ಮಂಗಳೂರಿನಿಂದ ಬಜ್ಪೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ಹಾದಿಯಲ್ಲಿ ಮಂಗಳೂರಿನಿಂದ 8 ಕಿ.ಮೀ ದೂರದಲ್ಲಿ ಪ್ರಕೃತಿಯ ಮಡಿಲಲ್ಲಿ ಕಂಗೊಳಿಸುವ ಬೊಂದೆಲ್ ಎಂಬಲ್ಲಿ ರಸ್ತೆಯ ಬಲ ಪಾರ್ಶ್ವದಲ್ಲಿ ಇರುವ ಸಂತ ಲಾರೆನ್ಸರ ಸುಂದರ ದೇವಾಲಯ ಹಾಗೂ ಪುಣ್ಯಕ್ಷೇತ್ರ ಹಲವಾರು ಭಕ್ತಾಭಿಮಾನಿಗಳನ್ನು ತನ್ನತ್ತ ಸೆಳೆಯುತ್ತಿದೆ. ಈಗಾಗಲೇ ನೂರು ಸಂವತ್ಸರಗಳನ್ನು ಪೂರೈಸಿದ ಈ ಚರ್ಚ್ ಹಾಗೂ ಪುಣ್ಯಕ್ಷೇತ್ರಕ್ಕೆ ಇದೀಗ ತ್ರಿವಳಿ ಸಂಭ್ರಮ.
ಹಿನ್ನೆಲೆ: ಶತಮಾನದ ಹಿಂದೆ ಭಾರತಕ್ಕೆ ಆಗಮಿಸಿದ ಪ್ರೆಂಚ್ ಧರ್ಮಗುರು ವಂ| ಅಲೆಕ್ಸಾಂಡರ್ ದುಬೋಯ್ಸ್ ಇವರು ಈ ಪ್ರದೇಶಕ್ಕೆ ಭೇಟಿ ನೀಡಿದಾಗ ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಕಂಡು ಅವರ ಮಾತೃಭಾಷೆ ಪ್ರೆಂಚ್‍ನಲ್ಲಿ ‘ಬೊನ್‍ವೆಲ್’ (ಅತೀ ಸುಂದರ) ಎಂದು ಪ್ರಶಂಸಿಸಿದ ಉದ್ಘಾರವೇ ಕಾಲಕ್ರಮೇಣ ‘ಬೊಂದೆಲ್’ ಎಂಬ ಹೆಸರಿಗೆ ಕಾರಣವಾಯಿತು ಎನ್ನುವುದು ಪ್ರತೀತಿ. 1923ರ ತನಕ ಬೊಂದೆಲ್ ಒಂದು ಸ್ವತಂತ್ರ ಚರ್ಚ್ ಆಗಿರಲಿಲ್ಲ. ಅಂದಿನ ದಿನಗಳಲ್ಲಿ ಈ ಪ್ರದೇಶದ ಕ್ರೈಸ್ತ ಬಾಂಧವರು ತಮ್ಮ ಧಾರ್ಮಿಕ ಸೇವಾ ಸಂಸ್ಕಾರಗಳಿಗಾಗಿ ಏಳೆಂಟು ಮೈಲುಗಳ ದೂರದ ಮಿಲಾಗ್ರಿಸ್ ಮತ್ತು ರೊಜಾರಿಯೋ ಚರ್ಚ್‍ಗಳಿಗೆ ಕಾಲ್ನಡಿಗೆಯಲ್ಲಿ ಹೋಗುತ್ತಿದ್ದರು. ಕ್ರೈಸ್ತ ಬಾಂಧವರ ಈ ಕಷ್ಟವನ್ನರಿತ ಮಿಲಾಗ್ರಿಸ್ ಚರ್ಚ್‍ನ ಅಂದಿನ ಧರ್ಮಗುರು ವಂ| ಲುವಿಸ್ ಫೆರ್ನಾಂಡಿಸ್ ಅವರು ಪಚ್ಚನಾಡಿ ಗ್ರಾಮದ ಬಂಗೇರ ಸೀಮೆಯ ತೋಟದಲ್ಲಿ ಒಂದು ಪ್ರಾರ್ಥನಾಲಯ ನಿರ್ಮಿಸಿದರು. 