ಮಂಗಳೂರು, ಅ.10: ಮಂಗಳೂರಿನ ಹೆಸರಾಂತ ಬಿಲ್ಡರ್, ಬಿಜೆಪಿ ಮುಖಂಡ ಜಿತೇಂದ್ರ ಕೊಟ್ಟಾರಿಗೆ ನಿನ್ನೆ ರಾತ್ರಿ ಯುವಕರಿಬ್ಬರು ಸೇರಿ ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ. ಕೈಯನ್ನು ತಿರುಗಿಸಿ ತಲೆಗೆ ಹೊಡೆದಿದ್ದು, ಕೊಟ್ಟಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.
ಜಿತೇಂದ್ರ ಕೊಟ್ಟಾರಿ ನಿನ್ನೆ ರಾತ್ರಿ ಬೆಂಗಳೂರಿನಿಂದ ಮಂಗಳೂರಿಗೆ ವಿಮಾನದ ಮೂಲಕ ಬಂದಿದ್ದು, ಅಲ್ಲಿಂದ ತನ್ನ ಆಡಿ ಕಾರಿನಲ್ಲಿ ಅತಿ ವೇಗದಿಂದ ಮಂಗಳೂರು ಕಡೆಗೆ ಬಂದಿದ್ದರು. ಈ ವೇಳೆ, ಮರಕಡ ತಲುಪುತ್ತಿದ್ದಾಗ ಯುವಕರಿದ್ದ ಕಾರನ್ನು ಅತಿ ವೇಗದಿಂದ ಓವರ್ ಟೇಕ್ ಮಾಡಿದ್ದಾರೆ. ಓವರ್ ಟೇಕ್ ಮಾಡಿದ ರೀತಿಯಿಂದ ಸಿಟ್ಟಾಗಿದ್ದ ಯುವಕರು ಕಾರನ್ನು ಬೆನ್ನಟ್ಟಿ ಬಂದಿದ್ದರು. ಆನಂತರ, ತನ್ನನ್ನು ಹಿಂಬಾಲಿಸುತ್ತಿದ್ದಾರೆ ಎಂದು ತಿಳಿದ ಜಿತೇಂದ್ರ ಕೊಟ್ಟಾರಿ ಭಯಗೊಂಡು ಮಂಗಳೂರಿನ ಒಳ ದಾರಿಯಲ್ಲಿ ಸಾಗಿ ತಪ್ಪಿಸಲು ಯತ್ನಿಸಿದ್ದಾರೆ. ಕೊನೆಗೆ ಕೊಡಿಯಾಲಬೈಲಿನ ಫ್ಲಾಟಿಗೆ ಎಂಟ್ರಿ ಕೊಡುತ್ತಿದ್ದಂತೆ ಯುವಕರಿದ್ದ ಕಾರು ಕೂಡ ಬಂದಿದ್ದು, ನಡುರಾತ್ರಿಯಲ್ಲಿ ಮನೆಯ ಕಂಪೌಂಡ್ ಒಳಗಡೆ ಬಂದು ಯುವಕರು ದಾಂಧಲೆ ನಡೆಸಿದ್ದಾರೆ. ಈ ವೇಳೆ, ಪತ್ನಿಯ ಬಳಿ ಮನೆಯೊಳಗಿಂದ ತನ್ನ ಗನ್ ತರುವಂತೆ ಜಿತೇಂದ್ರ ಕೊಟ್ಟಾರಿ ತಿಳಿಸಿದ್ದು, ಗನ್ ತೋರಿಸುತ್ತಿದ್ದಂತೆ ಯುವಕರು ಕೊಟ್ಟಾರಿ ಕೈಯನ್ನು ತಿರುಚಿ ಹಲ್ಲೆ ಮಾಡಿದ್ದಾರೆ. ಕುಡಿದ ಮತ್ತಿನಲ್ಲಿದ್ದ ಯುವಕರು, ಜಿತೇಂದ್ರ ಕೊಟ್ಟಾರಿಯನ್ನು ಜಾಡಿಸಿದ್ದು ಅವಾಚ್ಯವಾಗಿ ನಿಂದಿಸಿದ್ದಾರೆ. ಅಡ್ಡ ಬಂದ ಪತ್ನಿ ಮತ್ತು ಮಗಳಿಗೂ ಹಲ್ಲೆಗೆ ಯತ್ನಿಸಿದ್ದಾರೆ. ನಡುರಾತ್ರಿ 12 ಗಂಟೆ ವೇಳೆಗೆ ಘಟನೆ ನಡೆದಿದೆ.
