ನವದೆಹಲಿ, ಮಾ.14 : ಅಮೆರಿಕದಲ್ಲಿ ಗ್ಯಾರಂಟೆಕ್ಸ್ ಕ್ರಿಪ್ಟೋಕರೆನ್ಸಿ ಎಕ್ಸ್ ಚೇಂಜ್ ಕಂಪನಿಯ ಆಡಳಿತಾಧಿಕಾರಿಯಾಗಿದ್ದು, ಸಾವಿರಾರು ಗ್ರಾಹಕರ ಹೂಡಿಕೆಯ ಹಣವನ್ನು ಮೋಸ ಮಾಡಿರುವ ಆರೋಪದಲ್ಲಿ ಲಿಥ್ವೇನಿಯಾ ಪ್ರಜೆ ಅಲೆಕ್ಸ್ ಬೇಸಿಕೋವ್ ಎಂಬಾತನನ್ನು ಅಮೆರಿಕದ ಕೋರಿಕೆಯಂತೆ ಸಿಬಿಐ ಅಧಿಕಾರಿಗಳು ಮತ್ತು ಕೇರಳ ಪೊಲೀಸರು ಜಂಟಿ ಕಾರ್ಯಾಚರಣೆ ಮೂಲಕ ತಿರುವನಂತಪುರದಲ್ಲಿ ಬಂಧಿಸಿದ್ದಾರೆ.
ಆರೋಪಿ ಅಲೆಕ್ಸೆಜ್ ಬೆಸಿಯೊಕೊವ್, ರಾನ್ಸಮ್‌ವೇರ್, ಕಂಪ್ಯೂಟರ್ ಹ್ಯಾಕಿಂಗ್ ಮತ್ತು ಮಾದಕವಸ್ತು ವಹಿವಾಟುಗಳಂತಹ ಅಪರಾಧ ಚಟುವಟಿಕೆಗಳ ಆದಾಯವನ್ನು ಅಕ್ರಮವಾಗಿ ವರ್ಗಾಯಿಸಲು ‘ಗ್ಯಾರಂಟೆಕ್ಸ್’ ಎಂಬ ಕ್ರಿಪ್ಟೋಕರೆನ್ಸಿ ವಿನಿಮಯ ಕೇಂದ್ರವನ್ನು ಸ್ಥಾಪಿಸಿದ್ದ. ಬೆಸಿಯೊಕೊವ್, ದೇಶದಿಂದ ಪಲಾಯನ ಮಾಡಲು ಯೋಜಿಸುತ್ತಿದ್ದಾಗ ಬಂಧಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯುಎಸ್ ಸೀಕ್ರೆಟ್ ಸರ್ವಿಸ್ ದಾಖಲೆಗಳ ಪ್ರಕಾರ ಲಿಥ್ವೇನಿಯಾ ಪ್ರಜೆಯಾದ ಅಲೆಕ್ಸ್ ರಶ್ಯಾದಲ್ಲಿದ್ದುಕೊಂಡು ಗ್ಯಾರೆಂಟೆಕ್ಸ್ ಹೆಸರಲ್ಲಿ ಕ್ರಿಪ್ಟೋ ಕರೆನ್ಸಿ ಸ್ಥಾಪಿಸಿದ್ದು ಸಾವಿರಾರು ಜನರಿಂದ ಹೂಡಿಕೆ ಮಾಡಿಸಿದ್ದ. ರಷ್ಯಾ ಮತ್ತು ಅಮೆರಿಕನ್ನರು ಇದರ ಮಲೆ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿದ್ದರು. ಈ ನಡುವೆ, 2022ರಲ್ಲಿ ಅಮೆರಿಕದ ಸರಕಾರ ಗ್ಯಾರೆಂಟೆಕ್ಸ್ ಕ್ರಿಪ್ಟೋ ಮೇಲೆ ನಿರ್ಬಂಧ ವಿಧಿಸಿತ್ತು. ಆದರೆ ಅಲೆಕ್ಸ್ ಮತ್ತು ಇನ್ನೊಬ್ಬ ರಷ್ಯನ್ ಪ್ರಜೆ ಅಲೆಕ್ಸಾಂಡರ್ ಮೀರಾ ಸೆರ್ದಾ ಸೇರಿ 2019ರಿಂದ 2024ರ ನಡುವೆ ಗ್ಯಾರೆಂಟೆಕ್ಸ್ ಖಾತೆಯಿಂದ ಅಕ್ರಮವಾಗಿ ಬೇರೆ ಬೇರೆ ಕಂಪನಿಗಳಿಗೆ ಕ್ರಿಪ್ಟೋ ಕರೆನ್ಸಿ ವರ್ಗಾವಣೆ ಮಾಡಿದ್ದಾರೆ ಎನ್ನಲಾಗುತ್ತಿದ್ದು, ಇದರಿಂದಾಗಿ ಕಂಪನಿಗೆ 96 ಬಿಲಿಯನ್ ಡಾಲರ್ (ಅಂದಾಜು 8 ಲಕ್ಷ ಕೋಟಿ ರೂ.) ನಷ್ಟವಾಗಿದೆ ಎಂದು ಆರೋಪಿಸಲಾಗಿದೆ. ಅಲೆಕ್ಸಾಂಡರ್ ದುಬೈನಲ್ಲಿ ವಾಸವಿದ್ದು ಅಕ್ರಮ ವರ್ಗಾವಣೆ ಕೃತ್ಯ ಎಸಗಿದ್ದಾನೆ. ಇವರು ಹ್ಯಾಕಿಂಗ್ ಇನ್ನಿತರ ತಂತ್ರಜ್ಞಾನದಿಂದ ಅಕ್ರಮ ಕರೆನ್ಸಿ ವರ್ಗಾವಣೆ ಮಾಡಿಸಿದ್ದಾರೆ. ಸೈಬರ್ ಹ್ಯಾಕರ್ಸ್, ಉಗ್ರವಾದಿ ಗುಂಪುಗಳಿಗೂ ಇವರ ಕಡೆಯಿಂದ ಕರೆನ್ಸಿ ವರ್ಗಾವಣೆಯಾಗಿರುವ ಶಂಕೆ ಇದೆ.
“ಗ್ಯಾರಂಟೆಕ್ಸ್ ನೂರಾರು ಮಿಲಿಯನ್ ಕ್ರಿಮಿನಲ್ ಆದಾಯವನ್ನು ಪಡೆಯಿತು ಮತ್ತು ಹ್ಯಾಕಿಂಗ್, ರಾನ್ಸಮ್‌ವೇರ್, ಭಯೋತ್ಪಾದನೆ ಮತ್ತು ಮಾದಕವಸ್ತು ಕಳ್ಳಸಾಗಣೆ ಸೇರಿದಂತೆ ವಿವಿಧ ಅಪರಾಧಗಳನ್ನು ಸುಗಮಗೊಳಿಸಲು ಬಳಸಲಾಗುತ್ತಿತ್ತು, ಇದು ಸಾಮಾನ್ಯವಾಗಿ ಯುಎಸ್ ಸಂತ್ರಸ್ತರ ಮೇಲೆ ಗಣನೀಯ ಪರಿಣಾಮ ಬೀರುತ್ತದೆ” ಎಂದು ಅದು ಹೇಳಿದೆ.
ಬೆಸ್ಸಿಯೊಕೋವ್ ಗ್ಯಾರೆಂಟೆಕ್ಸ್‌ನ ಪ್ರಾಥಮಿಕ ತಾಂತ್ರಿಕ ನಿರ್ವಾಹಕರಾಗಿದ್ದರು ಮತ್ತು ವೇದಿಕೆಯ ನಿರ್ಣಾಯಕ ಮೂಲಸೌಕರ್ಯವನ್ನು ಪಡೆಯುವುದು ಮತ್ತು ನಿರ್ವಹಿಸುವುದು ಹಾಗೂ ವಹಿವಾಟುಗಳನ್ನು ಪರಿಶೀಲಿಸುವುದು ಮತ್ತು ಅನುಮೋದಿಸುವ ಜವಾಬ್ದಾರಿಯನ್ನು ಹೊಂದಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯುಎಸ್ ನಿಯಮ ಉಲ್ಲಂಘಿಸಿ ಹಣ ವರ್ಗಾವಣೆ ಮಾಡಲು ಪಿತೂರಿ, ಯುಎಸ್ ಅಂತರರಾಷ್ಟ್ರೀಯ ತುರ್ತು ಆರ್ಥಿಕ ಅಧಿಕಾರ ಕಾಯ್ದೆಯನ್ನು ಉಲ್ಲಂಘಿಸಲು ಪಿತೂರಿ ಮತ್ತು ಪರವಾನಗಿ ಪಡೆಯದ ಹಣ ಸೇವೆಗಳ ವ್ಯವಹಾರವನ್ನು ನಡೆಸಲು ಪಿತೂರಿ ಸೇರಿದಂತೆ ಹಲವು ಆರೋಪಗಳ ಮೇಲೆ ಬಂಧಿತ ವ್ಯಕ್ತಿ ಯುಎಸ್‌ಗೆ ಬೇಕಾಗಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post