1908ರಲ್ಲಿ ಸ್ಥಾಪನೆಯಾದ ಒಂದು ಶಾಲೆಯು ಆ ಜಾಗದಲ್ಲಿ ಇತ್ತು. ಮಿಲಾಗ್ರಿಸ್ ಚರ್ಚ್‍ನ ಇನ್ನೋರ್ವ ಧರ್ಮಗುರು ವಂ| ಫ್ರ್ಯಾಂಕ್ ಪಿರೇರಾ ಅವರು ಶನಿವಾರದಂದು ಈ ಪ್ರಾರ್ಥನಾಲಯಕ್ಕೆ ಆಗಮಿಸಿ ರವಿವಾರದ ಬಲಿಪೂಜೆ ಹಾಗೂ ಇತರ ಸಂಸ್ಕಾರಗಳನ್ನು ನೆರವೇರಿಸುತ್ತಿದ್ದರು. ಕ್ರಮೇಣ 1913ರಲ್ಲಿ ಅವರು ಈ ಪ್ರಾರ್ಥನಾಲಯವನ್ನು ಶಾಲೆಯ ಸಮೇತ ಪ್ರಸ್ತುತ ಚರ್ಚ್ ಇರುವ ಜಾಗಕ್ಕೆ ಸ್ಥಳಾಂತರಿಸಿದರು. ಬಲಿಪೂಜೆ ಅರ್ಪಿಸಲು ಒಂದು ತಾತ್ಕಾಲಿಕ ಮುಳಿಹುಲ್ಲಿನ ಛಾವಣಿಯನ್ನು ನಿರ್ಮಿಸಿದರು ಹಾಗೂ ಶಾಲೆಗೆ ಒಂದು ಕಟ್ಟಡವನ್ನು ಕಟ್ಟಲು ಆರಂಭಿಸಿದರು. ಜನರ ನೆರವಿನಿಂದ 1915ರಲ್ಲಿ ಹೊಸ ಪ್ರಾರ್ಥನಾಲಯ ನಿರ್ಮಾಣವಾಯಿತು. 1917ರಲ್ಲಿ ಪ್ರಭಾರ ಧರ್ಮಗುರುಗಳಾಗಿ ನಿಯುಕ್ತಿಗೊಂಡ ವಂ| ಜುಲಿಯಾನ್ ಡಿ’ಸೋಜಾ ಇವರು 1922ರಲ್ಲಿ ಮಿಲಾಗ್ರಿಸ್ ಚರ್ಚ್‍ನ ಸಹಕಾರದಿಂದ ಚಿಕ್ಕದಾಗಿದ್ದ ಬೊಂದೆಲ್ ದೇವಾಲಯದ ಕಟ್ಟಡವನ್ನು ದೊಡ್ಡದಾಗಿ ಕಟ್ಟಿಸಿದರು. 1923 ರಲ್ಲಿ ಅಂದಿನ ಬಿಷಪ್ ಅತೀ ವಂದನೀಯ ಪಾವ್ಲ್ ಪೆರಿನಿ ಅವರು ಬೊಂದೆಲ್‍ನಲ್ಲಿ ಆದ ಪ್ರಗತಿಯನ್ನು ಗಮಿನಿಸಿ 1923, ಮೇ 1 ರಂದು ಬೊಂದೆಲ್ ಒಂದು ಅಧಿಕೃತ ಚರ್ಚ್ ಎಂದು ಪ್ರಕಟಿಸಿ ಈ ದೇವಮಂದಿರವನ್ನು ಸಂತ ಲಾರೆನ್ಸರಿಗೆ ಸಮರ್ಪಿಸಿದರು ಹಾಗೂ ವಂ| ಫ್ರ್ಯಾಂಕ್ ಪಿರೇರಾ ಇವರನ್ನು ಇಲ್ಲಿನ ಪ್ರಥಮ ಧರ್ಮಗುರುಗಳನ್ನಾಗಿ ನೇಮಿಸಿದರು. ಅಂದು ಕ್ರೈಸ್ತ ಬಾಂಧವರ ಏಕತೆಯಿಂದ ಆರಂಭಗೊಂಡ ಈ ಚರ್ಚ್‍ನ ಯಶಸ್ವಿ ಬೆಳವಣಿಗೆಗಾಗಿ ಇದುವರೆಗೆ 12 ಪ್ರಧಾನ ಧರ್ಮಗುರುಗಳು ಹಾಗೂ ಅನೇಕ ಸಹಾಯಕ ಧರ್ಮಗುರುಗಳು ತಮ್ಮ ನಿಸ್ವಾರ್ಥ ಸೇವೆಯನ್ನು ಧಾರೆ ಎರೆದಿದ್ದಾರೆ. ಪ್ರಸ್ತುತ ವಂ| ಆ್ಯಂಡ್ರ್ಯೂ ಲಿಯೋ ಡಿ’ಸೋಜಾ ಅವರು ಪ್ರಧಾನ ಧರ್ಮಗುರುಗಳಾಗಿ, ವಂ| ವಿಲಿಯಂ ಡಿ’ಸೋಜಾ ಸಹಾಯಕ ಧರ್ಮಗುರುಗಳಾಗಿ ಹಾಗೂ ವಂ| ಪೀಟರ್ ಗೊನ್ಸಾಲ್ವಿಸ್ ಶಾಲಾ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಅಭಿವೃದ್ಧಿಯ ಅಭಿಯಾನ: ಕೆಲವೇ ಕ್ರೈಸ್ತ ಕುಟುಂಬಗಳ ಸಮುದಾಯದೊಂದಿಗೆ ಆರಂಭಗೊಂಡ ಈ ದೇವಾಲಯ ಇಂದು ಸುಮಾರು 1200 ಕ್ಕಿಂತ ಹೆಚ್ಚು ಕುಟುಂಬಗಳ ಸಹಯೋಗದೊಂದಿಗೆ ಹೆಮ್ಮರವಾಗಿ ಬೆಳೆದಿದೆ, 36 ವಾರ್ಡ್ಗಳ ಏಕತೆಯೊಂದಿಗೆ ಅಭಿವೃದ್ಧಿಯ ಮುಂಚೂಣಿಯಲ್ಲಿರುವ ಈ ದೇವಾಲಯದ, ಚರ್ಚ್ ಆಡಳಿತ ಮಂಡಳಿ ಉಪಾಧ್ಯಕ್ಷರು, ಕಾರ್ಯದರ್ಶಿ, ಪಾಲನಾ ಪರಿಷತ್ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಸದಸ್ಯರು, ಚರ್ಚ್ ವ್ಯಾಪ್ತಿಯ ಧರ್ಮಭಗಿನಿಯರು, ಧರ್ಮಗುರುಗಳು ಹಾಗೂ ಸಮಸ್ತ ಕ್ರೈಸ್ತ ಬಾಂಧವರ ನಿಸ್ವಾರ್ಥ ಸೇವೆಯಿಂದ ಈ ಕೇಂದ್ರವು ದಿನದಿಂದ ದಿನಕ್ಕೆ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುತ್ತಿದೆ. ಚರ್ಚ್ ಅಧೀನದಲ್ಲಿ ಸಂತ ಲಾರೆನ್ಸರ ಹಿರಿಯ ಪ್ರಾಥಮಿಕ ಶಾಲೆ, ಸಂತ ಲಾರೆನ್ಸ್ ಇಂಗ್ಲೀಷ್ ಮೀಡಿಯಂ ನರ್ಸರಿ, ಪ್ರೈಮರಿ ಹಾಗೂ ಪ್ರೌಢಶಾಲೆ ಕೂಡಾ ಇದೆ. ಸಂತ ಲಾರೆನ್ಸ್ ಕನ್ನಡ ಮಾಧ್ಯಮ ಶಾಲೆಗೆ 116 ವರ್ಷಗಳ ಇತಿಹಾಸವಿದೆ.
ಬೊಂದೆಲ್ ಧರ್ಮಕೇಂದ್ರದ ಮುಖವಾಣಿ – “ಬೊಂದೆಲ್ಚೆಂ ಬೊಂದೆರ್” ಚರ್ಚ್‍ನಲ್ಲಿ ನಡೆಯುವ ವಿವಿಧ ಚಟುವಟಿಕೆ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಪ್ರಕಟಿಸಲು 1996ರಲ್ಲಿ ಪ್ರಾರಂಭಿಸಿದ ‘ಬೊಂದೆಲ್ಚೆಂ ಬೊಂದೆರ್’ ಚರ್ಚ್ ಪತ್ರಿಕೆ ಪ್ರತಿ ತಿಂಗಳು ಪ್ರಕಟವಾಗಿ ಜನಾನುರಾಗಿಯಾಗಿದೆ. www.bondelchurch.in ವೆಬ್’ಸೈಟ್ ಮೂಲಕ ಕ್ಷಣಾರ್ಧದಲ್ಲಿ ಚರ್ಚ್‍ನ ಕಾರ್ಯಕ್ರಮಗಳ ವಿವರಗಳು ಜಗತ್ತಿನಾದ್ಯಾಂತ ಪ್ರಸಾರವಾಗುತ್ತವೆ.
