ಉಳ್ಳಾಲ, ಜು.13 : ರಾಜ್ಯದಾದ್ಯಂತ ಪ್ರಾದೇಶಿಕ/ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ ನಿರ್ಮಾಣ ನಡೆಯುತ್ತಿದ್ದು, ಹಲವೆಡೆ ಕಟ್ಟಡ ಕಾಮಗಾರಿ ಸಂಪೂರ್ಣಗೊಂಡರೆ, ಇನ್ನು ಕೆಲವೆಡೆ ಪ್ರಗತಿಯಲ್ಲಿವೆ. ರಾಜ್ಯದ ಸಾರಿಗೆ ಇಲಾಖೆಯ ಪ್ರತಿ ಅಧೀನ ಕಚೇರಿಗೂ ಸ್ವಯಂಚಾಲಿತ ಚಾಲನಾ ಪರೀಕ್ಷಾ ಪಥ ನಿರ್ಮಿಸುವ ಉದ್ದೇಶದಡಿ, ರಾಜ್ಯದ ಏಳು ಕಡೆಗಳಲ್ಲಿ ಅತ್ಯಾಧುನಿಕ ಸ್ವಯಂಚಾಲಿತ ಚಾಲನಾ ಪರೀಕ್ಷಾ ಪಥಗಳನ್ನು ನಿರ್ಮಿಸಲಾಗಿದ್ದು, ಪ್ರಸ್ತುತ ಅವು ಕಾರ್ಯ ನಿರ್ವಹಿಸುತ್ತಿವೆ. ಅದೇ ಮಾದರಿಯಲ್ಲಿ ಮಂಗಳೂರಿನಲ್ಲೂ 7.5 ಕೋಟಿ ವೆಚ್ಚದಲ್ಲಿ ಸ್ವಯಂಚಾಲಿತ ಚಾಲನಾ ಪರೀಕ್ಷಾ ಪಥ ನಿರ್ಮಿಸಲಾಗಿದ್ದು ದೇಶದಲ್ಲೇ ಅತೀ ಹೆಚ್ಚು ಡ್ರೈವಿಂಗ್ ಟ್ರಾಕ್ ಇರೋ ರಾಜ್ಯ ನಮ್ಮದಾಗಿದೆ ಎಂದು ರಾಜ್ಯ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಹೇಳಿದರು.

ದಕ್ಷಿಣ ಕನ್ನಡ ಸಾರಿಗೆ ಇಲಾಖೆಯಿಂದ ಪಜೀರು ಗ್ರಾಮದ ಕಂಬಳಪದವಿನಲ್ಲಿ ನಿರ್ಮಾಣಗೊಂಡಿರುವ ವಿದ್ಯುನ್ಮಾನ ವಾಹನ ಚಾಲನಾ ಪರೀಕ್ಷಾ ಪಥಗಳ ಕೇಂದ್ರವನ್ನು ಭಾನುವಾರ ಅವರು ಉದ್ಘಾಟಿಸಿ ಮಾತನಾಡಿದರು. ಪ್ರಾದೇಶಿಕ/ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು ಮೂವತ್ತಾರು ಕೋಟಿ ವೆಚ್ಚದಲ್ಲಿ ಧಾರವಾಡ ಪೂರ್ವ, ಕೊಪ್ಪಳ, ಚಿಂತಾಮಣಿ, ಶಿರಸಿ, ದಾಂಡೇಲಿ, ಭಾಲ್ಕಿ ಸೇರಿದಂತೆ ಒಟ್ಟು ಆರು ಕಡೆಗಳಲ್ಲಿ ಕಟ್ಟಡ ಕಾಮಗಾರಿ ಸಂಪೂರ್ಣಗೊಂಡಿದೆ. ಬೀದರ್, ಕಲಬುರಗಿ, ಯಾದಗಿರಿ, ಚಂದಾಪುರ, ಕೆಜಿಎಫ್ ಮತ್ತು ಬೆಳಗಾವಿ ಸೇರಿದಂತೆ ಒಟ್ಟು ಆರು ಕಡೆಗಳಲ್ಲಿ ಒಟ್ಟು ನಲ್ವತ್ತೆರಡು ಕೋಟಿ ರೂಪಾಯಿ ವೆಚ್ಚದ ಕಾಮಗಾರಿ ಪ್ರಗತಿಯಲ್ಲಿದೆ. ಇಪ್ಪತ್ತೆಂಟು ಕೋಟಿ ರೂಪಾಯಿ ವೆಚ್ಚದಲ್ಲಿ ರಾಣೆ ಬೆನ್ನೂರು, ಗೋಕಾಕ್, ಸಕಲೇಶಪುರ ಕಚೇರಿ ಕಟ್ಟಡ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಮಧುಗಿರಿ ಮತ್ತು ಹೊನ್ನಾವರ ಕಚೇರಿ ಕಟ್ಟಡದ ಕಾಮಗಾರಿಗಳನ್ನ ಶೀಘ್ರ ಪಾರಂಭಿಸಲಾಗುವುದೆಂದರು. ರಾಜ್ಯದ ಬೆಂಗಳೂರು, ಮಂಗಳೂರು ಸೇರಿದಂತೆ ಎಂಟು ನಗರಕ್ಕೆ ಕೇಂದ್ರದಿಂದ ತಲಾ ನೂರು ಇಲೆಕ್ಟ್ರಿಕ್ ಬಸ್ಸುಗಳು ಮಂಜೂರಾಗಿದ್ದು ಬಸ್ಸುಗಳ ನಿರ್ವಹಣೆಗೆ ನಮಗೆ ಡಿಪೋಗಳ ಅಗತ್ಯವಿದೆ. ಮಂಗಳೂರಿನಲ್ಲಿ ಜಾಗ ಕೊಟ್ಟರೆ ಡಿಪೋಗಳನ್ನ ಇಲಾಖೆಯಿಂದ ನಿರ್ಮಿಸಿಕೊಡುತ್ತೇವೆಂದರು.


