ಬಂಟ್ವಾಳ : ಸುಮಾರು 628 ಅಡಿಕೆ ಮರಗಳು ನೀಡಿದ ಫಲದಿಂದ ದೊರೆತ ಆರ್ಥಿಕ ಆದಾಯದಿಂದ ಸರ್ಕಾರಿ ಶಾಲೆಯೊಂದು ಬಸ್ ಖರೀದಿ ಮಾಡಿ ಗಮನ ಸೆಳೆದಿದೆ. ತನ್ನ ಕೈತೋಟದ ಮೂಲಕ ಈಗಾಗಲೇ ಪ್ರಸಿದ್ಧಿ ಪಡೆದಿರುವ ಬಂಟ್ವಾಳ ತಾಲೂಕಿನ ಗಡಿಗ್ರಾಮಗಳಲ್ಲೊಂದಾದ ಮಿತ್ತೂರಿನಲ್ಲಿರುವ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ, ಅದರಿಂದ ಲಭ್ಯವಾದ ಆದಾಯದಿಂದ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗಲು ಬಸ್ ಖರೀದಿಸಿದೆ. ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೊಳಪಟ್ಟ ಈ ಶಾಲೆಗೆ ಖುದ್ದು ಆಗಮಿಸಿದ ಶಾಸಕ ಸಂಜೀವ ಮಠಂದೂರು ಬಸ್ಗೆ ಚಾಲನೆ ನೀಡಿ, ಶಾಲೆಗೆ ಮತ್ತಷ್ಟು ನೆರವುಗಳನ್ನು ಘೋಷಿಸಿದರು. ಇದೀಗ ಸೋಮವಾರ ಶಾಲೆ ಮಕ್ಕಳು ಬಸ್ಸು ಹತ್ತಿ ಶಾಲೆಗೆ ಆಗಮಿಸಿ ಸಂಭ್ರಮಪಟ್ಟರು.
ಶಾಲಾ ಆವರಣದಲ್ಲಿವೆ 628 ಅಡಿಕೆ ಗಿಡಗಳು.. ಶಾಲೆ ಸುಮಾರು 4.15 ಎಕರೆಯಷ್ಟು ಜಾಗವನ್ನು ಹೊಂದಿದ್ದು, ಅದರಲ್ಲಿ ಒಂದು ಎಕರೆಯಷ್ಟು ಪೂರ್ತಿ ಅಡಿಕೆ ತೋಟವನ್ನೇ ಹೊಂದಿದೆ. ಅಲ್ಲದೆ ಇತರೆಡೆಗಳಲ್ಲೂ ಅಡಿಕೆ ಗಿಡ ನೆಡಲಾಗಿದೆ. ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಆದಂ ಮಿತ್ತೂರು ಅವರು ಇತರ ಎಸ್.ಡಿ.ಎಂ.ಸಿ. ಸದಸ್ಯರ ಜತೆಗೂಡಿ ಕೆಲ ವರ್ಷಗಳ ಹಿಂದೆ ಸ್ವತಃ ಧನಸಹಾಯ ಮಾಡುವ ಮೂಲಕ ಶಾಲಾಭಿವೃದ್ಧಿ ಜತೆಗೆ ಕೈತೋಟದ ಅಭಿವೃದ್ಧಿಗೆ ಕಾರ್ಯೋನ್ಮುಖರಾದರು. 2017ರಲ್ಲಿ ನೆಟ್ಟ 628 ಗಿಡಗಳು ಈಗ ಮರವಾಗಿವೆ. ಐದು ವರ್ಷಗಳ ಫಲವನ್ನು ಶಾಲಾ ಮಕ್ಕಳು ಪಡೆಯುತ್ತಿದ್ದಾರೆ ಎಂದು ಇಲ್ಲಿನ ಶಿಕ್ಷಕ ಸಂಜೀವ ಎನ್. ತಿಳಿಸಿದರು.
ಶಾಸಕ ಸಂಜೀವ ಮಠಂದೂರು ಅವರು ಈ ಬಸ್ ಸೇವೆಗೆ ಈಚೆಗೆ ಚಾಲನೆ ನೀಡಿ, ಗ್ರಾಮಸ್ಥರು, ಶಾಲೆಯ ಶಿಕ್ಷಕರು ಹಾಗೂ ಎಸ್‌ಡಿಎಂಸಿಯ ಸೇವೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಶಾಲೆಗೆ ಕೊಠಡಿ ಮಂಜೂರು ಮಾಡಲಾಗಿದ್ದು ಹೆಚ್ಚುವರಿ ಒಂದು ಕೊಠಡಿ ಹಾಗೂ ಕಾಂಕ್ರೀಟ್ ರಸ್ತೆಯನ್ನು ಮುಂದಿನ ದಿನಗಳಲ್ಲಿ ಮಂಜೂರು ಮಾಡಲಾಗುವುದು ಎಂದರು. ಇಡ್ಕಿದು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಸುಧೀರ್ ಕುಮಾರ್ ಶೆಟ್ಟಿ, ಎಸ್‌ಡಿಎಂಸಿ ಅಧ್ಯಕ್ಷ ಆದಂ ಎಂ.ಎಂ.ಎಸ್., ಉಪಾಧ್ಯಕ್ಷೆ ಮಲ್ಲಿಕಾ ತಾರನಾಥ, ಮುಖ್ಯ ಶಿಕ್ಷಕಿ ಸರೋಜಾ ಎ. ಇದ್ದರು.
Discover more from Coastal Times Kannada
Subscribe to get the latest posts sent to your email.
Discussion about this post