ಪವಿತ್ರ ಪರಮ ಪ್ರಸಾದದ ಆರಾಧನಾಲಯ: 2012 ರಲ್ಲಿ ಸ್ಥಾಪನೆಯಾದ ಪವಿತ್ರ ಪರಮ ಪ್ರಸಾದದ ಆರಾಧನಾಲಯ ಭಕ್ತಾಭಿಮಾನಿಗಳಿಗೆ ಕೆಲವು ಕ್ಷಣಗಳನ್ನು ಪ್ರಶಾಂತತೆಯಲ್ಲಿ ಕಳೆಯಲು ಮುಕ್ತವಾಗಿದೆ.
ಪವಿತ್ರ ಶಿಲುಬೆಯ ಸ್ಮರಣ ಕುರುಹು: ದಾಖಲೆಗಳ ಪ್ರಕಾರ 1894ರಲ್ಲಿ ಈ ಚರ್ಚ್’ಗೆ ನೀಡಿದ ಅಪೂರ್ವ ಪುರಾತನ, ಯೇಸುಕ್ರಿಸ್ತರು ಜೀವದ ಬಲಿದಾನಗೈದ ಶಿಲುಬೆಯ ಅಂಶವನ್ನು ಹೊಂದಿರುವ ಸ್ಮರಣ ಕುರುಹು, ಚರ್ಚ್‍ನಲ್ಲಿ ಪ್ರತಿಷ್ಠಾಪಿಸಿರುವುದು ಬಹಳಷ್ಟು ಪವಿತ್ರ ಹಾಗೂ ಗೌರವಕ್ಕೆ ಪಾತ್ರವಾಗಿದೆ.
ಸಂತ ಲಾರೆನ್ಸರ ಪುಣ್ಯಕ್ಷೇತ್ರ: ಈ ಪುಣ್ಯಕ್ಷೇತ್ರವು 2012ರಲ್ಲಿ ಅಂದಿನ ಧರ್ಮಗುರುಗಳು ವಂ| ಆ್ಯಂಡ್ರ್ಯೂ ಡಿ’ಸೋಜರವರ ಮುಂದಾಳತ್ವದಲ್ಲಿ ಆರಂಭ ಮಾಡಲಾಯಿತು. ಆ ವರ್ಷ ಆಗಸ್ಟ್ 10 ರಂದು ಸಂತ ಲಾರೆನ್ಸರ ಹಬ್ಬವನ್ನು ಆಚರಿಸಿದ ಪ್ರಯುಕ್ತ ಸಾವಿರಾರು ಸಂಖ್ಯೆಯಲ್ಲಿ ಭಕ್ತಾಭಿಮಾನಿಗಳು ಈ ಸಂಭ್ರಮದಲ್ಲಿ ಪಾಲ್ಗೊಂಡು ಇಲ್ಲಿ ಭಕ್ತಿ ಭಾವದ ವಾತಾವರಣ ಸೃಷ್ಟಿಯಾಯಿತು. ದಿನದಿಂದ ದಿನಕ್ಕೆ ಈ ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚಾಯಿತು. ಇದನ್ನರಿತ ಧರ್ಮಗುರುಗಳ ಮುಂದಾಳತ್ವದಲ್ಲಿ 2013ನೇ ಇಸವಿಯಲ್ಲಿ ವಾರ್ಷಿಕ ಮಹೋತ್ಸವವನ್ನು ಆಗಸ್ಟ್ 10 ರಂದು ವಿಜೃಂಭಣೆಯಿಂದ ಆಚರಿಸಲು ಹಬ್ಬದ ಸಿದ್ಧತೆಯಾಗಿ, 9 ದಿನಗಳ ನೊವೆನಾ ಪ್ರಾರ್ಥನೆ, ಪೂಜೆ ಹಾಗೂ ಅನ್ನದಾನ ಕಾರ್ಯಕ್ರಮ ಏರ್ಪಡಿಸಲಾಯಿತು. ಅದೇ ವರ್ಷ ಪ್ರತೀ ಮಂಗಳವಾರ ಬೆಳಿಗ್ಗೆ 10.00 ಗಂಟೆಗೆ ಆರಾಧನೆ, ಪೂಜೆ, ನೊವೆನಾ, ರೋಗಿಗಳಿಗಾಗಿ ಪ್ರಾರ್ಥನೆ, ಬಳಿಕ ಭೋಜನದ ವ್ಯವಸ್ಥೆ ಮಾಡಿರುವುದರಿಂದ ದೂರದ ಊರುಗಳಿಂದ ವರುಷವಿಡೀ ಹಲವಾರು ಭಕ್ತರು ಇಲ್ಲಿ ಭೇಟಿ ನೀಡುತ್ತಿದ್ದು, ಸಂತ ಲಾರೆನ್ಸರ ದಯೆಯಿಂದ ಹಲವಾರು ಪವಾಡಗಳು ನಡೆದಿರುವುದರಿಂದ ಈ ಕ್ಷೇತ್ರ ಪುಣ್ಯಕ್ಷೇತ್ರವಾಗಿ ಮಾರ್ಪಾಡಾಯಿತು.
