ಸುಳ್ಯ, ಜು 14 : ಸುಳ್ಯ ವಿಧಾನಸಭಾ ಕ್ಷೇತ್ರ ದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಲಿನ ಕುರಿತು ಕಡಬ ಬ್ಲಾಕ್‌ನ ಕಡಬದಲ್ಲಿ ನಡೆದ ಪರಾಮರ್ಶೆ ಸಭೆಯಲ್ಲಿ ಜಿ.ಕೃಷ್ಣಪ್ಪ ಹಾಗೂ ನಂದಕುಮಾರ್ ಬಣದ ನಡುವೆ ಮಾರಾಮಾರಿ ನಡೆದಿರುವ ಘಟನೆ ವರದಿಯಾಗಿದೆ.
ಕಡಬದ ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಪಕ್ಷದ ಸೋಲಿನ ಬಗ್ಗೆ ಪರಾಮರ್ಶೆ ಸಭೆ ನಡೆದಿತ್ತು. ಸೋಲಿನ ಕುರಿತು ಚರ್ಚಿಸಲು ಜಿಲ್ಲಾ ಪರಾಮರ್ಶೆ ಸಮಿತಿಯ ಅಧ್ಯಕ್ಷರಾಗಿ ಮಾಜಿ ರಾಜ್ಯಸಭೆ ಸದಸ್ಯ ಬಿ.ಇಬ್ರಾಹಿಂ, ಬಂಟ್ವಾಳದ ಕೆಪಿಸಿಸಿ ಸದಸ್ಯ ಅಶ್ವಿನ್ ಕುಮಾರ್ ರೈ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಮಾಜಿ ಜಿಪಂ ಸದಸ್ಯೆ ಮಮತಾ ಗಟ್ಟಿ ಸಭೆಗೆ ಬಂದಿದ್ದರು. ಸಭೆಯ ಆರಂಭದಲ್ಲಿ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ, ವೈಯಕ್ತಿಕ ವಿಚಾರಗಳನ್ನು ಬದಿಗಿಟ್ಟು ಪಕ್ಷದ ಸೋಲಿನ ಬಗ್ಗೆ ಮಾತ್ರ ಅಭಿಪ್ರಾಯ ಮಂಡನೆ ಮಾಡಬೇಕೆಂದು ಹೇಳಿದರು.
ಇದೇ ವೇಳೆ, ಚುನಾವಣೆ ಸಂದರ್ಭದಲ್ಲಿ ನಂದಕುಮಾರ್ ಪರವಾಗಿದ್ದವರು ತಮ್ಮ ಅಭಿಪ್ರಾಯ ಹೇಳಲು ಮುಂದಾಗಿದ್ದಾರೆ. ಆದರೆ, ಭರತ್ ಮುಂಡೋಡಿ ಮತ್ತು ಪರಾಜಿತ ಅಭ್ಯರ್ಥಿ ಕೃಷ್ಣಪ್ಪ, ನಿಮ್ಮನ್ನು ಯಾರ್ರೀ ಸಭೆಗೆ ಬರಲು ಹೇಳಿದ್ದು, ನೀವು ಸಭೆಗೆ ಹೇಗೆ ಬಂದ್ರಿ. ನಿಮ್ಮನ್ನು ಉಚ್ಚಾಟನೆ ಮಾಡಿದ್ದೀವಲ್ಲಾ.. ನಿಮಗೆ ಮಾನ ಮರ್ಯಾದೆ ಇದೆಯಾ ಎಂದು ರೇಗುತ್ತಾ ಎದ್ದು ಬಂದಿದ್ದಾರೆ. ಇದಕ್ಕೆ ಬಾಲಕೃಷ್ಣ ಬಳ್ಳೇರಿ, ಗೋಕುಲದಾಸ್ ಸೇರಿದಂತೆ ವಿರುದ್ಧವಾಗಿ ಮಾತನಾಡಿದ್ದು, ನಮ್ಮನ್ನು ಯಾರೂ ಉಚ್ಚಾಟನೆ ಮಾಡಿಲ್ಲ. ಅಮಾನತು ಮಾಡಿದ್ದು ಅಷ್ಟೇ, ನಾವು ಈಗಲೂ ಕಾಂಗ್ರೆಸ್ ಕಾರ್ಯಕರ್ತರಾಗಿಯೇ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.ಈ ವೇಳೆ ಉಭಯ ತಂಡಗಳ ನಡುವೆ ಮಾತಿನ ಚಕಮಕಿ, ನೂಕಾಟ, ತಳ್ಳಾಟ, ಹಲ್ಲೆ ನಡೆಯುವ ತನಕ ತಲುಪಿದ್ದು, ಮಾಹಿತಿ ಪಡೆದ ಪೋಲಿಸರ ಮಧ್ಯಪ್ರವೇಶಿಸಿದ್ದಾರೆ.
ಇನ್ನು ಕೃಷ್ಣಪ್ಪ ಬಣದ ಕೆಲವು ಮಂದಿ ಮುಖಂಡರು ನಂದ ಕುಮಾರ್ ಬಣದ ಮಹಿಳಾ ಮುಖಂಡರೋರ್ವರು ಸೇರಿದಂತೆ ನಾಲ್ಕು ಮಂದಿಯ ಮೇಲೆ ಹಲ್ಲೆ ನಡೆಸಿದ್ದಾರೆಂಬ ಆರೋಪವೂ ವ್ಯಕ್ತವಾಗಿದೆ. ಈ ಕುರಿತ ವಿಡೀಯೋಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ನಂದಕುಮಾರ್ ಬಣದ ಮುಖಂಡರೋರ್ವರನ್ನು ಎಳೆದಾಡಿಕೊಂಡು ಹೋಗಿ ಹಲ್ಲೆ ನಡೆಸಲಾಗಿದೆ ಎಂಬ ಮಾಹಿತಿ ಕೂಡ ಲಭ್ಯವಾಗಿದೆ.
Discover more from Coastal Times Kannada
Subscribe to get the latest posts sent to your email.
Discussion about this post