ಸ್ಪೀಕರ್ ಯು.ಟಿ.ಖಾದರ್ ಮಾತನಾಡಿ ವಿದ್ಯುನ್ಮಾನ ವಾಹನ ಚಾಲನಾ ಪಥ ನಿರ್ಮಾಣವು ಪರೋಕ್ಷವಾಗಿ ಕ್ಷೇತ್ರದ ಅಭಿವೃದ್ಧಿಗೆ ಪೂರಕ ಯೋಜನೆಯಾಗಿದೆ. ಜಿಲ್ಲೆಯ ಯಾವುದೇ ಮೂಲೆಯ ಜನರೂ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಇನ್ನು ಮುಂದೆ ಇಲ್ಲಿಗೆ ಬರಲೇಬೇಕು. ಜನರು ಇಲ್ಲಿಗೆ ಬರೋದರಿಂದ ಆರ್ಥಿಕ ಚಲನವಲನ ಹೆಚ್ಚಾಗಿ ಹೊಸ ಉದ್ಯಮಗಳೂ ಹುಟ್ಟಿಕೊಳ್ಳುತ್ತವೆ. ಹೊಸ ಕೇಂದ್ರದಲ್ಲಿ ಉದ್ಯೋಗಾವಕಾಶ ಇದ್ದರೆ ಅಧಿಕಾರಿಗಳು ಮೊದಲಿಗೆ ಊರವರನ್ನ ಪರಿಗಣಿಸಬೇಕು. ಮೊನ್ನೆಯಷ್ಟೇ ಉಳ್ಳಾಲದಲ್ಲಿ ಅಗ್ನಿಶಾಮಕ ಠಾಣೆ ನಿರ್ಮಾಣಕ್ಕೆ ಗೃಹ ಸಚಿವರಿಂದ ಶಿಲಾನ್ಯಾಸ ನೆರವೇರಿಸಲಾಗಿದೆ. ಮುಂದಿನ ದಿನಗಳಲ್ಲಿ ಬ್ಯಾರಿ ಭವನ ಮತ್ತು ಅಬ್ಬಕ್ಕ ಭವನ ನಿರ್ಮಾಣಕ್ಕೂ ಶೀಘ್ರದಲ್ಲೇ ಚಾಲನೆ ನೀಡಲಾಗುವುದೆಂದರು.
ಸಂಸದ ಕ್ಯಾ.ಬ್ರಿಜೇಶ್ ಚೌಟ, ಮಾಜಿ ಸಚಿವ ಅಭಯಚಂದ್ರ ಜೈನ್, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿಎಸ್ ಗಟ್ಟಿ, ಪಜೀರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಹಮ್ಮದ್ ರಫೀಕ್ ಮೊದಲಾದವರು ಉಪಸ್ಥಿತರಿದ್ದರು.
Discover more from Coastal Times Kannada
Subscribe to get the latest posts sent to your email.








Discussion about this post