ಹೀಗೆ ಪವಾಡ ಪುರುಷ ಸಂತ ಲಾರೆನ್ಸರಿಗೆ ಸಮರ್ಪಿಸಿದ ಈ ಧರ್ಮಕೇಂದ್ರವು ದಿನೇ ದಿನೇ ಅಭಿವೃದ್ಧಿ ಪಡೆದು ಪುಣ್ಯಕ್ಷೇತ್ರವಾಗಿ ಬೆಳೆದು ಬಂದು ದೇಶ ವಿದೇಶಗಳಲ್ಲಿ ಪ್ರಸಿದ್ದಿಯನ್ನು ಪಡೆದಿದೆ. ಈಗಾಗಲೇ 100 ಸಂವತ್ಸರಗಳನ್ನು ಪೂರೈಸಿದ ಈ ದೇವಾಲಯದ ಶತಮಾನೋತ್ಸವದ ಸಲುವಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಈಗಾಗಲೇ ಶತಮಾನೋತ್ಸವದ ಸವಿನೆನಪಿಗಾಗಿ ಪ್ರಧಾನ ಧರ್ಮಗುರು ವಂ| ಆ್ಯಂಡ್ರ್ಯೂ ಲಿಯೋ ಡಿ’ಸೋಜರವರ ನೇತೃತ್ವದಲ್ಲಿ ಬಡವರಿಗಾಗಿ ನಿರ್ಮಾಣಗೊಂಡ 3 ಮನೆಗಳು ಹಾಗೂ ನವೀಕೃತ ಚರ್ಚ್‍ನ ಸುಂದರ ಕಟ್ಟಡದ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಇವರು ಧನ ಸಂಗ್ರಹ ಮಾಡಿದ ಕಾರ್ಯವೈಖರಿ, ಎಲ್ಲರ ಸಹಕಾರ ಪಡೆದು ಮಾಡಿದ ಸಾಧನೆ ಶ್ಲಾಘನೀಯವಾಗಿದೆ. ನವೀಕೃತ ಸಂತ ಲಾರೆನ್ಸರ ದೇವಾಲಯದ ಉದ್ಘಾಟನೆ ಹಾಗೂ ಆಶೀರ್ವಚನ ಕಾರ್ಯವನ್ನು ನವೆಂಬರ್ 18 ರಂದು ಮಂಗಳೂರಿನ ಧರ್ಮಾಧ್ಯಕ್ಷರಾಗಿರುವ ಅತೀ ವಂದನೀಯ ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ ಇವರು ನೆರವೇರಿಸುವರು.
ಪುಣ್ಯಕ್ಷೇತ್ರ ಉದ್ಘಾಟನೆ ಹಾಗೂ ಆಶೀರ್ವಚನ: ನವೀಕೃತ ಚರ್ಚ್‍ನ ಸಮೀಪ ಮುಖ್ಯರಸ್ತೆಯ ಪಕ್ಕದಲ್ಲಿ ಹೊಸದಾಗಿ ಸಂತ ಲಾರೆನ್ಸರ ಪುಣ್ಯಕ್ಷೇತ್ರವನ್ನು ಮಂಗಳೂರಿನ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರು ಅತೀ ವಂದನೀಯ ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ ಇವರು 2024, ನವೆಂಬರ್ 18ರಂದು ಮಂಗಳೂರು ಧರ್ಮಪ್ರಾಂತ್ಯದ ಅಧಿಕೃತ ಪುಣ್ಯಕ್ಷೇತ್ರ ಎಂದು ಘೋಷಿಸುವರು ಹಾಗೂ ಸಂತ ಲಾರೆನ್ಸರಿಗೆ ಸಮರ್ಪಿಸುವರು. ಈ ಉದ್ಘಾಟನೆಯು ನವೆಂಬರ್ 18ರ ಪವಿತ್ರ ಬಲಿಪೂಜೆಯೊಂದಿಗೆ ಆರಂಭವಾಗುವುದು. ಸಾಯಂಕಾಲ 5.30 ಗಂಟೆಗೆ ಸಭಾ ಕಾರ್ಯಕ್ರಮ ಜರುಗಲಿರುವುದು. ಈ ಸಂದರ್ಭದಲ್ಲಿ ರಾಜ್ಯದ ಮುಖಂಡರು ಮತ್ತು ಸಮಾಜದ ಗಣ್ಯರು ಉಪಸ್ಥಿತಲಿರುವರು.
