ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಏಳು ಮಂದಿ ಆರೋಪಿಗಳಿಗೆ ಹೈಕೋರ್ಟ್ ಜಾಮೀನು ನೀಡಿದೆ. ದರ್ಶನ್ ಸೇರಿ ಮತ್ತಿತರ ಆರೋಪಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿ ಆದೇಶ ಕಾಯ್ದಿರಿಸಿದ್ದ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ, ಇಂದು ಆದೇಶ ಪ್ರಕಟಿಸಿದರು. ಪರಪ್ಪನ ಅಗ್ರಹಾರ ಹಾಗು ವಿವಿಧ ಜೈಲುಗಳಲ್ಲಿರುವ ಆರೋಪಿಗಳಾದ ಪವಿತ್ರಾ ಗೌಡ, ಆರ್.ನಾಗರಾಜು, ಎಂ.ಲಕ್ಷ್ಮಣ್, ಅನು ಕುಮಾರ್ ಅಲಿಯಾಸ್ ಅನು, ಜಗದೀಶ್ ಅಲಿಯಾಸ್ ಜಗ್ಗ, ಪ್ರದೋಷ್ ರಾವ್ ಶೀಘ್ರದಲ್ಲೇ ಬಿಡುಗಡೆಯಾಗಲಿದ್ದಾರೆ.
ವಿಚಾರಣೆ ವೇಳೆ ದರ್ಶನ್ ಪರವಾಗಿ ವಾದಿಸಿದ್ದ ಹಿರಿಯ ವಕೀಲ ಸಿ.ವಿ.ನಾಗೇಶ್, ಚಿತ್ರದುರ್ಗದ ರೇಣುಕಾಸ್ವಾಮಿ ನಟ ದರ್ಶನ್ ಗೆಳತಿ ಪವಿತ್ರಾ ಗೌಡರನ್ನು ಮಂಚಕ್ಕೆ ಕರೆದಿದ್ದಾರೆ. ಸಮಾಜದಲ್ಲಿ ಮಹಿಳೆಯರನ್ನು ಗೌರವಿಸದ, ಸರಿಯಾದ ನಡತೆ ಹೊಂದಿರದ, ಕಾನೂನಿಗೆ ಎಳ್ಳಷ್ಟೂ ಗೌರವ ನೀಡದ ವ್ಯಕ್ತಿಯನ್ನು ಈ ಪ್ರಕರಣದಲ್ಲಿ ರಾಷ್ಟ್ರೀಯ ನಾಯಕ ಎಂದು ಬಿಂಬಿಸಲಾಗುತ್ತಿದೆ. ಬಣ್ಣದ ಬದುಕಿನಲ್ಲಿ ನಾಯಕನಾಗಿದ್ದರೂ ದರ್ಶನ್‌ರನ್ನು ವಿಲನ್ ರೀತಿ ಕಾಣಲಾಗುತ್ತಿದೆ. ದರ್ಶನ್ ಅವರಿಗೆ ರೇಣುಕಾಸ್ವಾಮಿ ಕೊಲೆ ಮಾಡುವ ಉದ್ದೇಶವಿದ್ದರೆ ನೀರು, ಊಟ ಕೊಡಿ ಎಂದು, ಆತನ ಚಿತ್ರ ವಿಡಿಯೋ ಸೆರೆ ಹಿಡಿದು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಬಿಡಿ ಎಂದು ಏಕೆ ಹೇಳಿದ್ದರು? ಎಂದು ವಿವರಿಸಿದ್ದರು.
ರೇಣುಕಾಸ್ವಾಮಿಯ ವೃಷಣಕ್ಕೆ ತೀವ್ರವಾಗಿ ಏಟು ಬಿದ್ದಿದ್ದರಿಂದ ರಕ್ತ ಸೋರಿಕೆಯಾಗಿದೆ ಎನ್ನಲಾಗಿದೆ. ರೇಣುಕಾಸ್ವಾಮಿಯ ದೇಹದಲ್ಲಿ ಪತ್ತೆಯಾಗಿರುವುದು 2.5 ಸೆಂಟಿ ಮೀಟರ್ ಗಾಯ ಮಾತ್ರ. ಉಳಿದವು ತರಚಿದ ಮಾದರಿಯ ಗಾಯಗಳು. ಇದನ್ನು ವೈದ್ಯರು ತಮ್ಮ ಮರಣೋತ್ತರ ವರದಿಯಲ್ಲಿ ಉಲ್ಲೇಖಿಸಬೇಕಿತ್ತು. 