐನಿಂದ ತರಬೇತಿ ಪಡೆದಿದ್ದ ಉಗ್ರ ಅಸ್ರಫ್ ಬಾಂಗ್ಲಾದೇಶದ ಮೂಲಕ ಸಿಲಿಗುರಿ ಗಡಿಪ್ರದೇಶದಿಂದ ಭಾರತ ಪ್ರವೇಶಿಸಿದ್ದ. ನಸೀರ್ ಎಂಬ ಕೋಡ್ ನೇಮ್ ಹೊಂದಿದ ಪಾಕಿಸ್ತಾನಿ ಏಜೆಂಟ್ ಅವನಿಗೆ ಸೂಚನೆಗಳನ್ನು ಕೊಡುತ್ತಾ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಸಿದ್ದ. ‘ಪೀರ್ ಮೌಲಾನಾ’ ಎಂಬುದಾಗಿಯೂ ಅಸ್ರಫ್ ವೇಷ ಬದಲಾಯಿಸಿಕೊಂಡು ಅಡ್ಡಾಡಿದ್ದಾನೆ. ಸದ್ಯ ಸ್ಲೀಪರ್ ಸೆಲ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ದೊಡ್ಡ ಭಯೋತ್ಪಾದಕ ದಾಳಿಗೆ ಸಿದ್ಧತೆ ನಡೆಸುತ್ತಿದ್ದ ಎಂದು ಡಿಸಿಪಿ ಖುಷ್ವಾಹ ತಿಳಿಸಿದ್ದಾರೆ.
ಮೊಹಮ್ಮದ್ ಅಶ್ರಫ್ ಭಾರತದಲ್ಲಿ ಅಲಿ ಅಹ್ಮದ್ ನೂರಿ ಎಂಬ ಹೆಸರಿನಲ್ಲಿ ವಾಸಿಸುತ್ತಿದ್ದ. ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಗುರುತಿನ ಚೀಟಿಗಳನ್ನು ಪಡೆದುಕೊಂಡಿದ್ದ. ಆತನ ಬಳಿಯಿಂದ ಪಾಸ್‌ಪೋರ್ಟ್, ಗುರುತಿನ ಚೀಟಿ ಸೇರಿದಂತೆ ಅನೇಕ ನಕಲಿ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.
‘ಹಬ್ಬದ ಆರಂಭಕ್ಕೂ ಮುನ್ನ ವಿಶೇಷ ಪೊಲೀಸ್ ಘಟಕವು ಉತ್ತಮ ಕಾರ್ಯಾಚರಣೆ ನಡೆಸಿದೆ. ನಮ್ಮ ತಂಡವು ಬೃಹತ್ ಭಯೋತ್ಪಾದನಾ ಸಂಚನ್ನು ವಿಫಲಗೊಳಿಸಿದೆ’ ಎಂದು ಪೊಲೀಸ್ ಆಯುಕ್ತ ರಾಕೇಶ್ ಆಸ್ಥಾನಾ ತಿಳಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post