ಉಡುಪಿ, ಅ.12: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಗ್ಲಾದೇಶ ಮೂಲದ ಪ್ರಜೆಯನ್ನು ಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸಿದ ಉಡುಪಿ ಪೊಲೀಸರು ಮಲ್ಪೆ ಠಾಣೆ ವ್ಯಾಪ್ತಿಯ ಹೂಡೆ ಎಂಬಲ್ಲಿ ಅಕ್ರಮವಾಗಿ ನೆಲೆಸಿದ್ದ ಮತ್ತೆ ಒಂಬತ್ತು ಮಂದಿ ಬಾಂಗ್ಲಾನ್ನರನ್ನು ಬಂಧಿಸಿದ್ದಾರೆ.
ಉಡುಪಿಯಲ್ಲಿ ನಕಲಿ ವಿಳಾಸದ ಮೂಲಕ ಪಾಸ್ಪೋರ್ಟ್ ಮಾಡಿಸಿದ್ದ ಮಹಮ್ಮದ್ ಮಾಣಿಕ್ ಹುಸೈನ್ ಎಂಬ ಬಾಂಗ್ಲಾ ಮೂಲದ ಪ್ರಜೆಯನ್ನು ದುಬೈಗೆ ತೆರಳುವ ಯತ್ನದಲ್ಲಿದ್ದಾಗ ಮಂಗಳೂರು ವಿಮಾನ ನಿಲ್ದಾಣದಲ್ಲಿ ಶುಕ್ರವಾರ ರಾತ್ರಿ ಬಂಧಿಸಲಾಗಿತ್ತು. ಆತನಿಗೆ ಉಡುಪಿಯಲ್ಲಿ ಪರ್ವೇಜ್ ಎಂಬಾತ ನಕಲಿ ಪಾಸ್ ಪೋರ್ಟ್ ಮಾಡಿಸಿಕೊಟ್ಟಿದ್ದ ಎಂಬ ವಿಷಯ ತಿಳಿದು ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಇದರ ಬೆನ್ನಲ್ಲೇ ಮಾಣಿಕ್ ಹುಸೇನ್ ಜೊತೆಗೆ ಅಕ್ರಮವಾಗಿ ನೆಲೆಸಿದ್ದ ಮತ್ತೆ ಒಂಬತ್ತು ಮಂದಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
ಮಲ್ಪೆಯಲ್ಲಿ ಮೀನುಗಾರಿಕಾ ಕಾರ್ಮಿಕರಾಗಿ ದುಡಿಯುತ್ತಿದ್ದ ಬಾಂಗ್ಲಾ ಮೂಲದ ಹಕೀಂ ಅಲಿ, ಸುಜೋನ್, ಇಸ್ಮಾಯಿಲ್, ಕರೀಂ, ಸಲಾಂ, ರಾಜಿಕುಲ್, ಮೊಹಮ್ಮದ್ ಸೋಜಿಬ್, ಕಾಜೋಲ್, ಉಸ್ಮಾನ್ ಎಂಬವರು ಬಂಧಿತರು. ಆರೋಪಿಗಳ ಪೈಕಿ ಉಸ್ಮಾನ್ ಎಂಬಾತ ಇತರರನ್ನು ಅಕ್ರಮವಾಗಿ ಉಡುಪಿಗೆ ಕರೆತಂದು ಉದ್ಯೋಗಕ್ಕೆ ವ್ಯವಸ್ಥೆ ಮಾಡಿದ್ದ ಎಂಬುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಇದರಲ್ಲಿ ಕಾಜೋಲ್ ಎನ್ನುವಾತ ಬಳಿ ಸಿಕ್ಕಿಂ ನಿವಾಸಿ ಎನ್ನುವ ದಾಖಲೆ ನೀಡಿದ್ದು, ಆತನ ಹಿನ್ನೆಲೆಯನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮಲ್ಪೆಯಲ್ಲಿ ಬಾಂಗ್ಲಾನ್ನರ ಬಂಧನಕ್ಕೆ ಸಂಬಂಧಿಸಿ ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕುಮಾರ್ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದು, ಮಂಗಳೂರು ಏರ್ಪೋರ್ಟಿನ ಇಮಿಗ್ರೇಶನ್ ಅಧಿಕಾರಿಗಳ ಮಾಹಿತಿ ಮೇರೆಗೆ ಮಲ್ಪೆಯಲ್ಲಿ ಅಕ್ರಮವಾಗಿ ನೆಲೆಸಿದ್ದ ಒಂಬತ್ತು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿದೆ. ಏರ್ಪೋರ್ಟಿನಲ್ಲಿ ಸಿಕ್ಕಿಬಿದ್ದ ಮಹಮ್ಮದ್ ಮಾಣಿಕ್ ಇವರ ಜೊತೆಗೇ ವಾಸವಿದ್ದ. ಆತ ನಕಲಿ ಪಾಸ್ ಪೋರ್ಟ್ ಬಳಸಿ, ಮಂಗಳೂರು ವಿಮಾನ ನಿಲ್ದಾಣ ಮೂಲಕ ದುಬೈಗೆ ತೆರಳಲು ಮುಂದಾಗಿದ್ದ. ಇಮಿಗ್ರೇಷನ್ ಅಧಿಕಾರಿಗಳು ವಶಕ್ಕೆ ಪಡೆದು ಮಾಹಿತಿ ನೀಡಿದ್ದು, ಜೊತೆಗಿದ್ದವರನ್ನೂ ಬಂಧಿಸಿದ್ದೇವೆ ಎಂದಿದ್ದಾರೆ.
