ತಿರುವನಂತಪುರ: 2010ರಲ್ಲಿ ಕೇರಳದ ಪ್ರೊಫೆಸರ್ ಕೈ ಕತ್ತರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಆರೋಪಿಗಳ ಪೈಕಿ ಮೂವರಿಗೆ ಎನ್‌ಐಎ ವಿಶೇಷ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ. ಶಿಕ್ಷೆಗೊಳಗಾದ ಅಪರಾಧಿಗಳು ಈಗ ನಿಷೇಧಕ್ಕೊಳಗಾಗಿರುವ ಇಸ್ಲಾಂ ಮೂಲಭೂತ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ(ಪಿಎಫ್ಐ) ಶಂಕಿತ ಕಾರ್ಯಕರ್ತರಾಗಿದ್ದರು. ಜುಲೈ 4,2010ರಲ್ಲಿ ಇಡುಕ್ಕಿ ಜಿಲ್ಲೆಯ ತೊಡುಪುಳದ ನ್ಯೂಮನ್ ಕಾಲೇಜಿನ ಪ್ರೊಫೆಸರ್ ಟಿ.ಜೆ. ಜೋಸೆಫ್ ಅವರ ಬಲಗೈಯನ್ನು ಶಂಕಿತ ಪಿಎಫ್‌ಐ ಕಾರ್ಯಕರ್ತರು ಕತ್ತರಿಸಿದ್ದರು.
ಅಪರಾಧಿಗಳೆಂದು ಸಾಬೀತಾದ ಸಾಜಿಲ್, ನಜರ್ ಮತ್ತು ನಜೀಬ್ ಅವರಿಗೆ ಎನ್‌ಐಎ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಅನಿಲ್ ಎಸ್ ಭಾಸ್ಕರ್ ಶಿಕ್ಷೆ ವಿಧಿಸಿದ್ದಾರೆ. ಕಾನೂನು ಬಾಹಿರ ಚಟುವಟಿಕೆ ನಿಷೇಧ ಕಾಯ್ದೆ(ಯುಎಪಿಎ), ಭಾರತೀಯ ದಂಡ ಸಂಹಿತೆ ಮತ್ತು ಸ್ಫೋಟಕ ವಸ್ತುಗಳ ಕಾಯ್ದೆ ಅನ್ವಯ ತಪ್ಪಿತಸ್ಥರೆಂದು ಎರಡನೇ ಹಂತದ ತನಿಖೆಯಲ್ಲಿ ದೃಢಪಟ್ಟಿದೆ ಎಂದು ಬುಧವಾರ ಎನ್‌ಐಎ ಕೋರ್ಟ್ ತೀರ್ಪು ನೀಡಿತ್ತು.
ಎರ್ನಾಕುಲಂ ಜಿಲ್ಲೆಯ ಮುವಾಟ್ಟುಪುಳದಲ್ಲಿ ಭಾನುವಾರ ಚರ್ಚ್‌ನಲ್ಲಿ ಕುಟುಂಬದ ಜೊತೆ ಪ್ರಾರ್ಥನೆ ಸಲ್ಲಿಸಿ ಕುಟುಂಬದ ಜೊತೆ ಹಿಂದಿರುಗುತ್ತಿದ್ದಾಗ ಪ್ರೊಫೆಸರ್ ಮೇಲೆ ದಾಳಿ ನಡೆದಿತ್ತು. ಪ್ರೊಫೆಸರ್ ಅವರನ್ನು ವಾಹನದಿಂದ ಹೊರಗೆಳೆದ 7 ಮಂದಿಯ ಗುಂಪು ಕೈಕತ್ತರಿಸಿತ್ತು. ಕೈಕತ್ತರಿಸಿದ ಪ್ರಮುಖ ಆರೋಪಿ ಸವಾದ್ ಈಗಲೂ ತಲೆಮರೆಸಿಕೊಂಡಿದ್ದಾನೆ.
ಏನಿದು ಪ್ರಕರಣ : ಕಾಲೇಜಿನಲ್ಲಿ ನಡೆದ ಆಂತರಿಕ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ಪ್ರವಾದಿಯನ್ನು ಅವಮಾನಿಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ 2010ರ ಜುಲೈ 4 ರಂದು ತೊಡುಪುಳದ ನ್ಯೂಮನ್ ಕಾಲೇಜಿನ ಪ್ರೊಫೆಸರ್ ಟಿಜೆ ಜೋಸೆಫ್ ( T J Joseph ) ಅವರ ಮೇಲೆ ದಾಳಿ ನಡೆದಿತ್ತು. ಶಸ್ತ್ರ ಸಜ್ಜಿತರಾಗಿಯೇ ಆಯುಧ ಮತ್ತು ಸ್ಫೋಟಕ ಸಾಮಗ್ರಿಗಳೊಂದಿಗೆ ಕಾರಿನಲ್ಲಿ ಬಂದಿದ್ದ ಪಿಎಫ್‌ಐ ಕಾರ್ಯಕರ್ತರು ಜೋಸೆಫ್ ಅವರ ಕಾರನ್ನು ತಡೆದು ನಿಲ್ಲಿಸಿದ್ದರು. ಬಳಿಕ ಕಾರಿನಿಂದ ಜೋಸೆಫ್ ಅವರನ್ನು ಹೊರಗಡೆ ಎಳೆದು ಕೊಡಲಿಯಿಂದ ಬಲಗೈಯನ್ನು ಕತ್ತರಿಸಿ ಹತ್ಯೆಗೆ ಯತ್ನಿಸಿ ಎಡಗೈಯನ್ನು ಕತ್ತರಿಸಿದ್ದರು. ಈ ಸಂದರ್ಭದಲ್ಲಿ ಜೋಸೆಫ್ ಅವರ ಸಹೋದರಿ ಕೃತ್ಯವನ್ನು ತಡೆಯಲು ಮುಂದಾದಾಗ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕಾರನ್ನು ಜಖಂಗೊಳಿಸಿ ಪರಾರಿಯಾಗಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post