ಮಂಗಳೂರು, ಮೇ 13: ರಾಜ್ಯದಲ್ಲಿ ಕಾಂಗ್ರೆಸ್ ಸ್ಪಷ್ಟವಾದ ಬಹುಮತದೊಂದಿಗೆ ಅಧಿಕಾರ ಹಿಡಿದರೂ, ದ.ಕ.ಜಿಲ್ಲೆಯ ಜನತೆ ಕಾಂಗ್ರೆಸ್‌ನ ಗ್ಯಾರಂಟಿಯನ್ನು ತಿರಸ್ಕರಿಸಿದ್ದಾರೆ ಎಂದು ಮಂಗಳೂರು ನಗರ ದಕ್ಷಿಣ ಕೇತ್ರದಿಂದ ಭಾರತೀಯ ಜನತಾ ಪಕ್ಷದಿಂದ ಸತತ ಎರಡನೇ ಬಾರಿಗೆ ವಿಧಾನ ಸಭೆಗೆ ಆಯ್ಕೆಯಾಗಿರುವ ವೇದವ್ಯಾಸ ಕಾಮತ್ ಅಭಿಪ್ರಾಯಪಟ್ಟಿದ್ದಾರೆ.
2013ರಲ್ಲಿ ಕಾಂಗ್ರೆಸ್ ನೀಡಿದ್ದ ಭರಸೆಗಳನ್ನು ಈಡೇರಿಸಲಿಲ್ಲ. ಈ ಬಾರಿಯೂ ಅವರು ನೀಡಿರುವ ಭರವಸೆಗಳನ್ನು ಶೇ.100ರಷ್ಟು ಈಡೇರಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ನೀಡಿರುವ ಭರವಸೆಗಳನ್ನು ಅನುಷ್ಠಾನಗೊಳಿಸಲು ಶ್ರಮಿಸಲಿ ನಾವು ಅದಕ್ಕೆ ಪೂರ್ಣ ಸಹಕಾರ ನೀಡುತ್ತೇನೆ ಎಂದು ಹೇಳಿದ್ದಾರೆ.
ಈ ಸಲವೂ ‘ಹಿಂದುತ್ವ’ಕ್ಕೆ ಮಣೆ ಹಾಕಿರುವ ಇಲ್ಲಿನ ಮತದಾರರು ಕಾಂಗ್ರೆಸ್ ಪಕ್ಷದ ‘ಗ್ಯಾರಂಟಿ’ ಯೋಜನೆಗಳಿಗೆ ಸೊಪ್ಪು ಹಾಕಿಲ್ಲ. ಜಿಲ್ಲೆಯಲ್ಲಿ ಗಟ್ಟಿಯಾಗಿ ಬೇರೂರಿರುವ ‘ಹಿಂದುತ್ವವಾದ’ ಸಿದ್ಧಾಂತಕ್ಕೆ ಸ್ವತಃ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹಸಚಿವ ಅಮಿತ್ ಶಾ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಅವರ ಚುನಾವಣಾ ಪ್ರಚಾರ ಮತ್ತಷ್ಟು ನೀರೆದಿರುವುದು ಜಿಲ್ಲೆಯ ಚುನಾವಣಾ ಫಲಿತಾಂಶದಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದೆ.
ಆಡಳಿತ ವಿರೋಧಿ ಅಲೆಯ ಮುನ್ಸೂಚನೆ ಸಿಗುತ್ತಲೇ ಬಿಜೆಪಿಯವರು ಕರಾವಳಿಯ ತಮ್ಮ ಕೋಟೆಯನ್ನು ಉಳಿಸಿಕೊಳ್ಳಲು ಕಾರ್ಯತಂತ್ರ ಹೆಣೆದಿದ್ದರು. ಹಾಲಿ ಶಾಸಕರ ಕಾರ್ಯವೈಖರಿ ಕುರಿತು ಮತದಾರರಿಂದಲೇ ವಿರೋಧ ವ್ಯಕ್ತವಾಗಿದ್ದ ಪುತ್ತೂರು ಮತ್ತು ಸುಳ್ಯ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಬದಲಾಯಿಸುವ ಮೂಲಕ ಅವರ ಕೋಪ ಶಮನ ಮಾಡುವ ಪ್ರಯತ್ನ ಮಾಡಿದ್ದರು. ಸುಳ್ಯದಲ್ಲಿ ಈ ತಂತ್ರ ಬಿಜೆಪಿಯ ಕೈ ಹಿಡಿದಿದೆ. ಆದರೆ ಪುತ್ತೂರಿನಲ್ಲಿ ಅಭ್ಯರ್ಥಿ ಆಯ್ಕೆಯಲ್ಲಿ ಆದ ಎಡವಟ್ಟಿನಿಂದಾಗಿ ಜಿಲ್ಲೆಯಲ್ಲಿ ಈ ಕ್ಷೇತ್ರದಲ್ಲಿ ಅರಳುವುದರಲ್ಲಿದ್ದ ‘ತಾವರೆ’ಯನ್ನು ಅವರ ಕಾರ್ಯಕರ್ತರೇ ‘ಬ್ಯಾಟ್’ನಿಂಧ ಧ್ವಂಸಗೊಳಿಸಿದ್ದಾರೆ.
ಮಂಗಳೂರು ಉತ್ತರ ಕ್ಷೇತ್ರದಲ್ಲಿ ಅಂತಿಮ ದಿನದವರೆಗೂ ಅಭ್ಯರ್ಥಿಯನ್ನು ಘೋಷಣೆ ಮಾಡದ ಕಾಂಗ್ರೆಸ್, ಈ ಕ್ಷೇತ್ರದಲ್ಲಿ ಎದುರಾಳಿ ಅಭ್ಯರ್ಥಿ ಭಾರಿ ಅಂತರದ ಹಾಗೂ ನಿರಾಯಸದ ಗೆಲುವು ದಕ್ಕಿಸಿಕೊಳ್ಳುವುದಕ್ಕೆ ಎಲ್ಲ ಅವಕಾಶಗಳನ್ನು ಒದಗಿಸಿಕೊಟ್ಟಿತು.
‘ಬಜರಂಗದಳ ನಿಷೇಧದ ಕುರಿತು ಪ್ರಣಾಳಿಕೆಯಲ್ಲಿ ಉಲ್ಲೇಖ ಮಾಡಿದ್ದು ಕೂಡಾ ಜಿಲ್ಲೆಯಲ್ಲಿ ಪಕ್ಷದ ಅಭ್ಯರ್ಥಿಗಳಿಗೆ ಹೊಡೆತ ನೀಡಿತು’ ‘ಬಿಜೆಪಿ ಬಗ್ಗೆ ಅಸಮಾಧಾನವಿದ್ದ ಅನೇಕರು ಕಾಂಗ್ರೆಸ್‌ನತ್ತ ವಾಲಿದ್ದರು. ಅವರ ಮತ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಸಿಗುವ ಸಾಧ್ಯತೆಯೂ ಇತ್ತು. ಆದರೆ, ಪಕ್ಷದ ಪ್ರಣಾಳಿಕೆಯಲ್ಲಿ ಬಜರಂಗ ದಳದ ನಿಷೇಧದ ಬಗ್ಗೆ ಉಲ್ಲೇಖಿಸಿದ ಬಗ್ಗೆ ಅನೇಕರು ನಮ್ಮ ಬಳಿ ಅಸಮಾಧಾನ ತೋಡಿಕೊಂಡಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post