ನವದೆಹಲಿ: ಅಮೆರಿಕದ ಇಂಟರ್ನೆಟ್ ದೈತ್ಯ ಸ್ಟಾರ್‌ಲಿಂಕ್ ಶೀಘ್ರದಲ್ಲೇ ಭಾರತದ ಗ್ರಾಹಕರಿಗೂ ಸೇವೆ ನೀಡುವ ಕಾಲ ಸಮೀಪಿಸುತ್ತಿದೆ. ಇಂಟರ್ನೆಟ್ಗೆ ವೇಗ ನೀಡುವ ಸಂಬಂಧ ಭಾರತದ ಟೆಲಿಕಾಂ ಕಂಪನಿ ಭಾರ್ತಿ ಏರ್ಟೆಲ್ ಎಲಾನ್ ಮಸ್ಕ್ ಅವರ ಸ್ಟಾರ್‌ಲಿಂಕ್ ಜೊತೆಗೆ ಮಂಗಳವಾರ ಒಪ್ಪಂದಕ್ಕೆ ಸಹಿ ಹಾಕಿದ್ದು, ಸರ್ಕಾರದ ಅನುಮತಿಯೊಂದೇ ಬಾಕಿ ಇದೆ.
ಭಾರತದ ಎರಡನೇ ಅತಿ ದೊಡ್ಡ ಟೆಲಿಕಾಂ ಕಂಪನಿ ಏರ್ಟೆಲ್, “ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಭಾರತಕ್ಕೆ ಸ್ಟಾರ್‌ಲಿಂಕ್ ತರಲು ಸ್ಪೇಸ್‌ಎಕ್ಸ್‌ನೊಂದಿಗಿನ ಸಹಯೋಗ ನಮ್ಮ ಬದ್ಧತೆಯನ್ನು ಬಲಪಡಿಸುತ್ತದೆ. ಇದು ಎಲ್ಲರಿಗೂ ತಡೆರಹಿತ ಬ್ರಾಡ್‌ಬ್ಯಾಂಡ್ ಸಂಪರ್ಕ ನೀಡುವಲ್ಲಿ ಒಂದು ಪರಿವರ್ತಕ ಹೆಜ್ಜೆ. ಆದರೆ, ಸ್ಟಾರ್‌ಲಿಂಕ್ ಭಾರತದಲ್ಲಿ ಕಾರ್ಯನಿರ್ವಹಿಸುವ ನಿರ್ಧಾರ ಸರ್ಕಾರದ ಅನುಮೋದನೆಯ ಮೇಲೆ ಅವಲಂಬಿತವಾಗಿದೆ” ಎಂದಿದೆ.
“ಭಾರತದ 140 ಕೋಟಿ ಜನರಲ್ಲಿ ಕನಿಷ್ಠ ಶೇ.40ರಷ್ಟು ಜನರು ಇನ್ನೂ ಕೂಡ ಇಂಟರ್ನೆಟ್ ಸೌಲಭ್ಯ ಪಡೆದಿಲ್ಲ. ಸ್ಯಾಟಲೈಟ್ ಬ್ರಾಂಡ್ಬಾಂಡ್ಗಳು ಈ ಅಂತರವನ್ನು ನೀಗಿಸಬೇಕಿದೆ. ವಿಶೇಷವಾಗಿ, ಭಾರತದ ಕುಗ್ರಾಮಗಳು ಮತ್ತು ಬೆಟ್ಟಗಾಡು ಪ್ರದೇಶದಲ್ಲಿ ಅವರಿಗೆ ಸೌಲಭ್ಯ ಬೇಕಿದೆ. ಮಸ್ಕ್ ಅವರ ಸ್ಟಾರ್ ಲಿಂಕ್ ಭೂಮಿಯ ಸುತ್ತ ಕನಿಷ್ಠ 6,900 ಸಕ್ರಿಯ ಸ್ಯಾಟಲೈಟ್‌ಗಳನ್ನು ಹೊಂದಿದ್ದು, ಈ ಹಿಂದೆ ಇಂಟರ್ನೆಟ್ ಸಿಗುವುದಿಲ್ಲ ಎನ್ನುತ್ತಿದ್ದ ಸ್ಥಳಗಳೂ ಸೇರಿದಂತೆ ಎಲ್ಲೆಡೆ ಕಡಿಮೆ ಸುಪ್ತ ಬ್ರಾಂಡ್ಬ್ಯಾಂಡ್ ಹೊಂದಿದೆ” ಎಂದು ಮಾಹಿತಿ ನೀಡಿದೆ.
ಜಗತ್ತಿನ ಅತಿದೊಡ್ಡ ಮಾರುಕಟ್ಟೆಗೆ ಸ್ಟಾರ್‌ಲಿಂಕ್ ಪ್ರವೇಶಕ್ಕಾಗಿ ಮಸ್ಕ್ ಕೂಡಾ ಬಹುದಿನಗಳಿಂದ ಕಾಯುತ್ತಿದ್ದಾರೆ. ಆದರೆ ದೇಶದ ನಿಯಂತ್ರಕ ನಿಯಮಗಳ ಸವಾಲುಗಳು, ದೇಶಿಯ ಟೆಲಿಕಾಂ ದೈತ್ಯ ಕಂಪನಿಗಳ ವಿರೋಧ ಹಾಗೂ ಭದ್ರತಾ ವಿಚಾರಗಳು ತೊಡಕಾಗಿದ್ದವು. ಭಾರತ ಪ್ರವೇಶಕ್ಕೆ ಸ್ಟಾರ್‌ಲಿಂಕ್ ಇನ್ನೂ ಭದ್ರತಾ ನಿಯಮಗಳನ್ನು ಪೂರ್ಣಗೊಳಿಸಿಲ್ಲ. ಇದು ಪೂರ್ಣಗೊಂಡ ನಂತರವೇ ಸ್ಯಾಟಲೈಟ್ ಸಂಪರ್ಕ ಸೇವೆಗೆ ಲೈಸೆನ್ಸ್ ನೀಡಲಾಗುವುದು. ಇದಕ್ಕೆ ಸಂಸ್ಥೆ ಅಗತ್ಯ ಕಾನೂನು ಕ್ರಮಗಳನ್ನು ಮುಗಿಸಬೇಕು ಎಂದು ಕಳೆದ ನವೆಂಬರ್ನಲ್ಲಿ ಭಾರತದ ಟೆಲಿಕಾಂ ಸಚಿವ ಜ್ಯೋತಿರಾಧಿತ್ಯ ಸ್ಕಿಂದಿಯಾ ಹೇಳಿದ್ದರು.
ಇತ್ತೀಚೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅಮೆರಿಕಕ್ಕೆ ಪ್ರವಾಸ ಕೈಗೊಂಡ ವೇಳೆ ಮಸ್ಕ್ ಅವರನ್ನು ಭೇಟಿಯಾಗಿ ಸ್ಪೇಸ್ ಎಕ್ಸ್, ಟೆಸ್ಲಾ ಭಾರತ ಪ್ರವೇಶ ಹಾಗು ಹಲವು ವಿಚಾರಗಳ ಕುರಿತು ಮಾತುಕತೆ ನಡೆಸಿದ್ದರು. ಈ ಬೆನ್ನಲ್ಲೇ ಈ ಒಪ್ಪಂದವೂ ನಡೆದಿದೆ.
Discover more from Coastal Times Kannada
Subscribe to get the latest posts sent to your email.
Discussion about this post