ಹೀಗೆ ನವೆಂಬರ್ 18 ರಂದು ಸಂತ ಲಾರೆನ್ಸರ ಚರ್ಚ್‍ನ ಶತಮಾನೋತ್ಸವ ಸಮಾರೋಪ, ನವೀಕೃತ ಚರ್ಚ್‍ನ ಉದ್ಘಾಟನೆ, ಆಶೀರ್ವಚನ ಹಾಗೂ ಸಂತ ಲಾರೆನ್ಸರ ಅಧಿಕೃತ ಪುಣ್ಯಕ್ಷೇತ್ರ ಉದ್ಘಾಟನೆ ಹಾಗೂ ಆಶೀರ್ವಚನ ಬಳಿಕ ಬಲಿಪೂಜೆ ಈ ತ್ರಿವಳಿ ಸಂಭ್ರಮಗಳು ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಅತೀ ವಂದನೀಯ ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ, ವಿಶ್ರಾಂತ ಬಿಷಪ್ ಅತೀ ವಂದನೀಯ ಡಾ| ಅಲೋಶಿಯಸ್ ಪಾವ್ಲ್ ಡಿಸೋಜಾ ಹಾಗೂ ಉಡುಪಿ ಧರ್ಮಪ್ರಾಂತ್ಯದ ಬಿಷಪ್ ಅತೀ ವಂದನೀಯ ಜೆರಾಲ್ಡ್ ಐಸಾಕ್ ಲೋಬೊ ಇವರ ಮುಂದಾಳತ್ವದಲ್ಲಿ ನೆರವೇರಲಿದೆ.
ಸರ್ವರಿಗೂ ಆದರದ ಸ್ವಾಗತವನ್ನು ಬಯಸುತ್ತೇವೆ.
ಪತ್ರಿಕಾಗೋಷ್ಠಿಯಲ್ಲಿ ಹಾಜರಿರುವವರು: ವಂ| ಆ್ಯಂಡ್ರ್ಯೂ ಲಿಯೋ ಡಿ’ಸೋಜಾ, ಪ್ರಧಾನ ಧರ್ಮಗುರುಗಳು, ವಂ| ವಿಲಿಯಂ ಡಿ’ಸೋಜಾ, ಸಹಾಯಕ ಧರ್ಮಗುರುಗಳು, ವಂ| ಪೀಟರ್ ಗೊನ್ಸಾಲ್ವಿಸ್, ಪ್ರಾಂಶುಪಾಲರು, ಸಂತ ಲಾರೆನ್ಸ್ ಶಾಲೆ, ಶ್ರೀ ಜೊನ್ ಡಿ’ಸಿಲ್ವಾ, ಉಪಾಧ್ಯಕ್ಷರು, ಶ್ರೀ ಪ್ರಕಾಶ್ ಪಿಂಟೊ, ಸಂಯೋಜಕರು, ಪುಣ್ಯಕ್ಷೇತ್ರ ಸಮಿತಿ, ಶ್ರೀಮತಿ ಮೇರಿ ಮಿರಾಂದಾ, ಸಂಪಾದಕರು, ಶತಮಾನೋತ್ಸವ ಸ್ಮರಣ ಸಂಚಿಕೆ
ಶ್ರೀಮತಿ ಪ್ರೀತಿ ಡಿ’ಸೋಜಾ, ಸಂಯೋಜಕರು, ಶತಮಾನೋತ್ಸವ ಸ್ಮರಣಾರ್ಥ ಕಾರ್ಯಕ್ರಮ.
Discover more from Coastal Times Kannada
Subscribe to get the latest posts sent to your email.
Discussion about this post