ಮಂಗಳೂರು ; ಸಾರ್ವಜನಿಕರು ಕಟ್ಟಡ ನಿರ್ಮಾಣಕ್ಕೆ ಸಮಗ್ರ ದಾಖಲೆಯೊಂದಿಗೆ ಅರ್ಜಿ ಸಲ್ಲಿಸಿದ 30 ದಿನದೊಳಗೆ ಪರವಾನಗಿ, 8 ದಿನದೊಳಗೆ ಪ್ರವೇಶ ಪತ್ರ, 7 ದಿನದೊಳಗೆ ಸ್ಥಳ ಪರಿಶೀಲನೆ ನಡೆಸಬೇಕು ಎಂಬ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎಂದು ಜಿಲ್ಲಾಧಿಕಾರಿ ರವಿಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿ ಆದೇಶ ಹೊರಡಿಸಿರುವುದು ಸ್ವಾಗತಾರ್ಹವಾಗಿದ್ದು, ಈ ಆದೇಶವು ರಿಯಲ್ ಎಸ್ಟೇಟ್ ಉದ್ಯಮಕ್ಕೆ ಹಾಗೂ ಸಾರ್ವಜನಿಕರಿಗೆ ಸಹಕಾರಿಯಾಗಲಿದೆ ಎಂದು ಕ್ರೆಡಾಯ್ ಮಂಗಳೂರು ಅಧ್ಯಕ್ಷ ಪುಷ್ಪರಾಜ್ ಜೈನ್ ಹೇಳಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಟ್ಟಡ ಪರವಾನಿಗೆಯನ್ನು ನೀಡುವ ಬಗ್ಗೆ ಏಕಗವಾಕ್ಷಿ ಯೋಜನೆ ಸೇರಿದಂತೆ ಸಮಸ್ಯೆಗಳ ಕುರಿತು ಮಂಗಳೂರು ಮಹಾನಗರ ಪಾಲಿಕೆ, ಮೂಡಾ, ಅಗ್ನಿ ಮತ್ತು ತುರ್ತು ಸೇವೆಗಳ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ, ಸಿಆರ್ಝೆಡ್, ಪುರಾತತ್ವ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಕ್ರೆಡಾಯ್, ಸಿವಿಲ್ ಎಂಜಿನಿರ್ಸ್ ಅಸೋಸಿಯೇಷನ್, ಕೆನರಾ ಬಿಲ್ರ್ಸ್ ಅಸೋಸಿಯೇಷನ್ ಪ್ರತಿನಿಧಿಗಳ ಜೊತೆ ಜಿಲ್ಲಾಧಿಕಾರಿ ಅವರು ಸಭೆ ನಡೆಸಿ ಈ ಆದೇಶ ಹೊರಡಿಸಿದ್ದಾರೆ.
ಕಟ್ಟಡ ಪರವಾನಗಿ ಪಡೆಯಲು ವಿವಿಧ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ, ಸ್ಥಳ ಪರಿಶೀಲನೆ ಮುಂತಾದ ಕೆಲಸಗಳ ವಿಳಂಭದಿAದಾಗಿ ಇಡೀ ಪ್ರಕ್ರೀಯೆಯು ವಿಳಂಭವಾಗುತ್ತಿದೆ. ಈ ಬಗ್ಗೆ ರಾಜ್ಯ ಸರಕಾರಕ್ಕೆ, ಜಿಲ್ಲಾಡಳಿತಕ್ಕೆö, ಸ್ಥಳೀಯ ಜನಪ್ರತಿನಿಧಿಗಳಿಗೆ ಹಲವು ಭಾರಿ ಕ್ರೆಡಾಯ್ ಸಂಘಟನೆ ಮನವಿಯನ್ನು ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅವರು ಸಭೆ ಕರೆದು ಈ ಮಹತ್ವದ ಆದೇಶ ಹೊರಡಿಸಿದ್ದಾರೆ. ಇದಕ್ಕಾಗಿ ರಾಜ್ಯ ಸರಕಾರ, ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳಿಗೆ ಕ್ರೆಡಾಯ್ ಅಭಿನಂದನೆ ಸಲ್ಲಿಸುತ್ತದೆ ಮತ್ತು ಅಭಾರಿಯಾಗಿದೆ ಎಂದು ಪುಷ್ಪರಾಜ್ ಜೈನ್ ಹೇಳಿದರು.
ನಿಗಧಿತ ಅವಧಿಯೊಳಗೆ ಅರ್ಜಿಯನ್ನು ವಿಲೇವಾರಿ ಮಾಡಲೇಬೇಕು ಎಂಬ ಕಟ್ಟುನಿಟ್ಟಿನ ಆದೇಶದಿಂದ ರಿಯಲ್ ಎಸ್ಟೇಟ್ ಉದ್ಯಮ ಮತ್ತು ಸಾರ್ವಜನಿಕರಿಗೆ ಹೆಚ್ಚಿನ ಪ್ರಯೋಜನವಾಗಲಿದೆ. ಕಟ್ಟಡ ಪರವಾನಗಿ ಪಡೆಯಲು ಕಚೇರಿಯಂದ ಕಚೇರಿಗೆ ಅಲೆದಾಡುವ ಪರಿಸ್ಥಿತಿ ತಪ್ಪಲಿದೆ.
ಡೀಮ್ಡ್ ಎನ್ಒಸಿ: ಕಟ್ಟಡ ನಿರ್ಮಾಣ ಪೂರ್ವದಲ್ಲಿ ಹಲವು ಇಲಾಖೆಯಿಂದ ನಿರಾಕ್ಷೇಪಣಾ ಪತ್ರ ಪಡೆಯಬೇಕು. ನಿಗಧಿತ ಸಮಯದೊಳಗೆ ನಿರಾಕ್ಷೇಪಣಾ ಪತ್ರ ಸಿಗದೆ ಯೋಜನೆ ವಿಳಂಭವಾಗಿ, ಆರ್ಥಿಕ ಮುಗ್ಗಟ್ಟನ್ನು ಎದುರಿಸಬೇಕಾಗುತ್ತದೆ. ಈ ಬಗ್ಗೆ ಹಲವು ದೂರುಗಳನ್ನೂ ನೀಡಲಾಗಿತ್ತು. ಆದರೆ ಜಿಲ್ಲಾಧಿಕಾರಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕಟ್ಟಡ ನಿರ್ಮಾಣಕ್ಕೆ ನಿಗದಿತ ಅವಧಿಯಲ್ಲಿ ಸಂಬಧಪಟ್ಟ ಇಲಾಖೆಯು ಒಂದು ವೇಳೆ ನಿರಾಕ್ಷೇಪಣಾ ಪತ್ರ ನೀಡದಿದ್ದಲ್ಲಿ, ಡೀಮ್ಡ್ ಎನ್ಒಸಿ (ನಿರಾಕ್ಷೇಪಣಾ ಪತ್ರ ನೀಡಲಾಗಿದೆ) ಎಂದು ಪರಿಗಣಿಸಿ, ಅದರ ಆಧಾರದಲ್ಲಿ ಕಟ್ಟಡ ನಿರ್ಮಿಸಲು ಸ್ಥಳೀಯ ಸಂಸ್ಥೆಗಳು ಪರವಾನಿಗೆ ನೀಡುವಂತೆ ಜಿಲ್ಲಾಧಿಕಾರಿ ಸೂಚಿಸಿದರು. ಜಿಲ್ಲಾಡಳಿತದ ಇಂತಹ ತೀರ್ಮಾನದಿಂದ ಅನುಮತಿಗಾಗಿ ಕಚೇರಿಯಿಂದ ಕಚೇರಿಗೆ ಅಲೆದಾಡುವ ಸಮಸ್ಯೆ ನಿವಾರಣೆಯಾಗಲಿದೆ ಎಂದು ಪುಷ್ಪರಾಜ್ ಜೈನ್ ತಿಳಿಸಿದರು.
