ಚಿಕ್ಕಮಗಳೂರು, ಅ.12: ದೆವ್ವ ಬಿಡಿಸುತ್ತೇನೆಂದು ಹೇಳಿ ಮಹಿಳೆಯೊಬ್ಬರನ್ನು ನಂಬಿಸಿ ನಿರಂತರ ಅತ್ಯಾಚಾರ ಎಸಗಿದ ಆರೋಪದಲ್ಲಿ ಚಿಕ್ಕಮಗಳೂರು ಕೊಪ್ಪ ಮೂಲದ ಸತೀಶ್ ಪಾತ್ರಿ ಎಂಬಾತನನ್ನು ಪೊಲೀಸರು ಬೆಂಗಳೂರಿನ ಜೆ.ಪಿ. ನಗರದಲ್ಲಿ ಬಂಧಿಸಿದ್ದಾರೆ.
ಸತೀಶ್ ವಿರುದ್ಧ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಮತ್ತು ಎನ್.ಆರ್. ಪುರ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದು ಇದರ ಬೆನ್ನಲ್ಲೇ ತಲೆಮರೆಸಿಕೊಂಡಿದ್ದ. ಒಂದು ತಿಂಗಳಿನಿಂದ ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದ ಪೊಲೀಸರು ಬೆಂಗಳೂರಿನಲ್ಲಿ ವಶಕ್ಕೆ ಪಡೆದಿದ್ದಾರೆ.
ಹಾಸನ ಮೂಲದ ಮಹಿಳೆಯೊಬ್ಬರು ನೀಡಿದ ದೂರಿನ ಪ್ರಕಾರ, ದೆವ್ವ ಬಿಡಿಸುವುದಾಗಿ ನಂಬಿಸಿ ಆರೋಪಿ ಸತೀಶ್ ಪಾತ್ರಿ ತನ್ನ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಕೊಪ್ಪ ತಾಲೂಕಿನ ಮೇಕನಹಡ್ಲು ಗ್ರಾಮದ ದುರ್ಗಾಪರಮೇಶ್ವರಿ ದೇವಸ್ಥಾನದ ಸಮೀಪ ಹಾಗೂ ತೀರ್ಥಹಳ್ಳಿಯ ಕುದುರೆಗುಂಡಿ ಪ್ರದೇಶಕ್ಕೆ ಕರೆದೊಯ್ದು ಕೃತ್ಯ ಎಸಗಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.
ಈ ಸಂಬಂಧ ಕೊಪ್ಪ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ಹಾಗೂ ಎನ್.ಆರ್. ಪುರ ಪೊಲೀಸ್ ಠಾಣೆಯಲ್ಲಿ ಮೂಢನಂಬಿಕೆ ಮತ್ತು ಮಾಟಮಂತ್ರಕ್ಕೆ ಸಂಬಂಧಿಸಿದ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಾದ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದ. ಈ ಹಿಂದೆ ಅಪ್ರಾಪ್ತ ಬಾಲಕಿಯೊಬ್ಬಳಿಗೆ ಭೂತ ಬಿಡಿಸುವ ನೆಪದಲ್ಲಿ ಬಲವಂತವಾಗಿ ಕೋಳಿ ರಕ್ತ ಕುಡಿಯುವಂತೆ ಮಾಡಿದ್ದಾನೆ ಎಂಬ ಆರೋಪವೂ ಸತೀಶ್ ಪಾತ್ರಿ ವಿರುದ್ಧ ಕೇಳಿಬಂದಿತ್ತು. ಈ ಘಟನೆಗೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಬಳಿಕ ಈತನ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು.
ಇದೇ ವೇಳೆ, ಆರೋಪಿ ತಲೆಮರೆಸಿಕೊಳ್ಳಲು ಪೊಲೀಸ್ ಇಲಾಖೆಯೊಳಗಿನಿಂದಲೇ ಮಾಹಿತಿ ಸೋರಿಕೆಯಾಗುತ್ತಿತ್ತು ಎಂಬ ಆರೋಪವೂ ಕೇಳಿಬಂದಿದೆ. ಎನ್.ಆರ್. ಪುರ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ಕಾಂತೇಶ್ ಪೊಲೀಸರ ಕಾರ್ಯಾಚರಣೆಯ ಮಾಹಿತಿಯನ್ನು ಆರೋಪಿಗೆ ರವಾನಿಸುತ್ತಿದ್ದರು ಎಂಬ ಆರೋಪದ ಹಿನ್ನೆಲೆಯಲ್ಲಿ ಅವರನ್ನು ಅಮಾನತುಗೊಳಿಸಲಾಗಿದೆ. ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ಅವರು ಕರ್ತವ್ಯಲೋಪದ ಆರೋಪದ ಮೇಲೆ ಪೇದೆಯ ವಿರುದ್ಧ ಕ್ರಮ ಕೈಗೊಂಡಿದ್ದಾರೆ.
Discover more from Coastal Times Kannada
Subscribe to get the latest posts sent to your email.







Discussion about this post