ಉಡುಪಿ: ಸಂತೋಷ್ ಪಾಟೀಲ್ ಅನುಮಾನಾಸ್ಪದ ಸಾವಿನ ಪ್ರಕರಣದಲ್ಲಿ ಸಚಿವ ಈಶ್ವರಪ್ಪ, ಬಸವರಾಜ್, ರಮೇಶ್ ಬಂಧನವಾಗುವವರೆಗೂ ಶವ ಕೊಂಡೊಯ್ಯುವುದಿಲ್ಲ, ಮರಣೋತ್ತರ ಪರೀಕ್ಷೆಗೆ ಅವಕಾಶ ನೀಡುವುದಿಲ್ಲ ಎಂದು ಪಟ್ಟುಹಿಡಿದಿದ್ದ ಕುಟುಂಬಸ್ಥರ ಮನವೊಲಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕುಟುಂಬಸ್ಥರ ಆಗಮನ, ಪ್ರಕರಣ ದಾಖಲು, ಪಂಚ ನಾಮೆ ಪ್ರಕ್ರಿಯೆ, ಆರೋಪಿಗಳ ಬಂಧನಕ್ಕೆ ಪಟ್ಟು ಸೇರಿದಂತೆ ಹಲವು ಬೆಳವಣಿಗೆಗಳಿಂದಾಗಿ ಗುತ್ತಿಗೆದಾರ ಸಂತೋಷ್ ಪಾಟೀಲ್ ಮೃತಪಟ್ಟ ಸುಮಾರು 32 ತಾಸುಗಳ ಬಳಿಕ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಯ ಶವಗಾರದಲ್ಲಿ ಬುಧವಾರ ಸಂಜೆ ವೇಳೆ ನೆರವೇರಿಸಲಾಯಿತು.
ಸಂತೋಷ್ ಪಾಟೀಲ್ ಮೃತಪಟ್ಟ ಮಾಹಿತಿ ತಿಳಿದು ಎ.12ರಂದು ಬೆಳಗ್ಗೆ ಕುಟುಂಬಸ್ಥರು ಬೆಂಗಳೂರಿನಿಂದ ಉಡುಪಿಗೆ ಹೊರಟಿದ್ದು, ಕುಟುಂಬಸ್ಥರು ಬರುವವರೆಗೆ ಮೃತದೇಹವನ್ನು ಮುಟ್ಟಬಾರದು ಎಂಬ ಸೂಚನೆ ಹಿನ್ನೆಲೆಯಲ್ಲಿ ರೂಮ್‌ನ್ನು ಪೊಲೀಸರು ಸೀಲ್ ಮಾಡಿದ್ದರು. ರಾತ್ರಿ 11 ಗಂಟೆ ಸುಮಾರಿಗೆ ಸಂತೋಷ್ ಪಾಟೀಲ್ ಸಹೋದರ ಬೆಂಗಳೂರು ವಿ.ಜಿ. ಪುರಂ ಪೊಲೀಸ್ ಠಾಣೆಯ ಇನ್ಸ್‌ಸ್ಪೆಕ್ಟರ್ ಬಸವನ ಗೌಡ ಪಾಟೀಲ್, ಅವರ ಪತ್ನಿ, ಸಹೋದರ ಸಂಬಂಧಿ ಪ್ರಶಾಂತ್ ಪಾಟೀಲ್ ಮತ್ತು ಸುರೇಶ್ ಪಾಟೀಲ್, ಭಾವ ಹಾಗೂ ಇತರರು ಉಡುಪಿಗೆ ಆಗಮಿಸಿದ್ದರು.