ಎಲ್ಲಾ ಸರಕಾರಿ ಕಚೇರಿಗಳು, ಇಲಾಖೆಗಳು ಸಾರ್ವಜನಿಕರಿಗೆ ತಮ್ಮ ಇಲಾಖೆ/ಕಛೇರಿಯಿಂದ ನೀಡಲಾಗಿರುವ ಸೇವೆಗಳನ್ನು ನಿಗದಿತ ಕಾಲಮಿತಿಯಲ್ಲಿ ನೀಡಬೇಕು ಎಂಬ ಆದೇಶವನ್ನು ಸಭೆಯಲ್ಲಿ ಜಿಲ್ಲಾಧಿಕಾರಿ ಹೊರಡಿಸಿದ್ದಾರೆ.
ಏಕಗವಾಕ್ಷಿಗೆ ಮೊದಲ ಹೆಜ್ಜೆ: ಕಟ್ಟಡ ನಿರ್ಮಾಣಕ್ಕೆ ಪರವಾನಗಿಗೆ ಮಹಾನಗರಪಾಲಿಕೆಗೆ ಅರ್ಜಿ ಸಲ್ಲಿಸುವ ಮುನ್ನ ಅಗ್ನಿಶಾಮಕ ಇಲಾಖೆ, ಸಿಆರ್ಝೆಡ್ ಮತ್ತು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸಾರ್ವಜನಿಕರು ಅರ್ಜಿ ಸಲ್ಲಿಸಿ ನಿರಾಕ್ಷೇಪಣಾ ಪತ್ರ ಪಡೆದುಕೊಳ್ಳಬೇಕಿತ್ತು. ಇದರಿಂದಾಗಿ ಯೋಜನೆ ವಿಳಂಭವಾಗುತ್ತಿತ್ತು. ಇಂತಹ ವಿಳಂಭಗಳನ್ನು ತಪ್ಪಿಸುವ ಉದ್ದೇಶದಿಂದ ಕಟ್ಟಡ ಪರವಾನಿಗೆ ಅರ್ಜಿಯನ್ನು ಏಕಗವಾಕ್ಷಿ ಯೋಜನೆಯಡಿ ತರುವ ಬಗ್ಗೆ ಸಭೆಯಲ್ಲಿ ಸುಧೀರ್ಘ ಚರ್ಚೆ ನಡೆಯಿತು. ಮುಂದಿನ ದಿನಗಳಲ್ಲಿ ಏಕಗವಾಕ್ಷಿ ಯೋಜನೆಯನ್ನು ಹಂತ ಹಂತವಾಗಿ ಅಳವಡಿಸುವ ಬಗ್ಗೆ ವರದಿ ತಯಾರಿಸಲು ಸೂಚಿಸಲಾಯಿತು.
ಬಹುಮಹಡಿ ಕಟ್ಟಡಗಳ ವಿನ್ಯಾಸಕ್ಕೆ ಮೂಡಾದಿಂದ ಅನುಮೋದನೆ, ಅಗ್ನಿಶಾಮಕ ದಳ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಅರ್ಜಿ ಸ್ವೀಕರಿಸಿದ ವಾರದೊಳಗೆ ನಿರಾಪೇಕ್ಷಣಾ ಪತ್ರö ನೀಡಬೇಕು ಹೀಗೆ ಸಾರ್ವಜನಿಕರಿಗೆ ಪೂರಕವಾದ ಹತ್ತು ಹಲವು ಆದೇಶವನ್ನು ಜಿಲ್ಲಾಧಿಕಾರಿ ನೀಡಿರುತ್ತಾರೆ.
ಕಟ್ಟಡ ಮುಕ್ತಾಯಗೊಂಡ ಪ್ರವೇಶ ಪತ್ರ ನೀಡುವಾಗಲೇ ಭದ್ರತಾ ಠೇವಣಿ ಹಿಂತಿರುಗಿಸಬೇಕು. ನೀರು ಹಾಗೂ ಸೀವೇಜ್ ಬಗ್ಗೆ ಎನ್ಒಸಿಗೆ ಎರಡು ತಿಂಗಳು ವಿಳಂಬವಾಗುತ್ತಿದ್ದು ಅದನ್ನು ತಪ್ಪಿಸಬೇಕು ಎಂಬ ಬೇಡಿಕೆಯನ್ನು ಮುಂದಿಡಲಾಗಿದೆ.
