ಉಳ್ಳಾಲ, ಜ.13: ಕರಾವಳಿಯ ಆರಾಧ್ಯ ಕೊರಗಜ್ಜ ದೈವದ ಕಥೆಯಾಧರಿತ ತ್ರಿವಿಕ್ರಮ ಸಪಲ್ಯ ನಿರ್ಮಾಣದ ಬಹು ಬಜೆಟ್ ಚಿತ್ರ “ಕೊರಗಜ್ಜ” ಸಿನೆಮಾ ಚಿತ್ರೀಕರಣ ಪೂರ್ತಿಗೊಳಿಸಿದೆ. ಚಿತ್ರ ತಂಡವು ಶುಕ್ರವಾರ ಕಲ್ಲಾಪುವಿನ ಬುರ್ದುಗೋಳಿ ಶ್ರೀ ಗುಳಿಗ ಕೊರಗಜ್ಜ ಉದ್ಭವ ಶಿಲೆ ಆದಿಸ್ಥಳ ಕ್ಷೇತ್ರಕ್ಕೆ ಭೇಟಿ ನೀಡಿ ಹರಕೆ ಕೋಲವನ್ನ ಸಮರ್ಪಿಸಿದ್ದು ಸ್ಯಾಂಡಲ್ ವುಡ್ ಹಿರಿಯ ನಟಿಯರಾದ ಶೃತಿ ಮತ್ತು ಭವ್ಯ ಗುಳಿಗ, ಕೊರಗಜ್ಜನ ಕೋಲ ವೀಕ್ಷಿಸಿದರು.
ನಟಿ ಭವ್ಯ ಮಾತನಾಡಿ, ಕೊರಗಜ್ಜ ಸಿನಿಮಾದಲ್ಲಿ ಪಂಜಂದಾಯ ಪಾತ್ರ ನಿರ್ವಹಿಸಿದ್ದೇನೆ, ಈ ಸಿನಿಮಾ ಯಶಸ್ವಿಯಾಗಿ ಮೂಡಿಬರಲಿದೆ ಎಂದರು.
ನಟಿ ಶೃತಿ ಮಾತನಾಡಿ ಹಣ ಇದ್ದವರೆಲ್ಲ ಸಿನೆಮಾ ಮಾಡಲು ಸಾಧ್ಯವಿಲ್ಲ. ದೇವರ ಅನುಗ್ರಹದಿಂದಷ್ಟೇ ಕೊರಗಜ್ಜ ಸಿನಿಮಾ ಮಾಡಿರುವುದು ನನ್ನ ಅನುಭವದಲ್ಲಿ ಕಂಡುಬಂದ ಸತ್ಯ. ಚಿತ್ರದ ಶೂಟಿಂಗ್ ಉದ್ದಕ್ಕೂ ಒಳ್ಳೆ ವಿಚಾರಗಳೇ ತುಂಬಿರುವುದು ದೈವದ ಅನುಗ್ರಹ. 2023ರಲ್ಲಿ ತುಂಬಾ ನಿರೀಕ್ಷೆಯಲ್ಲಿರುವ ಸಿನೆಮಾಗಳಲ್ಲಿ ಕೊರಗಜ್ಜನ ಚಿತ್ರವೂ ಸೇರಿದೆ ಎಂದರು.
ನಿರ್ದೇಶಕ ಸುಧಿರ್ ರಾಜ್ ಅತ್ತಾವರ ಮಾತನಾಡಿ, ನಂಬಿಕೆಗಳಿಗೆ ಧಕ್ಕೆಯಾಗುವಂಥ ವೇಷಭೂಷಣ ಮಾಡುವುದು ತಪ್ಪು. ಸಿನಿಮಾ ಚಿತ್ರೀಕರಣದ ಸಮದರ್ಭ ತೊಂದರೆಗಳಾಗದಂತೆ ಗುಳಿಗ, ಕಲ್ಲುರ್ಟಿಗೆ ಗುಡಿ ಕಟ್ಟಿಯೇ ಮುಂದುವರಿದಿದ್ದೇವೆ. ಮಾರ್ಚ್ ಕೊನೆಯ ವಾರದಲ್ಲಿ ಸಿನಿಮಾ ತೆರೆಕಾಣಲಿದೆ. ಪ್ಯಾನ್ ಇಂಡಿಯಾ ರೀತಿಯಲ್ಲಿ ಸಿನಿಮಾ ತಯಾರಾಗುತ್ತಿದ್ದು, ಹಿಂದಿ, ತೆಲುಗು, ತಮಿಳು, ಮಲಯಾಳಂ, ಕನ್ನಡ ಹಾಗೂ ತುಳು ಭಾಷೆಯಲ್ಲೂ ತೆರೆಕಾಣಲಿದೆ ಎಂದರು.
ಬಿಪಿನ್ ದೇವ್ ಸೌಂಡ್ ಡಿಸೈನ್ ಮಾಡುತ್ತಿದ್ದು, ಗೀತ್ ಜೋಷಿ ಎಡಿಟಿಂಗ್ ತಂಡದ ನೇತೃತ್ವ ವಹಿಸಿದ್ದಾರೆ. ಒ.ಬಿ.ಸುಂದರ್ ಸಂಗೀತ ನಿರ್ದೇಶನ ಹಾಗೂ ಹಿನ್ನೆಲೆ ಸಂಗೀತ ನೀಡುತ್ತಿದ್ದಾರೆ. ನಿರ್ಮಾಪಕ ತ್ರಿವಿಕ್ರಮ್ ಸಪಲ್ಯ ಅವರಿಂದಾಗಿ ಐದು ಕ್ಯಾಮೆರಾ ಬಳಸಿ ಶೂಟಿಂಗ್ ನಡೆಸಲು ಸಾಧ್ಯವಾಗಿದೆ. ಭರತ್ ಕೊರಗತನಿಯ ಪಾತ್ರ ನಿರ್ವಹಿಸುತ್ತಿದ್ದು, ಕೃತಿಕಾ ಅವರು ಕೊರಗಜ್ಜನ ತಾಯಿ ಕೊರಪೊಳು ಪಾತ್ರ ಮಾಡುತ್ತಿದ್ದಾರೆ.
ನಿರ್ಮಾಪಕ ತ್ರಿವಿಕ್ರಮ ಸಪಲ್ಯ, ಸಹ ನಿರ್ಮಾಪಕ ವಿದ್ಯಾಧರ್ ಶೆಟ್ಟಿ, ನಟಿ ಭವ್ಯ, ಪುತ್ರಿ ಅದಿತಿ, ನಟಿ ಶ್ರುತಿ ಪುತ್ರಿ ಗೌರಿ, ನಾಯಕ ನಟ ಭರತ್ ಸೂರ್ಯ, ನಾಯಕ ನಟಿ ರಿತಿಕ, ಬಾಲ ನಟರಾದ ಸುಧಾ, ನವನೀತ, ಶ್ರೀಹರಿ, ಬುರ್ದುಗೋಳಿ ಕ್ಷೇತ್ರದ ಅಧ್ಯಕ್ಷ ವಿಶ್ವನಾಥ್ ನಾಯಕ್, ಉಪಾಧ್ಯಕ್ಷ ದೇವದಾಸ್ ಗಟ್ಟಿ ಕಾಯಂಗಳ, ಬಿಜೆಪಿ ಕ್ಷೇತ್ರ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್, ವಕೀಲ ಗಂಗಾಧರ್ ಉಳ್ಳಾಲ್, ಪುರುಷೋತ್ತಮ್ ಕಲ್ಲಾಪು ಭಾಗವಹಿಸಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post