ನೇರ ಹೊಟೇಲಿಗೆ ಬಂದಿಳಿದ ಕುಟುಂಬಸ್ಥರು, ಲಾಡ್ಜ್‌ನ ರೂಮಿಗೆ ತೆರಳಿ ಮೃತದೇಹವನ್ನು ವೀಕ್ಷಿಸಿದರು. ಈ ವೇಳೆ ಸಂತೋಷ್ ಪಾಟೀಲ್ ಕೇಸರಿ ಶಾಲು ಧರಿಸಿಯೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ. ಅಲ್ಲಿಂದ ನೇರ ಉಡುಪಿ ನಗರ ಪೊಲೀಸ್ ಠಾಣೆಗೆ ತೆರಳಿದ ಕುಟುಂಬಸ್ಥರು ಈಶ್ವರಪ್ಪ ಸೇರಿದಂತೆ ಮೂವರ ವಿರುದ್ಧ ದೂರು ನೀಡಿದರು.
ಎ.12ರಂದೇ ಉಡುಪಿಗೆ ಆಗಮಿಸಿ ಮೊಕ್ಕಾಂ ಹೂಡಿದ್ದ ಮಂಗಳೂರು ಪ್ರಾದೇಶಿಕ ವಿಧಿ ವಿಜ್ಞಾನ ಪ್ರಯೋಗಾಲಯದ ತಂಡ, ಎ.13ರಂದು ಬೆಳಗ್ಗೆ 8ಗಂಟೆ ಸುಮಾರಿಗೆ ಮಣಿಪಾಲ ಕೆಎಂಸಿ ಆಸ್ಪತ್ರೆಯ ಫಾರೆನ್ಸಿಕ್ ವಿಭಾಗದ ಜೊತೆ ಸೇರಿ ಹೊಟೇಲಿನ ರೂಮ್, ಮೃತದೇಹ ಹಾಗೂ ಮೊಬೈಲ್‌ಗಳ ಪಂಚನಾಮೆ ಪ್ರಕ್ರಿಯೆ ನಡೆಸಿತು. ಈ ಎಲ್ಲ ಪ್ರಕ್ರಿಯೆಯನ್ನು ಕುಟುಂಬಸ್ಥರ ಸಮ್ಮುಖದಲ್ಲೇ ನಡೆಸಲಾಯಿತು.
ಸುಮಾರು ಐದು ತಾಸುಗಳ ಕಾಲ ಈ ಪ್ರಕ್ರಿಯೆ ನಡೆಸಿದ ತಂಡವು ವಿಷದ ಬಾಟಲಿ, ಬೆರಳಚ್ಚು, ಹಲವು ಮಾದರಿ ಹಾಗೂ ಸಾಕ್ಷ್ಯಗಳನ್ನು ಸಂಗ್ರಹಿಸಿತು. ಸಂತೋಷ್ ಪಾಟೀಲ್ ಹಾಗೂ ಗೆಳೆಯರು ಬಂದಿದ್ದ ಹೊಟೇಲ್ ಹೊರಗಡೆ ನಿಲ್ಲಿಸಿದ ಕಾರಿನ ಪಂಚ ನಾಮೆಯನ್ನು ನಡೆಸಲಾಯಿತು. ಕಾರಿನಲ್ಲಿ ದೊರೆತ ಬೆರಳಚ್ಚು, ಐಡಿ, ಬಟ್ಟೆ ಹಾಗೂ ವಿವಿಧ ಮಾದರಿ ಹಾಗೂ ಹಲವು ಸೊತ್ತುಗಳನ್ನು ತಂಡ ವಶಪಡಿಸಿಕೊಂಡಿದೆ.
ಸ್ಥಳದಲ್ಲಿ ಮಂಗಳೂರು ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ, ಉಡುಪಿ ಎಸ್ಪಿ ಎನ್.ವಿಷ್ಣುವರ್ಧನ್, ಹೆಚ್ಚುವರಿ ಎಸ್ಪಿ ಎಸ್.ಟಿ.ಸಿದ್ಧಲಿಂಗಪ್ಪ, ಡಿವೈಎಸ್ಪಿ ಸುಧಾಕರ್ ನಾಯಕ್, ತನಿಖಾಧಿಕಾರಿ ನಗರ ಠಾಣಾ ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್ ಹಾಜರಿದ್ದರು.
ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಮಾತನಾಡಿ, “ತನಿಖೆ ಆಗುತ್ತಿರುವುದರಿಂದ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ. ಪ್ರಕರಣದ ತನಿಖೆ ನಡೆಸುತ್ತೇವೆ. ಶವದ ಮರಣೋತ್ತರ ಪರೀಕ್ಷೆ ಪೂರೈಸಿದ್ದೇವೆ. ಶರೀರವನ್ನು ಕುಟುಂಬಕ್ಕೆ ಹಸ್ತಾಂತರಿಸಿದ್ದೇವೆ” ಎಂದರು.
“ಕುಟುಂಬದವರು ಶವವನ್ನು ಬೆಳಗಾವಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಉಡುಪಿ ಜಿಲ್ಲಾ ಪೊಲೀಸ್ ಬೆಳಗಾವಿವರೆಗೂ ತೆರಳಲಿದ್ದಾರೆ. ರಾತ್ರಿ ಮತ್ತು ಮಳೆಯ ವಾತಾವರಣ ಇರುವುದರಿಂದ ಪೊಲೀಸ್ ಭದ್ರತೆಯಲ್ಲಿ ಕಳುಹಿಸಲಾಗುತ್ತಿದೆ. ಸೂಕ್ತ ತನಿಖೆ ಮಾಡುವುದಾಗಿ ಕುಟುಂಬಕ್ಕೆ ಹೇಳಿದ್ದೇವೆ” ಎಂದು ತಿಳಿಸಿದರು.
ಆರೋಪಿಗಳ ಬಂಧನಕ್ಕೆ ಪಟ್ಟು
ಈ ಮಧ್ಯೆ ಲಾಡ್ಜ್‌ನಿಂದ ಹೊರಗೆ ಬಂದ ಮೃತರ ಕುಟುಂಬಸ್ಥರು, ದೂರಿನಲ್ಲಿ ಹೇಳಲಾಗಿರುವ ಎಲ್ಲ ಆರೋಪಿಗಳನ್ನು ಕೂಡಲೇ ಬಂಧಿಸಬೇಕು, ಅಲ್ಲಿಯ ವರೆಗೆ ಮೃತದೇಹವನ್ನು ಈ ಲಾಡ್ಜ್‌ನಿಂದ ಕೊಂಡೊಯ್ಯಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಇದರಿಂದ ಗೊಂದಲದ ವಾತಾವರಣ ನಿರ್ಮಾಣ ವಾಯಿತು.
ದೂರುದಾರ ಪ್ರಶಾಂತ್ ಪಾಟೀಲ್ ಮಾತನಾಡಿ, ನಾವು ಇಲಾಖೆಯವರಿಗೆ ಸಂಪೂರ್ಣ ಸಹಕಾರ ಕೊಟ್ಟಿದ್ದಾರೆ. ಹಾಗಾಗಿ ಪಂಚನಾಮೆ ಪ್ರಕ್ರಿಯೆಗಳು ಪೂರ್ಣಗೊಂಡಿವೆ. ನಾವು ನೀಡಿದ ಸಹಕಾರದಂತೆ ಇಲಾಖೆಯವರು ಕೂಡ ನಮಗೆ ಸಹಕಾರ ನೀಡಿ ಆರೋಪಿಗಳನ್ನು ಬಂಧಿಸಬೇಕು. ಅಲ್ಲಿಯವರೆಗೆ ಈ ಲಾಡ್ಜ್‌ನಿಂದ ಮೃತದೇಹ ಹೊರಗೆ ಹೋಗುವುದಿಲ್ಲ. ನನ್ನ ತಮ್ಮನಿಗೆ ನ್ಯಾಯ ಸಿಗುವುದು ನಮಗೆ ಮುಖ್ಯ ಎಂದರು.