ಕಟ್ಟಡ ನಿರ್ಮಾಣಕ್ಕಾಗಿ ಪರವಾನಗಿ ಕೋರಿ ಬರುವ ಅರ್ಜಿಗಳನ್ನು 15 ದಿನಗಳಿಗೊಮ್ಮೆ ಮಹಾನಗರಪಾಲಿಕೆಯ ಆಯುಕ್ತರು ಅರ್ಜಿದಾರರು, ಎಂಜಿನಿಯರ್ ಹಾಗೂ ಸಂಬAಧಪಟ್ಟ ಅಧಿಕಾರಿಗಳನ್ನು ಕರೆಸಿ ವಿಚಾರಣೆ ನಡೆಸಬೇಕು ಎಂಬ ಆದೇಶವನ್ನೂ ಜಿಲ್ಲಾಧಿಕಾರಿ ನೀಡಿರುತ್ತಾರೆ.
ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಸ್ಥಳೀಯ ಸಂಸ್ಥೆಗಳಾದ ಮಂಗಳೂರು ಮಹಾನಗರಪಾಲಿಕೆ, ನಗರಸಭೆಗಳು, ಪುರಸಭೆಗಳು, ಪಟ್ಟಣ ಪಂಚಾಯಿತಿಗಳು, ಗ್ರಾಮ ಪಂಚಾಯತಿಗಳು ಮತ್ತು ಎಲ್ಲಾ ನಗರ ಯೋಜನಾ ಪ್ರಾಧಿಕಾರಗಳು ಕಟ್ಟಡ ಪರವಾನಿಗೆ ನೀಡುವ ಪ್ರಾಧಿಕಾರವಾಗಿವೆ. ಆದುದರಿಂದ ಎಲ್ಲಾ ಸ್ಥಳೀಯ ಸಂಸ್ಥೆಗಳಿಗೂ ಸಹ ಇದೇ ರೀತಿ ಏಕಗವಾಕ್ಷಿ ಯೋಜನೆ ಮಾದರಿಯಲ್ಲಿ ಕ್ರಮ ವಹಿಸುವಂತೆ ಸೂಚಿಸಲಾಗಿದೆ.
ಇದೊಂದು ಹಲವು ವರ್ಷಗಳ ಬೇಡಿಕೆಯಾಗಿದ್ದುö, ಸಂಸದರು, ಸಚಿವರು, ಶಾಸಕರು ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳ ಸಹಕಾರದಿಂದಾಗಿ ಜಿಲ್ಲಾಧಿಕಾರಿ ಸಭೆ ನಡೆಸಿ ಈ ಮಹತ್ವದ ಆದೇಶ ಹೊರಡಿಸಿದ್ದಾರೆ. ಜಿಲ್ಲಾಧಿಕಾರಿ ರವಿಕುಮಾರ್ ಅವರ ದಿಟ್ಟ ಆದೇಶವು ಜಿಲ್ಲೆಯ ಅಭಿವೃದ್ಧಿಯಲ್ಲಿ ಹೊಸ ಶಖೆಯನ್ನು ನಿರ್ಮಾಣ ಮಾಡಲಿದೆ. ಮಾತ್ರವಲ್ಲದೆ ಈ ಆದೇಶವು ಅಭಿವೃದ್ಧಿಗೆ ಮೈಲುಗಲ್ಲಾಗಲಿದೆ ಎಂದು ಪುಷ್ಪರಾಜ್ ಜೈನ್ ತಿಳಿಸಿದ್ದಾರೆ.
ಕಾರ್ಯದರ್ಶಿ ಪ್ರಶಾಂತ್ ಸನಿಲ್, ಕೋಶಾಧಿಕಾರಿ ಗುರುಮೂರ್ತಿ ಮತ್ತು ಸಮಿತಿಯ ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post