ವಿಚಾರಣೆ ವೇಳೆ ಅವರ ಬಳಿ ನಕಲಿ ದಾಖಲೆಗಳು ಪತ್ತೆಯಾಗಿದ್ದು ಮಲ್ಪೆಯಲ್ಲಿ ಕಳೆದ ಮೂರು ವರ್ಷಗಳಿಂದ ವಾಸವಿದ್ದರು ಎನ್ನುವುದನ್ನು ಪತ್ತೆ ಮಾಡಲಾಗಿದೆ. ಇವರಿಗೆ ನಕಲಿ ಆಧಾರ್ ಕಾರ್ಡ್ ಹೇಗೆ ಬಂತು ಎಂಬ ಬಗ್ಗೆ ತನಿಖೆ ಮಾಡುತ್ತಿದ್ದೇವೆ. ಬಾರ್ಡರ್ ಹೇಗೆ ಕ್ರಾಸ್ ಮಾಡಿದ್ದಾರೆ ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಇವರ ವಿರುದ್ಧ ಮಲ್ಪೆ ಠಾಣೆಯಲ್ಲಿ ಕ್ರೈಂ ಸಂಖ್ಯೆ 138/24, 318, 319,336 ಕೇಸು ದಾಖಲಾಗಿದೆ.
ಮಂಗಳೂರು ಏರ್ಪೋರ್ಟಿನಲ್ಲಿ ಬಂಧನಕ್ಕೊಳಗಾದ ಮಹಮ್ಮದ್ ಮಾಣಿಕ್ ಹುಸೈನ್ ಬಾಂಗ್ಲಾದೇಶದ ರಾಜಶಾಹಿ ಜಿಲ್ಲೆಯ ಮಾಣಿಕ್ ಚೌಕ್ ನಿವಾಸಿ. 2017ರಲ್ಲಿ ಪಶ್ಚಿಮ ಬಂಗಾಳದ ಮುರ್ಶಿದಾಬಾದ್ ಜಿಲ್ಲೆ ವ್ಯಾಪ್ತಿಯ ಅಂತಾರಾಷ್ಟ್ರೀಯ ಗಡಿಯ ಮೂಲಕ ಭಾರತಕ್ಕೆ ನುಸುಳಿ ಬಂದಿದ್ದ. ಬಳಿಕ ಹೌರಾ – ಚೆನ್ನೈ ರೈಲಿನಲ್ಲಿ ಚೆನೈಗೆ ಬಂದು ಅಲ್ಲಿ ಕೆಲವು ಕಾಲ ಕಾರ್ಮಿಕನಾಗಿ ದುಡಿದು ಮಂಗಳೂರು-ಮೂಡಬಿದ್ರೆ ಮೂಲಕ ಉಡುಪಿ ತಲುಪಿದ್ದ. ಉಡುಪಿಯಲ್ಲಿ ಪರ್ವೇಜ್ ಎಂಬಾತ ಈತನಿಗೆ ನಕಲಿ ಆಧಾರ್ ಕಾರ್ಡ್ ಮಾಡಿಸಿಕೊಟ್ಟು ನಕಲಿ ವಿಳಾಸದಲ್ಲಿ ಪಾಸ್ ಪೋರ್ಟನ್ನೂ ಮಾಡಿಕೊಟ್ಟಿದ್ದ. ಇದೇ ಪರ್ವೇಜ್ ಈ ಹಿಂದೆ ಭಾರತಕ್ಕೆ ಬಂದು ನೆಲೆಸಿರುವ ಇತರ ನಾಲ್ಕು ಮಂದಿ ಬಾಂಗ್ಲಾ ಮೂಲದವರಿಗೂ ನಕಲಿ ಪಾಸ್ ಪೋರ್ಟ್ ಮಾಡಿಸಿಕೊಟ್ಟಿದ್ದಾನೆ ಎನ್ನುವ ವಿಷಯ ತನಿಖೆಯಲ್ಲಿ ತಿಳಿದುಬಂದಿದೆ. ಬಾಂಗ್ಲಾ ಪ್ರಜೆಗಳಾದ ರೆಫಾನ್, ಹಕೀಂ, ಇಸ್ಮಾಯಿಲ್, ಫಾರೂರ್ ಎಂಬವರಿಗೆ ನಕಲಿ ಪಾಸ್ ಪೋರ್ಟ್ ಮಾಡಿಸಿದ್ದು, ಅವರು ಈಗ ಎಲ್ಲಿದ್ದಾರೆ ಎನ್ನುವ ಬಗ್ಗೆ ಮಂಗಳೂರು ಪೊಲೀಸರು ತನಿಖೆ ಆರಂಭಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post