ಇಷ್ಟಾಗುತ್ತಲೇ ಪೊಲೀಸರು ಬಂದಿದ್ದು, ಯುವಕರನ್ನು ವಶಕ್ಕೆ ಪಡೆದಿದ್ದಾರೆ. ಒಬ್ಬಾತ ತನುಷ್ ಶೆಟ್ಟಿ ಮತ್ತು ಇನ್ನೊಬ್ಬ ಅಂಕಿತ್ ಶೆಟ್ಟಿ. ಇವರಿಬ್ಬರು ಗೆಳೆಯರಾಗಿದ್ದು, ನಿನ್ನೆ ಪಾರ್ಟಿ ಮುಗಿಸ್ಕೊಂಡು ಮರಕಡದಿಂದ ಕದ್ರಿಯ ಕಡೆಗೆ ಬರುತ್ತಿದ್ದರು. ತನುಷ್ ಶೆಟ್ಟಿ ಎನ್ಎಸ್ ಯುಐನಲ್ಲಿ ಗುರುತಿಸಿಕೊಂಡಿದ್ದರೆ, ಅಂಕಿತ್ ಶೆಟ್ಟಿ ಮಾಜಿ ಸಂಸದ ನಳಿನ್ ಕುಮಾರ್ ಸೋದರ ಸಂಬಂಧಿಯ ಮಗ. ಹೀಗಾಗಿ ವಿಷಯ ತಿಳಿಯುತ್ತಲೇ ಬಿಜೆಪಿ ಕಾರ್ಯಕರ್ತರು ಬರ್ಕೆ ಠಾಣೆಗೆ ಬಂದು ಯುವಕರನ್ನು ಬಂಧಿಸದಂತೆ ಒತ್ತಡ ಹೇರಿದ್ದಾರೆ. ಇತ್ತ ಜಿತೇಂದ್ರ ಕೊಟ್ಟಾರಿಗೂ ನಳಿನ್ ಕುಮಾರ್ ಕಡೆಯಿಂದ ಒತ್ತಡ ಬಂದಿದ್ದು, ಏನೋ ಗೊತ್ತಿಲ್ಲದೆ ಘಟನೆ ಆಗಿಹೋಗಿದೆ, ಕೇಸು ಮಾಡಬೇಡ, ಬಿಟ್ಟು ಬಿಡು ಎಂದು ಸಲಹೆ ಮಾಡಿದ್ದಾರೆ.
ಆದರೆ ಜಿತೇಂದ್ರ ಕೊಟ್ಟಾರಿ ತನಗೆ ಮತ್ತು ತನ್ನ ಪತ್ನಿಯ ಮೇಲೂ ಹಲ್ಲೆ ನಡೆಸಿದ್ದಾರೆ. ಅವರನ್ನು ಬಿಡುವುದೇ ಇಲ್ಲ, ಜೈಲಿಗೆ ಹಾಕಿಸುತ್ತೇನೆ ಎಂದು ಪಟ್ಟು ಹಿಡಿದಿದ್ದಾರೆ. ಮನೆಯ ಮುಂಭಾಗದಲ್ಲಾದ ಜಟಾಪಟಿ ಮತ್ತು ಹಲ್ಲೆ ಘಟನೆಯ ವಿಡಿಯೋ ಪೊಲೀಸರ ಬಳಿಯಿದೆ. ಕಾಂಪ್ರಮೈಸ್ ಮಾಡಿ, ಪ್ರಕರಣ ಮುಗಿಸುವಂತೆ ಜಿತೇಂದ್ರ ಕೊಟ್ಟಾರಿಗೆ ಬಿಜೆಪಿ ರಾಜ್ಯ ನಾಯಕರ ಕಡೆಯಿಂದಲೂ ಒತ್ತಡ ಬಂದಿದೆ. ತಲೆಗೆ ಗಾಯಗೊಂಡಿರುವ ಕೊಟ್ಟಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬರ್ಕೆ ಪೊಲೀಸರು ಕೇಸು ದಾಖಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post