10-15 ತರಚಿದ ಗಾಯಗಳಿಂದ ರಕ್ತ ಬಂದಿದೆ ಎಂದು ಹೇಳಬೇಕಿತ್ತು. ಆದರೆ, ತನಿಖಾಧಿಕಾರಿ ಪ್ರಶ್ನೆ ಎತ್ತಿದ ಮೇಲೆ ಆಗಸ್ಟ್ 23ರಂದು ರಕ್ತ ಸೋರಿಕೆಯಾಗಿದೆ ಎಂದು ವರದಿ ನೀಡಿದ್ದಾರೆ. ಇದಕ್ಕೆ ಆಧಾರವೇನು? ಇಲ್ಲಿ ಸಕಾರಣವಿರಬೇಕಿತ್ತು. ಜೂನ್ 8ರಂದು ರೇಣುಕಾಸ್ವಾಮಿ ಸಾವನ್ನಪ್ಪುವುದಕ್ಕೂ ಮುನ್ನ ಎರಡು ತಾಸು ಮುಂಚಿತವಾಗಿ ಊಟ ಸೇವಿಸಿದ್ದಾರೆ ಎಂದು ಮರಣೋತ್ತರ ಪರೀಕ್ಷೆ ನಡೆಸಿರುವ ವೈದ್ಯರು ಹೇಳಿದ್ದಾರೆ. ಆದರೆ, ರೇಣುಕಾಸ್ವಾಮಿಗೆ ಊಟ ತಂದರು ಎಂದು ಆರೋಪ ಪಟ್ಟಿಯಲ್ಲಿ ಹೇಳಲಾಗಿದೆಯೇ ವಿನಾ ಆತ ಅದನ್ನು ಸೇವಿಸಿದ್ದಾನೆ ಎಂಬುದಕ್ಕೆ ಯಾವುದೇ ಸಾಕ್ಷಿ ಇಲ್ಲ. ಆದರೆ, ರೇಣುಕಾಸ್ವಾಮಿ ಕೊನೆಯ ಬಾರಿಗೆ ಊಟ ಮಾಡಿರುವುದು ಜೂನ್ 8ರ ಮಧ್ಯಾಹ್ನ 12ರ ಸುಮಾರಿಗೆ ಬೆಂಗಳೂರು-ತುಮಕೂರು ಹೆದ್ದಾರಿಯಲ್ಲಿನ ದುರ್ಗಾ ರೆಸ್ಟೋರೆಂಟ್‌ನಲ್ಲಿ ಎಂಬುದಕ್ಕೆ ಸಾಕ್ಷಿ ಇದೆ. ಇದಕ್ಕೆ ರೇಣುಕಾಸ್ವಾಮಿಯೇ ಹಣ ಪಾವತಿಸಿದ್ದಾರೆ ಎಂದು ವಾದಿಸಿದ್ದರು.
ವಿಶೇಷ ಸರ್ಕಾರಿ ಅಭಿಯೋಜಕರಾದ ಪಿ.ಪ್ರಸನ್ನಕುಮಾರ್, ಪ್ರಕರಣದ ಎಲ್ಲಾ ಆರೋಪಿಗಳ ಡಿಜಿಟಲ್ ಹೆಜ್ಜೆ ಗುರುತುಗಳು ಘಟನೆಯಲ್ಲಿ ಅವರ ಪಾತ್ರವನ್ನು ನಿರೂಪಿಸುತ್ತದೆ. ಆರೋಪಿಗಳೆಲ್ಲರೂ ಒಂದಲ್ಲಾ ಒಂದು ರೀತಿಯಲ್ಲಿ ದರ್ಶನ್ ಜೊತೆ ಕೆಲಸ ಮಾಡುತ್ತಿದ್ದವರೇ. ಇಡೀ ಪ್ರಕರಣ ಪಿತೂರಿಯ ಭಾಗವಾಗಿ ನಡೆದಿದೆ. ರೇಣುಕಾಸ್ವಾಮಿ ದೇಹದಲ್ಲಿ 17 ಮೂಳೆ ಮುರಿತ ಮತ್ತು 39 ಗಾಯಗಳು ಪತ್ತೆಯಾಗಿವೆ. ದರ್ಶನ್ ಹಲ್ಲೆಯಿಂದ ರೇಣುಕಾಸ್ವಾಮಿ ವೃಷಣಕ್ಕೆ ತೀವ್ರ ಹಾನಿಯಾಗಿದೆ ಎಂದು ವಾದಿಸಿದ್ದರು.
ಪವಿತ್ರಾ ಗೌಡ ಪರವಾಗಿ ಹಿರಿಯ ವಕೀಲ ಟಾಮಿ ಸೆಬಾಸ್ಟಿಯನ್, ದರ್ಶನ್ ಕಾರು ಚಾಲಕ ಎಂ.ಲಕ್ಷ್ಮಣ್ ಪರವಾಗಿ ಹಿರಿಯ ವಕೀಲ ಅರುಣ್ ಶ್ಯಾಮ್, ಪ್ರದೋಷ್ ಪರವಾಗಿ ವಕೀಲ ಕೆ.ದಿವಾಕರ್, 11ನೇ ಆರೋಪಿಯಾಗಿರುವ ದರ್ಶನ್ ವ್ಯವಸ್ಥಾಪಕ ಆರ್.ನಾಗರಾಜು ಪರವಾಗಿ ಹಿರಿಯ ವಕೀಲ ಸಂದೇಶ್ ಚೌಟ ವಾದ ಮಂಡಿಸಿದ್ದರು.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಸೇರಿ 17 ಮಂದಿ ಆರೋಪಿಗಳಿದ್ದಾರೆ. ಈ ಪೈಕಿ ಐವರಿಗೆ ಜಾಮೀನು ಮಂಜೂರಾಗಿದೆ. ಈಗ ಏಳು ಮಂದಿಗೆ ಜಾಮೀನು ಮಂಜೂರಾಗಿದೆ. ಇನ್ನು ಪುಟ್ಟಸ್ವಾಮಿ ಅಲಿಯಾಸ್ ಪವನ್, ರಾಘವೇಂದ್ರ, ನಂದೀಶ್, ಧನರಾಜ್ ಡಿ ಅಲಿಯಾಸ್ ರಾಜು, ವಿ.ವಿನಯ್‌ಗೆ ಜಾಮೀನು ಮಂಜೂರಾಗಿಲ್ಲ.
Discover more from Coastal Times Kannada
Subscribe to get the latest posts sent to your email.
Discussion about this post