ಚೆನ್ನೈ: ಮೈಸೂರಿನಿಂದ ದರ್ಭಾಂಗಕ್ಕೆ ತೆರಳುತ್ತಿದ್ದ ಬಾಗಮತಿ ಎಕ್ಸ್‌ಪ್ರೆಸ್ ರೈಲು ಕವರಪೆಟ್ಟೈ ರೈಲು ನಿಲ್ದಾಣದ ಬಳಿ ಶುಕ್ರವಾರ ಸಂಜೆ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಪಘಾತದ ರಭಸಕ್ಕೆ ಎರಡೂ ರೈಲುಗಳ ಬೋಗಿಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಧಗಧಗನೆ ಹೊತ್ತಿ ಉರಿದಿವೆ. 30ಕ್ಕೂ ಹೆಚ್ಚು ಮಂದಿ ಪ್ರಯಾಣಿಕರಿಗೆ ಸುಟ್ಟ ಗಾಯಗಳಿಂದ ಗಾಯಗೊಂಡಿದ್ದಾರೆ. 13 ಬೋಗಿಗಳು ಹಳಿ ತಪ್ಪಿವೆ ಎನ್ನಲಾಗಿದೆ. ನಿಂತಿದ್ದ ಗೂಡ್ಸ್ ರೈಲಿನ ಹಿಂಭಾಗಕ್ಕೆ 12578 ಮೈಸೂರು-ದರ್ಬಾಂಗ್ ಎಕ್ಸ್‌ಪ್ರೆಸ್ ರೈಲು ಡಿಕ್ಕಿ ಹೊಡೆದಿದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.
ಪ್ಯಾಸೆಂಜರ್ ರೈಲಿನಲ್ಲಿದ್ದ ಕೆಲ ಪ್ರಯಾಣಿಕರು ಗಾಯಗೊಂಡಿದ್ದಾರೆ. ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಆಂಬ್ಯುಲೆನ್ಸ್ಗಳು ಸ್ಥಳದಲ್ಲಿವೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ. ಈ ಅವಘಡದಿಂದಾಗಿ ಚೆನ್ನೈ ಸೆಂಟ್ರಲ್ ರೈಲ್ವೆ ನಿಲ್ದಾಣದಿಂದ ಹೊರಡಬೇಕಿದ್ದ ರೈಲುಗಳು ವಿಳಂಬವಾಗಿವೆ. ರೈಲ್ವೆ ಇಲಾಖೆಯ ಅಧಿಕಾರಿಗಳು ಪ್ರತಿಕ್ರಿಯಿಸಿ, “ರಾತ್ರಿ 8.30ರ ಸುಮಾರಿಗೆ ಕವರೈಪ್ಪೆಟ್ಟೈ ಬಳಿ ಗೂಡ್ಸ್ ರೈಲಿಗೆ ಬಾಗಮತಿ ಎಕ್ಸ್‌ಪ್ರೆಸ್ ಡಿಕ್ಕಿ ಹೊಡೆದಿದೆ. ಘಟನೆಯಿಂದ ಯಾವುದೇ ಪ್ರಾಣಹಾನಿಯಾಗಿಲ್ಲ, ಆದರೆ ಕೆಲವು ಪ್ರಯಾಣಿಕರಿಗೆ ಗಾಯಗಳಾಗಿವೆ. ಆಂಬ್ಯುಲೆನ್ಸ್ಗಳು ಮತ್ತು ರಕ್ಷಣಾ ತಂಡಗಳು ಘಟನಾ ಸ್ಥಳಕ್ಕೆ ಧಾವಿಸಿವೆ. ದಕ್ಷಿಣ ರೈಲ್ವೆಯ ಪ್ರಧಾನ ವ್ಯವಸ್ಥಾಪಕರು, ಚೆನ್ನೈ ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು ಮತ್ತು ಇತರ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ತೆರಳುತ್ತಿದ್ದಾರೆ” ಎಂದು ತಿಳಿಸಿದ್ದಾರೆ.
ರೈಲ್ವೆ ಇಲಾಖೆ ಚೆನ್ನೈ ವಿಭಾಗದ ಸಹಾಯವಾಣಿ ಸಂಖ್ಯೆ 04425354151 ಮತ್ತು 04424354995 ಕರೆ ಮಾಡಿ ಮಾಹಿತಿ ಪಡೆಯಬಹುದು.
Discover more from Coastal Times Kannada
Subscribe to get the latest posts sent to your email.
Discussion about this post