ಮಂಗಳೂರು, ಅ.12 : ಕಾವೂರಿನ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದಲ್ಲಿ ನಕಲಿ ಚಿನ್ನವನ್ನು ಅಡಮಾನವಿರಿಸಿ 6.24 ಲಕ್ಷ ಸಾಲ ಪಡೆದು ವಂಚಿಸಿದ ಪ್ರಕರಣದಲ್ಲಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಆಕಾಶಭವನ ನಿವಾಸಿ ಹಾರಿಫ್ ಅಬುಬಕ್ಕರ್ (39), ನಂತೂರು ಬಿಕರ್ನಕಟ್ಟೆ ನಿವಾಸಿ ಮಹಮ್ಮದ್ ಆಶೀಕ್ ಕಟ್ಟತ್ತಾರ್ (34), ಪುತ್ತೂರು ಬೆಳಂದೂರು ನಿವಾಸಿ ಅಬ್ದುಲ್ ರಮೀಜ್ (33) ಬಂಧಿತರು. ಅಸಲಿ ಚಿನ್ನಾಭರಣಗಳೆಂದು ನಂಬಿಸಿ ನಕಲಿ ಚಿನ್ನವನ್ನು ಅಡವಿಟ್ಟು ಇವರು ಆತ್ಮಶಕ್ತಿ ಸಹಕಾರಿ ಸಂಘದಲ್ಲಿ 6.24 ಲಕ್ಷ ರು. ಸಾಲ ಪಡೆದಿದ್ದರು.
ನಕಲಿ ಚಿನ್ನದ ಮಾಹಿತಿ ಸಿಗುತ್ತಿದ್ದಂತೆ ಸೊಸೈಟಿ ಕಡೆಯಿಂದ ಕಾವೂರು ಠಾಣೆಗೆ ದೂರು ನೀಡಲಾಗಿತ್ತು. ಪೊಲೀಸರು ಮೂವರನ್ನು ಬಂಧಿಸಿದ್ದು ಅವರಿಂದ 5 ಲಕ್ಷ ನಗದು, 45 ಗ್ರಾಮ್ ನಕಲಿ ಚಿನ್ನದ ಒಡವೆಗಳು, 20 ಲಕ್ಷ ಮೌಲ್ಯದ ಒಂದು ಕಾರು, ನಾಲ್ಕು ಮೊಬೈಲ್ ಫೋನ್ ವಶಕ್ಕೆ ಪಡೆದಿದ್ದಾರೆ. ಸೊತ್ತಿನ ಒಟ್ಟು ಮೌಲ್ಯ 26.50 ಲಕ್ಷ ಆಗಬಹುದೆಂದು ಅಂದಾಜಿಸಲಾಗಿದೆ.
ಮಂಗಳೂರು ಉತ್ತರ ಉಪವಿಭಾಗದ ಎ.ಸಿ.ಪಿ. ಶ್ರೀಕಾಂತ್ ಕೆ. ಅವರ ಮಾರ್ಗದರ್ಶನದಲ್ಲಿ ಕಾವೂರು ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ರಾಘವೇಂದ್ರ ಎಂ. ಬೈಂದೂರು, ಪೊಲೀಸ್ ಉಪನಿರೀಕ್ಷಕ ಮಲ್ಲಿಕಾರ್ಜುನ ಬಿರಾದಾರ ಹಾಗೂ ಸಿಬಂದಿ ಎ.ಎಸ್.ಐ. ಚಂದ್ರಹಾಸ ಸನೀಲ್, ಎಚ್.ಸಿ. ಗಳಾದ ಸಂಬಾಜಿ ಕದಂ, ಕೆಂಚನ್ ಗೌಡ, ಪ್ರಮೋದ್ ಕುಮಾರ್. ಪಿ.ಸಿ. ಗಳಾದ ನಾಗರಾಜ್ ಬೈರಗೊಂಡ, ಪ್ರವೀಣ್, ರಿಯಾಝ್, ತೀರ್ಥಪ್ರಸಾದ್, ಆನಂದ ಅವರನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
Discover more from Coastal Times Kannada
Subscribe to get the latest posts sent to your email.
Discussion about this post