ಬೆಂಗಳೂರು: ರಾಜಧಾನಿಯಲ್ಲಿ ಜಾಮೀನು ಮಾಫಿಯಾ ಸಕ್ರಿಯವಾಗಿದೆ. ನಕಲಿ ದಾಖಲಾತಿ ಸಲ್ಲಿಸಿ ಆರೋಪಿಗಳಿಗೆ ಜಾಮೀನು ನೀಡುತ್ತಿದ್ದ 13 ಮಂದಿ ನಕಲಿ ಜಾಮೀನುದಾರರನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಗರದ ಮ್ಯಾಜಿಸ್ಟ್ರೇಟ್, ಸಿಟಿ ಸಿವಿಲ್ ಸೇರಿದಂತೆ ಇನ್ನಿತರ ನ್ಯಾಯಾಲಯಗಳಿಗೆ ನಕಲಿ ದಾಖಲಾತಿ ನೀಡಿ ಆರೋಪಿಗಳಿಗೆ ಜಾಮೀನುದಾರರಾಗಿದ್ದ ಮಂಜುನಾಥ್, ಆನಂದ್, ಇಂದ್ರೇಶ್, ದೊಡ್ಡಯ್ಯ, ಚಂದ್ರಶೇಖರ್, ಸಂತೋಷ್ ಕುಮಾರ್, ದಾದಾ ಹಯಾತ್ ಖಲಂದರ್, ಸ್ವರೂಪ್, ಮನೋಜ್, ಆನಂದ್ ಕುಮಾರ್, ಕೆಂಪೇಗೌಡ ಹಾಗೂ ವಿನಾಯಕ್ ಎಂಬವರನ್ನು ಬಂಧಿಸಲಾಗಿದೆ.
ಇವರಿಂದ 139 ವಿವಿಧ ಹೆಸರುಗಳು ಹಾಗೂ ಆಧಾರ್ ಕಾರ್ಡ್ಗಳು, 43 ಪಡಿತರ ಚೀಟಿ, 16 ಪ್ಯಾನ್ ಕಾರ್ಡ್, ವಿವಿಧ ಹೆಸರಿನ 35 ಜಮೀನಿನ ಪಹಣಿ ಪತ್ರ, ಮ್ಯೂಟೇಷನ್ ಪ್ರತಿಗಳು ಹಾಗೂ 13 ಮೊಬೈಲ್ ಫೋನ್ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಕೃತ್ಯದಲ್ಲಿ ಹಲವರು ಭಾಗಿಯಾಗಿದ್ದು, ಶೋಧ ಕಾರ್ಯ ಮುಂದುವರೆಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ನಗರದ ನೃಪತುಂಗ ರಸ್ತೆಯಲ್ಲಿರುವ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಈ ಆರೋಪಿಗಳು ನಕಲಿ ದಾಖಲಾತಿ ಇಟ್ಟುಕೊಂಡು ಶ್ಯೂರಿಟಿ ನೀಡಲು ಮುಂದಾಗಿದ್ದರು. ಖಚಿತ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ತೆರಳಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ, ನಕಲಿ ಜಾಮೀನು ಮಾಫಿಯಾ ಬೆಳಕಿಗೆ ಬಂದಿದೆ.
Discover more from Coastal Times Kannada
Subscribe to get the latest posts sent to your email.
Discussion about this post