ಮಂಗಳೂರು, ಮಾರ್ಚ್ 13: ಸುರತ್ಕಲ್ ಬಳಿಯ ಚೇಳಾಯರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಧ್ಯ ಗ್ರಾಮದಲ್ಲಿ ಕೊರಗ ನಿವಾಸಿಗಳ ಕಾಲನಿಗೆ ಬಿಲ್ ಕಟ್ಟಿಲ್ಲವೆಂದು ಕುಡಿಯುವ ನೀರಿನ ಸಂಪರ್ಕವನ್ನು ಕಡಿತಗೊಳಿಸಿ ಅಧಿಕಾರಿಗಳು ಅಮಾನವೀಯ ವರ್ತನೆ ತೋರಿದ ಘಟನೆ ನಡೆದಿದ್ದು, ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಕೊರಗ ಕಾಲನಿಯಲ್ಲಿ 26 ಮನೆಗಳಿದ್ದು 120ಕ್ಕೂ ಹೆಚ್ಚು ನಿವಾಸಿಗಳಿದ್ದಾರೆ. ಆದರೆ ಇಲ್ಲಿನ ನಿವಾಸಿಗಳಿಗೆ ಒಂದು ಕೊಳವೆ ಬಾವಿಯನ್ನು ಕೊರೆಸಿದ್ದು, ಅದರಲ್ಲಿ ಬರುವ ನೀರೂ ಕೆಂಪಾಗಿದ್ದು ಕಲುಷಿತವಾಗಿದೆ.
ಕಲುಷಿತ ನೀರಾಗಿದ್ದರೂ, ತಿಂಗಳಿಗೆ ಪ್ರತಿ ಮನೆಯಿಂದ ನೂರು ರೂಪಾಯಿ ಬಿಲ್ ನೀಡಬೇಕೆಂದು ಪಂಚಾಯತ್ ಅಧಿಕಾರಿಗಳು ವಸೂಲಿ ಮಾಡುತ್ತಿದ್ದರು. ನೀರು ಸರಿ ಇಲ್ಲ, ಉತ್ತಮ ನೀರನ್ನು ಕೊಡಿ ಎಂದು ಸ್ಥಳೀಯರು ಕೇಳಿದರೂ, ದಪ್ಪ ಚರ್ಮದ ಅಧಿಕಾರಿಗಳು ಕೊರಗ ಸಮುದಾಯದ ನಿವಾಸಿಗಳಿಗೆ ತಾರತಮ್ಯ ಎಸಗಿದ್ದಾರೆ. ಕೆಲವು ಮನೆಗಳವರು ನೀರಿನ ಬಿಲ್ ಕೊಡದೆ ಪ್ರತಿಭಟನೆ ತೋರಿದ್ದರು.

ಈ ವೇಳೆ ಕೊರಗ ಕಾಲನಿಯ ಸಂತ್ರಸ್ತರು ಚೇಳಾಯರು ಗ್ರಾಮ ಪಂಚಾಯತ್‌ನ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನೀರಿನ ಸಂಪರ್ಕಕ್ಕೆ ಅಳವಡಿಸಿದ್ದ ವಿದ್ಯುತ್ ಕಡಿತಗೊಳಿಸಿರುವ ಬಗ್ಗೆ ಮಾಹಿತಿ ಕೇಳಿದ ತಾ.ಪಂ. ಇಒ ಅವರು, ಕಡಿತಗೊಳಿಸಿದ್ದ ಮನೆಗೆಳ ನೀರಿನ ಸಂಪರ್ಕವನ್ನು ಜೋಡಿಸುವಂತೆ ಸೂಚನೆ ನೀಡಿದರು. ಜೊತೆಗೆ ನೀರಿನ ಟ್ಯಾಂಕ್ ಗೆ ಅಳವಡಿಸಿದ್ದ ವಿದ್ಯುತ್ ಸಂಪರ್ಕವನ್ನೂ ಮರುಜೋಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅದರಂತೆ ಅಧಿಕಾರಿಗಳು ಸಂಪರ್ಕ ಮರುಜೋಡಣೆ ನಡೆಸಿದರು.

ನಳ್ಳಿಯಲ್ಲಿ ಕಲುಷಿತ ನೀರುಬರುತ್ತಿರುವ ಬಗ್ಗೆ ಕಾಲನಿ ನಿವಾಸಿಗಳು ಕಾರ್ಯನಿರ್ವಹಣಾಧಿಕಾರಿಗೆದೂರು ನೀಡಿದರು. ಈ ವೇಳೆ ನೀರಿನ ಮಾದರಿಯನ್ನು ಪಡೆದುಕೊಂಡು ಪರೀಕ್ಷೆಗೆ ಒಳಪಡಿಸಲಾಗುವುದು. ವರದಿ ಬಂದ ಬಳಿಕ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.
ಈ ವೇಳೆ ಮಾತನಾಡಿದ ಮಂಗಳೂರು ತಾಲೂಕು ಪಂಚಾಯತ್ ಕಾರ್ಯನಿರ್ವಣಾಧಿಕಾರಿ ಮಹೇಶ್ ಹೊಳ್ಳ ಅವರು, ಸದ್ಯ ನೀರಿನ ಬಿಲ್ ಕಟ್ಟದಿರುವ ಕಾರಣಕ್ಕೆ ಕಾನೂನು ಪ್ರಕಾರ ನೀರಿನ ಮೀಟರ್ ನ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು. ಸದ್ಯ ಮರು ವಿದ್ಯುತ್ ಸಂಪರ್ಕ ನೀಡಲಾಗುವುದು. ಬಾಕಿರುವ ವಿದ್ಯುತ್ ಬಿಲ್ ನ ಶೇ.50ನ್ನು ಕಾಲಾವಕಾಶ ಪಡೆದುಕೊಂಡು ಮನೆಯವರು ಭರಿಸಬೇಕು, ಉಳಿದ ಶೇ.50ನ್ನು ಸರಕಾರ ಭರಿಸಲಿದೆ ಎಂದು ಹೇಳಿದರು. ಈ ಮೂಲಕ ಕೊರಗ ಸಮುದಾಯದ ಆರು ಮನೆಗಳ ಕುಡಿಯುವ ನೀರಿನ ಸಂಪರ್ಕವನ್ನು ಕಡಿತಗೊಳಿಸಿದ ಪ್ರಕರಣ ತಾತ್ಕಾಲಿಕವಾಗಿ ಬಗೆಹರಿದಿದೆ.
Discover more from Coastal Times Kannada
Subscribe to get the latest posts sent to your email.







Discussion about this post