ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸಿಆರ್‌ಝಡ್ ವಲಯದಲ್ಲಿ ಮರಳು ದಿಬ್ಬ ತೆರವಿಗೆ ಪರಿಸರ ಇಲಾಖೆ ನೀಡಿರುವ ಪರಿಸರ ವಿಮೋಚನ ಪತ್ರ (ಇಸಿ ಕ್ಲಿಯರೆನ್ಸ್) ದ ಅವಧಿ ಸೆ. 16ಕ್ಕೆ ಮುಗಿಯಲಿದ್ದು ಸೆ. 17ರಿಂದ ಮರಳುಗಾರಿಕೆ ಸ್ಥಗಿತಗೊಳ್ಳಲಿದೆ.
ಮತ್ತೆ ಮರಳುಗಾರಿಕೆಗೆ ಹೊಸದಾಗಿ ಪ್ರಕ್ರಿಯೆಗಳು ನಡೆಯಬೇಕಿವೆ. ನಾನ್‌ಸಿಆರ್‌ಝಡ್‌ನ 16 ಬ್ಲಾಕ್‌ಗಳಲ್ಲಿ ಮರಳುಗಾರಿಕೆ ಮುಂದುವರಿಯಲಿದೆ. ಜಿಲ್ಲೆಯ ಸಿಆರ್‌ಝಡ್‌ನಲ್ಲಿ ನವೆಂಬರ್‌ನಿಂದ ಈ ವರೆಗೆ 2,35,414 ಮೆಟ್ರಿಕ್ ಟನ್ ಮರಳು ತೆರವುಗೊಳಿಸಲಾಗಿದೆ.
ಸಿಆರ್‌ಝಡ್‌ನಲ್ಲಿ 2019ರ ಡಿ. 26ಕ್ಕೆ ಕೊನೆಗೊಂಡಿದ್ದ ಮರಳುಗಾರಿಕೆ ಕರ್ನಾಟಕ ಕರಾವಳಿ ವಲಯ ನಿರ್ವಹಣೆ ಸಮಿತಿ (ಕೆಸಿಝಡ್‌ಎಂ)ಯ ಅನುಮೋದನೆ ಪ್ರಕ್ರಿಯೆಗಳು ನಡೆದು 2020ರ ನವೆಂಬರ್‌ನಲ್ಲಿ ಆರಂಭಗೊಂಡಿತ್ತು. ನೇತ್ರಾವತಿ 8, ಗುರುಪುರ 4 ಹಾಗೂ ಶಾಂಭವಿ ನದಿಯಲ್ಲಿ 1ಬ್ಲಾಕ್ ಸಹಿತ 13 ಬ್ಲಾಕ್ (ದಿಬ್ಬ)ಗಳಲ್ಲಿ ಮರಳು ತೆರವಿಗೆ ಎರಡು ಹಂತಗಳಲ್ಲಿ 105 ಮಂದಿ ಗುತ್ತಿಗೆದಾರರಿಗೆ ಪರವಾನಿಗೆ ನೀಡಲಾಗಿತ್ತು.
ಜೂ. 1ರಿಂದ ಎರಡು ತಿಂಗಳ ಕಾಲ ಜಾರಿಯಲ್ಲಿದ್ದ ಮರಳುಗಾರಿಕೆ ನಿಷೇಧ ಜು. 31ಕ್ಕೆ ಕೊನೆಗೊಂಡು ಆಗಸ್ಟ್ ಮಧ್ಯಭಾಗದಲ್ಲಿ ನಿಯಮಗಳನ್ನು ಉಲ್ಲಂಘಿಸಿರುವ ಪ್ರಕರಣ ಗಳಲ್ಲಿ ಒಳಗೊಂಡಿರುವ ಪರವಾನಿಗೆಗಳಿಗೆ ಹೊರತಾಗಿ ಉಳಿದ ಪರವಾನಿಗೆದಾರರು ಸೆ. 16ರ ವರೆಗೆ ಮರಳುಗಾರಿಕೆ ನಡೆಸಬಹುದಾಗಿದೆ.