ಲಖನೌ: ಕೇರಳದ ಪತ್ರಕರ್ತ ಸಿದ್ದಿಕಿ ಕಪ್ಪನ್‌ಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿದ್ದರೂ, ಅವರ ವಿರುದ್ಧದ ಮತ್ತೊಂದು ಪ್ರಕರಣದ ತನಿಖೆ ಜಾರಿ ನಿರ್ದೇಶನಾಲಯದಲ್ಲಿ ಬಾಕಿ ಇರುವ ಕಾರಣ ಜೈಲಿನಲ್ಲೇ ಉಳಿಯುವಂತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಾತ್ರಾಸ್‌ಗೆ ತೆರಳುವ ಮಾರ್ಗದಲ್ಲಿ ಉತ್ತರ ಪ್ರದೇಶ ಪೊಲೀಸರು ಕಪ್ಪನ್ ಅವರನ್ನು ಅಕ್ಟೋಬರ್ 2020ರಲ್ಲಿ ಬಂಧಿಸಿದ್ದು, ಅಂದಿನಿಂದ ಜೈಲಿನಲ್ಲಿದ್ದಾರೆ. ಸುಪ್ರೀಂ ಕೋರ್ಟ್ ಕಪ್ಪನ್ ಅವರಿಗೆ ಶುಕ್ರವಾರವಷ್ಟೇ ಜಾಮೀನು ಮಂಜೂರು ಮಾಡಿತ್ತು. ತಲಾ ಒಂದು ಲಕ್ಷದ ಎರಡು ಖಾತರಿ ನೀಡಬೇಕು ಎಂಬ ಷರತ್ತಿನೊಂದಿಗೆ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರು (ಎಎಸ್‌ಜೆ) ಜಾಮೀನಿನ ಮೇಲೆ ಬಿಡುಗಡೆಗೆ ಸೋಮವಾರ ಆದೇಶ ನೀಡಿದ್ದರು. ಆದರೆ, ಇವರ ವಿರುದ್ಧದ ಪ್ರಕರಣದ ತನಿಖೆ ಇ.ಡಿಯಲ್ಲಿ ಬಾಕಿ ಇದೆ ಎಂದು ಕಾರಾಗೃಹದ ಪಿಆರ್‌ಒ ಸಂತೋಷ್ ವರ್ಮಾ ತಿಳಿಸಿದರು. ಗಲಭೆಗೆ ಪ್ರಚೋದನೆ ನೀಡಲು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ಜೊತೆಗೂಡಿ ಸಂಚು ರೂಪಿಸಿದ ಆರೋಪದಡಿ ಕಪ್ಪನ್ ಮತ್ತು ಇತರ ಮೂವರನ್ನು ಪೊಲೀಸರು ಬಂಧಿಸಿದ್ದರು. ಐಪಿಸಿ, ಕಾನೂನುಬಾಹಿರ ಚಟುವಟಿಕೆ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು. ಜಾರಿ ನಿರ್ದೇಶನಾಲಯವು ಕಪ್ಪನ್ ವಿರುದ್ಧ ಹಣ ಅಕ್ರಮ ವರ್ಗಾವಣೆ ಆರೋಪ ಕುರಿತಂತೆ ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸುತ್ತಿದೆ. ಸುಪ್ರೀಂ ಕೋರ್ಟ್ ಒಂದು ಪ್ರಕರಣದಲ್ಲಿ ಜಾಮೀನು ನೀಡಿದ್ದನ್ನು ಸ್ವಾಗತಿಸಿರುವ ವಿರೋಧ ಪಕ್ಷಗಳು, ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲೂ ಜಾಮೀನು ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿವೆ.
Discover more from Coastal Times Kannada
Subscribe to get the latest posts sent to your email.
Discussion about this post