ಕುಂದಾಪುರ: ವಾರದ ಹಿಂದೆ ಮಹಿಳೆಯೊಬ್ಬರ ಕುತ್ತಿಗೆಯಲ್ಲಿದ್ದ ಕರಿಮಣಿ ಸರವನ್ನು ಸುಲಿಗೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಕೊರಚರಕೇರಿಯ ಸಂಜಯ್ ಎಲ್.(33) ಹಾಗೂ ದಾವಣಗೆರೆಯ ವಿನೋಬ ನಗರದ ವಸಂತ ಕುಮಾರ್( 30) ಬಂಧಿತ ಆರೋಪಿಗಳು. ಇವರಿಂದ 3 ಲಕ್ಷ ರೂ. ಮೌಲ್ಯದ ಚಿನ್ನದ ಕರಿಮಣಿ ಸರ ಹಾಗೂ 8.20,000ರೂ. ಮೌಲ್ಯದ ಸ್ಕಾರ್ಪಿಯೋ ಕಾರು ಮತ್ತು ಬೈಕ್ ಗಳನ್ನು ವಶ ಪಡಿಸಿಕೊಳ್ಳಲಾಗಿದೆ.
ಮೀನಾಕ್ಷಿ ಎಂಬವರು ತನ್ನ ಮಗಳೊಂದಿಗೆ ಅ.3ರಂದು ಸಂಜೆ ಕುಂದಾಪುರ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಿಂದ ಶಾಸ್ತ್ರಿ ಪಾರ್ಕ್ ಕಡೆಗೆ ಸರ್ವಿಸ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಬಿಸ್ಸೆನ್ಬೆಲ್ ಕಚೇರಿ ಹತ್ತಿರ ಹಿಂದಿನಿಂದ ಬೈಕಿನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಅವರ ಕುತ್ತಿಗೆಯಲ್ಲಿದ್ದ ಕರಿಮಣಿ ಸರವನ್ನು ಸುಲಿಗೆ ಮಾಡಿಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದ ತನಿಖಾಧಿಕಾರಿಯಾದ ಕುಂದಾಪುರ ಠಾಣೆಯ ಪ್ರಭಾರ ಪೊಲೀಸ್ ನಿರೀಕ್ಷಕ ಜಯರಾಮ ಡಿ ಗೌಡ, ತನಿಖೆ ನಡೆಸಿ ಮಾಹಿತಿಗಳನ್ನು ಕಲೆ ಹಾಕಿ ಸಂಜಯ್‌ನನ್ನು ತೀರ್ಥಹಳ್ಳಿಯ ಮುಡಬಾ ಕ್ರಾಸ್ ಬಳಿ ಹಾಗೂ ವಸಂತ ಕುಮಾರ್ ನನ್ನು ದಾವಣಗೆರೆ ಜಿಲ್ಲೆಯ ಮಲೆ ಬೆನ್ನೂರು ಎಂಬಲ್ಲಿ ವಶಕ್ಕೆ ಪಡೆದು ಬಂಧಿಸಿದರು.
ಕುಂದಾಪುರ ಪೊಲೀಸ್ ವೃತ್ತ ನಿರೀಕ್ಷಕ ಜಯರಾಮ ಡಿ. ಗೌಡ ನೇತೃತ್ವದಲ್ಲಿ ಕುಂದಾಪುರ ಠಾಣಾ ಎಸ್ಸೈ ನಂಜಾನಾಯ್ಕ್ ಎನ್. ಹಾಗೂ ಎಸ್ಸೈ ಪುಷ್ಪಾ, ಮತ್ತು ಕುಂದಾಪುರ ಸಂಚಾರ ಠಾಣಾ ಎಸ್ಸೈ ನೂತನ್ ಹಾಗೂ ಸಿಬ್ಬಂದಿಗಳಾದ ಮೋನ ಪೂಜಾರಿ, ಮೋಹನ್, ಸಂತೋಷ, ಪ್ರಿನ್ಸ್, ಮಂಜುನಾಥ ಹಾಗೂ ಪೊಲೀಸ್ ಕಾನ್ಟೇಬಲ್ ಗಳಾದ ಘನಶ್ಯಾಮ, ಲೋಹಿತ್, ಮೌನೇಶ್, ಕಿಶನ್, ರಾಜು ಭೋವಿ, ಮಹಾಬಲ, ರಾಘವೇಂದ್ರ ಗೌತಮ್, ನಾಗಶ್ರೀ ಹಾಗೂ ಕುಂದಾಪುರ ವೃತ್ತ ಕಚೇರಿಯ ಅಣ್ಣಪ್ಪ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post