ಉಳ್ಳಾಲ, ಡಿ.13 : ತೆಂಗಿನ ಕಾಯಿ ಕೀಳಲೆಂದು ಬಂದ ಪರಿಚಯಸ್ಥ ವ್ಯಕ್ತಿಯೊಬ್ಬ ಮನೆಯಲ್ಲಿ ಒಬ್ಬಂಟಿಯಿದ್ದ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ್ದು ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಳ್ಳಾಲ ತಾಲೂಕಿನ ಮಂಜನಾಡಿ ಗ್ರಾಮದ ಬಶೀರ್(29)ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿ. ವೃತ್ತಿಯಲ್ಲಿ ಪ್ಲಂಬರ್ ಆಗಿರುವ ಬಶೀರ್ ಸೋಮವಾರ ಸಂಜೆ ದೇರಳಕಟ್ಟೆಯ ಸಂಬಂಧಿಕರ ಮನೆಗೆ ತೆರಳಿದ್ದು ಈ ವೇಳೆ ಪಕ್ಕದ ಪರಿಚಯಸ್ಥರ ಮನೆಗೆ ಕಾಯಿ ಕೀಳಲೆಂದು ತೆರಳಿದ್ದಾನೆ. ಮನೆಯಲ್ಲಿ ಒಬ್ಬಂಟಿಯಿದ್ದ ಬಾಲಕಿಯನ್ನ ಕೈ ಹಿಡಿದು ಎಳೆದಿದ್ದು ಬಾಲಕಿ ಕಿರುಚಾಡಿದ್ದಾಳೆ. ಬಾಲಕಿಯ ಕೂಗನ್ನ ಕೇಳಿಸಿದ ನೆರೆಹೊರೆಯವರು ಓಡಿ ಬಂದಿದ್ದು ಅದಾಗಲೇ ಆರೋಪಿ ಸ್ಥಳದಿಂದ ಓಡಿ ಪರಾರಿಯಾಗಿದ್ದ.
ಸಂತ್ರಸ್ತ ಬಾಲಕಿಯ ಕುಟುಂಬವು ಆರೋಪಿ ಬಶೀರ್ ಕುಟುಂಬಕ್ಕೆ ಆಪ್ತರಾಗಿದ್ದು ಕೆಲ ತಿಂಗಳ ಹಿಂದಷ್ಟೆ ನಡೆದಿದ್ದ ಬಶೀರನ ಸೋದರಿಯ ಮದುವೆ ಸಮಾರಂಭದಲ್ಲಿಯೂ ಭಾಗವಹಿಸಿದ್ದರು. ಬಾಲಕಿಯ ಕುಟುಂಬ ಆರೋಪಿಯ ವಿರುದ್ಧ ದೂರು ನೀಡಲು ಹಿಂಜರಿದಿದ್ದು ನೆರೆಹೊರೆಯವರ ಒತ್ತಾಯದ ಮೇರೆಗೆ ಸಂತ್ರಸ್ತ ಬಾಲಕಿಯ ಅಜ್ಜ ಕೊಣಾಜೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮನೆಮಂದಿ ಮರ್ಯಾದೆಗೆ ಹೆದರಿ ಪ್ರಕರಣ ದಾಖಲಿಸಲು ಹಿಂಜರಿದಿದ್ದು, ವಿಚಾರ ತಿಳಿದ ಹಿಂದೂ ಸಂಘಟನೆ ಕಾರ್ಯಕರ್ತರು ತಿಳುವಳಿಕೆ ನೀಡಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ವಿಚಾರಣೆ ನಡೆಸಿ ಆರೋಪಿ ಬಶೀರನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.







Discussion about this post