ಉಳ್ಳಾಲ, ಸೆ.12 : ಕಳೆದ ಜೂನ್ ಮತ್ತು ಜುಲೈ ತಿಂಗಳಲ್ಲಿ ಪಜೀರು ಮತ್ತು ತೊಕ್ಕೊಟ್ಟುವಿನಲ್ಲಿ ಚಿನ್ನ ಕದ್ದಿದ್ದ ಕಳ್ಳಿಯೋರ್ವಳನ್ನು ಉಳ್ಳಾಲ ಪೊಲೀಸರು ಮಹತ್ತರ ಕಾರ್ಯಾಚರಣೆ ನಡೆಸಿ ಬಂಧಿಸಿದ್ದು, ಆಕೆಯಿಂದ 1.80 ಲಕ್ಷ ರೂಪಾಯಿ ಮೌಲ್ಯದ 18 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
ಬೆಳ್ಮ ಗ್ರಾಮ ನಿವಾಸಿ ರಹಮತ್ ರವರು ತನ್ನ ಮಕ್ಕಳೊಂದಿಗೆ ಜೂನ್ 2 ರಂದು ತೊಕ್ಕೊಟ್ಟು ವಿನ ಸಾಗರ ಕಲೆಕ್ಷನ್ ಅಂಗಡಿಗೆ ತೆರಳಿದ್ದರು. ಈ ವೇಳೆ ಮಳೆ ಬಂದ ಕಾರಣ ಬೇಕರಿಯ ಮುಂದೆ ಇವರು ನಿಂತು ಕೊಂಡಿದ್ದರು. ಇದೇ ಸಂದರ್ಭದಲ್ಲಿ ರಹಮತ್ ರವರ ಮಗಳ ಕುತ್ತಿಗೆಯಲ್ಲಿದ್ದ 10 ಗ್ರಾಂ ಚಿನ್ನವನ್ನು ಬುರ್ಖಾ ಧರಿಸಿ ಬಂದ ಮಹಿಳೆಯೊಬ್ಬರು ಎಗರಿಸಿದ್ದರು. ಈ ಬಗ್ಗೆ ರಹಮತ್ ನೀಡಿದ ದೂರಿನಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಉಳ್ಳಾಲ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ವಿರೂಪಾಕ್ಷ ಸ್ವಾಮಿ ನೇತೃತ್ವದ ತಂಡವು ಖಚಿತ ಮಾಹಿತಿಯನ್ವಯ ಇಂದು ಉಳ್ಳಾಲ ಅಕ್ಕರೆಕೆರೆ ನಿವಾಸಿ ಮಿನ್ನತ್ ಎಂಬಾಕೆಯನ್ನು ಸೆ.12 ರಂದು ವಶಕ್ಕೆ ಪಡೆದು ವಿಚಾರಣೆ ನಡೆಸಿ ಸುಲಿಗೆ ಮಾಡಿದ 10 ಗ್ರಾಂ ಚಿನ್ನದ ಸರವನ್ನು ವಶಪಡಿಸಿಕೊಂಡಿದೆ.
ಈಕೆ ಜುಲೈ 9 ರಂದು ಪಜೀರ್ ಗ್ರಾಮ ದ ಕಂಬಳ ಪದವು ಬಳಿ ಇರುವ ಕೆ.ಎಮ್.ಎಸ್ ಕನ್ವೇನ್ ಹಾಲ್ ಗೆ ಮದುವೆ ಕಾರ್ಯಕ್ರಮಕ್ಕೆ ತೆರಳಿ ಮಹಿಳೆಯೊಬ್ಬರ ಬ್ಯಾಗ್ ನಿಂದ 8 ಗ್ರಾಂ ತೂಕದ ಚಿನ್ನದ ಸರವನ್ನು ಕಳವು ಮಾಡಿರುವುದು ತಿಳಿದು ಬಂದಿದ್ದು, ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿತೆ ಮಿನ್ನತ್ ಎಂಬಾಕೆಯಿಂದ ಸುಲಿಗೆ ಮಾಡಿದ ಚಿನ್ನವನ್ನು ವಶಪಡಿಸಿಕೊಂಡ ಉಳ್ಳಾಲ ಪೊಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post