ಪಾಲಕ್ಕಾಡ್, ಡಿ 13: ಕೇರಳದ ಪಾಲಕ್ಕಾಡ್ ಜಿಲ್ಲೆಯ ಕಲ್ಲಡಿಕೋಡ್ ನಲ್ಲಿ ಲಾರಿ ಪಲ್ಟಿಯಾಗಿ ಶಾಲೆ ಬಿಟ್ಟು ಮೆನೆಗೆ ತೆರಳುತ್ತಿದ್ದ ವಿದ್ಯಾರ್ಥಿನಿಯರ ಮೇಲೆ ಬಿದ್ದ ಪರಿಣಾಮ 8ನೇ ತರಗತಿಯ ನಾಲ್ವರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಪಾಲಕ್ಕಾಡ್-ಕೋಝಿಕೋಡ್ ರಾಷ್ಟ್ರೀಯ ಹೆದ್ದಾರಿಯ ಪನಯಂಪದಂನಲ್ಲಿ ಗುರುವಾರ ಸಂಜೆ 4.15 ರ ಸುಮಾರಿಗೆ ಈ ಘಟನೆ ನಡೆದಿದೆ. ಅಪಘಾತದಲ್ಲಿ ಕರಿಂಬದ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ 8ನೇ ತರಗತಿಯ ವಿದ್ಯಾರ್ಥಿನಿಯರಾದ ಇರ್ಫಾನಾ ಶೆರಿನ್ ಪಿ ಎ, ರಿಧಾ ಫಾತಿಮಾ, ನಿಧಾ ಫಾತಿಮಾ ಕೆ ಎಂ ಮತ್ತು ಆಯಿಷಾ ಎ ಎಸ್ ಮೃತಪಟ್ಟಿದ್ದಾರೆ.
ಐವರು ವಿದ್ಯಾರ್ಥಿಗಳು ಪರೀಕ್ಷೆ ಮುಗಿಸಿ ಮನೆಗೆ ಹೋಗಲು ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದರು. ಸಿಮೆಂಟ್ ಸಾಗಿಸುತ್ತಿದ್ದ ಲಾರಿ ನಿಯಂತ್ರಣ ತಪ್ಪಿ ಪಲ್ಟಿಯಾಗಿ ವಿದ್ಯಾರ್ಥಿಗಳ ಮೇಲೆ ಬಿದ್ದ ಕಾರಣ ಅವಘಡ ಸಂಭವಿಸಿದೆ. ಮೂವರು ಬಾಲಕಿಯರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇಬ್ಬರು ಬಾಲಕಿಯರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದರಲ್ಲಿ ಓರ್ವ ಬಾಲಕಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದು, ಮತ್ತೋರ್ವ ವಿದ್ಯಾರ್ಥಿನಿಯ ಸ್ಥಿತಿ ಚಿಂತಾಜನಕವಾಗಿದೆ.
ಲಾರಿ ಚಾಲಕ ಮತ್ತು ಕ್ಲೀನರ್ ಗೂ ಸಣ್ಣಪುಟ್ಟ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಸೂಕ್ತ ತನಿಖೆಯ ನಂತರವಷ್ಟೇ ಅಪಘಾತಕ್ಕೆ ಕಾರಣ ತಿಳಿಯಬಹುದು ಎಂದು ಪೊಲೀಸರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಘಟನೆಯ ಬಗ್ಗೆ ಸಂತಾಪ ವ್ಯಕ್ತಪಡಿಸಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಇದು ಆಘಾತಕಾರಿ ಮತ್ತು ದುರಂತ ಎಂದು ಬಣ್ಣಿಸಿದ್ದಾರೆ. “ಗಾಯಗೊಂಡ ಎಲ್ಲಾ ಮಕ್ಕಳಿಗೆ ತುರ್ತು ಚಿಕಿತ್ಸೆ ನೀಡಲು ಸರ್ಕಾರವು ಬದ್ಧವಾಗಿದೆ. ಅಪಘಾತದ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಿ ಅಗತ್ಯ ಕ್ರಮಕೈಗೊಳ್ಳಲಾಗುವುದು. ಮೃತ ಮಕ್ಕಳ ಸಂಬಂಧಿಕರು ಮತ್ತು ಸ್ನೇಹಿತರಿಗೆ ಸಂತಾಪಗಳು ಎಂದು ತಿಳಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post